ಸಂಸತ್ ಕಲಾಪ ಆರಂಭವಾಗಿ ಐದು ದಿನಗಳಾದರೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕಾಣಿಸಿಕೊಳ್ಳದೇ ಇರುವುದರ ಹಿಂದಿನ ಕಾರಣ ಬಹಿರಂಗವಾಗಿದೆ.
ಸೋನಿಯಾ ತಾಯಿ ಪಾವ್ಲಾ ಮೈನೋ (85) ಆರೋಗ್ಯ ಹದಗೆಟ್ಟಿದ್ದು, ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರ ಕ್ಷೇಮ ಸಮಾಚಾರ ವಿಚಾರಿಸಲು ಮಗಳು ಸೋನಿಯಾ (ಎಡ್ವಿಜ್ ಅಂಟೋನಿಯಾ ಅಲ್ಬಿನಾ ಮೈನೋ) ಮತ್ತು ಮೊಮ್ಮಗ ರಾಹುಲ್ ಅಮೆರಿಕಾಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ.
ಇದೇ ಕಾರಣದಿಂದ ಭಾರತ ಭೇಟಿಯಲ್ಲಿರುವ ಬ್ರಿಟನ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ಅವರನ್ನೂ ಸೋನಿಯಾ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ರಾಹುಲ್ - ಕ್ಯಾಮರೂನ್ ಭೇಟಿಗೆ ನಿಗದಿಪಡಿಸಲಾಗಿದ್ದ ಸಮಯವನ್ನೂ ಇದೀಗ ರದ್ದುಪಡಿಸಲಾಗಿದೆ.
'ಗಾಂಧಿ' ಕುಟುಂಬದ ಮೂಲಗಳ ಪ್ರಕಾರ ತುರ್ತು ಸಂದೇಶದ ಹಿನ್ನೆಲೆಯಲ್ಲಿ ಸೋನಿಯಾ ಮತ್ತು ರಾಹುಲ್ ಅಮೆರಿಕಾಕ್ಕೆ ತೆರಳಿದ್ದಾರೆ. ಅವರನ್ನು ಪ್ರಿಯಾಂಕಾ ವಾದ್ರಾ ಕೂಡ ಸೇರಿಕೊಳ್ಳಲಿದ್ದಾರೆ.
ಸೋನಿಯಾ ತಾಯಿ ಪಾಲ್ವಾ ಮೈನೋ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಟಲಿಯ ಟುರಿನ್‌ನ ಒರ್ಬಾಸನೋ ಎಂಬಲ್ಲಿ ಅವರು ಕುಟುಂಬದ ಮನೆಯಲ್ಲಿ ಈ ಹಿಂದೆ ಉಳಿದುಕೊಂಡಿದ್ದರಾದರೂ, ಸುದೀರ್ಘಾವಧಿಯಿಂದ ದೆಹಲಿಯಲ್ಲೇ ಇದ್ದರು. ಇತ್ತೀಚೆಗಷ್ಟೇ ಅವರನ್ನು ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಕಳುಹಿಸಲಾಗಿತ್ತು.
ಸೋನಿಯಾ ತಾಯಿಯನ್ನು ಚಿಕಿತ್ಸೆಗಾಗಿ ಅಮೆರಿಕಾದಲ್ಲಿ ದಾಖಲು ಮಾಡಲಾಗಿದೆ ಎಂಬ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಭಾರತೀಯ ತೆರಿಗೆದಾರರ ಹಣವನ್ನು 'ಗಾಂಧಿ' ಕುಟುಂಬವು ಪಾವ್ಲಾ ಮೈನೋ ವೈದ್ಯಕೀಯ ವೆಚ್ಚಕ್ಕಾಗಿ ಬಳಸಬಾರದು ಎಂಬರ್ಥದ ಸಂದೇಶಗಳು ಟ್ವಿಟ್ಟರುಗಳಲ್ಲಿ ಹರಿದಾಡುತ್ತಿವೆ.