ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಟ್ ತಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬದಲಾವಣೆ ಮಾಡಿದ್ದರು ಎನ್ನುವ ಮೂಲಕ ಅವರ ವಿಚಾರಣೆಗೆ ಸಿಬಿಐ ತಂತ್ರಗಳನ್ನು ರೂಪಿಸುತ್ತಿರುವಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಮೋದಿಯನ್ನು ವಿಚಾರಣೆಗೆ ಗುರಿಪಡಿಸುವುದು ಕಾಂಗ್ರೆಸ್ ಆತ್ಮಹತ್ಯೆಗೆ ಸಮಾನ ಎಂದಿದೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು, 'ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಪ್ರಶ್ನಿಸಲು ಸಿಬಿಐ ಮುಂದಾಗುತ್ತಿದೆ ಎಂಬುದನ್ನು ಕೇಳಿ ತಿಳಿದಿದ್ದೇವೆ. ಇದು ಕಾಂಗ್ರೆಸ್ ಆತ್ಮಹತ್ಯೆ ಎಂಬುವುದನ್ನು ನಿರೂಪಿಸಲಿದೆ' ಎಂದರು.
ಮೋದಿಯವರನ್ನು ವಿಚಾರಣೆ ನಡೆಸುವ ಹಂತಕ್ಕೆ ಮುಟ್ಟಿದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಎಚ್ಚರಿಸಿದರು.
ಗುಜರಾತನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿರುವ ಮೋದಿ ಅತ್ಯುತ್ತಮ ಮುಖ್ಯಮಂತ್ರಿ ಮಾತ್ರವಲ್ಲದೆ ರಾಷ್ಟ್ರೀಯ ನಾಯಕರೂ ಹೌದು. ಹಾಗಾಗಿ ಯಾವತ್ತೂ ಬೆಂಕಿಯೊಂದಿಗೆ ಆಟವಾಡಲು ಮುಂದಾಗಬೇಡಿ ಎಂದು ನಾನು ಕಾಂಗ್ರೆಸ್‌ಗೆ ಸಲಹೆಯನ್ನಷ್ಟೇ ನೀಡಬಲ್ಲೆ ಎಂದರು.
ಮೋದಿ ವಿಚಾರಣೆಯತ್ತ ಸಿಬಿಐ... ಮೋದಿಯನ್ನು ವಿಚಾರಣೆ ನಡೆಸುವತ್ತ ಸಾಗುತ್ತಿರುವ ಸಿಬಿಐ, ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಅವರ ಪಾತ್ರದ ಕುರಿತು ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ವರದಿಗಳು ತಿಳಿಸಿವೆ.
ಅದರ ಪ್ರಕಾರ ತನಿಖೆಯ ಹಾದಿ ತಪ್ಪಿಸುವ ನಿಟ್ಟಿನಲ್ಲಿ ಸಿಟ್ ತನಿಖಾ ತಂಡಕ್ಕೆ ಇದೀಗ ಆರೋಪಿಗಳೆಂದು ಪರಿಗಣಿಸಿ ಬಂಧನದಲ್ಲಿರುವ ಅಭಯ್ ಚೂಡಾಸಾಮಾ ಮತ್ತು ಎನ್.ಕೆ. ಅಮೀನ್ ಅವರನ್ನು ನೇಮಕಗೊಳಿಸಲು ಸೂಚಿಸಿದ್ದು ಮೋದಿ. ಅಲ್ಲದೆ ತನಿಖಾ ತಂಡದ ಮುಖ್ಯಸ್ಥೆ ಗೀತಾ ಜೋಹ್ರಿಯವರನ್ನೂ ತನಿಖೆ ದಾರಿ ತಪ್ಪಿಸುವಂತೆ ಒತ್ತಡ ಹೇರಿದ ಆರೋಪ ಮೋದಿಯವರ ಮೇಲಿದೆ.
ಮುಖ್ಯಮಂತ್ರಿ ಮೋದಿ ಮತ್ತು ಓರ್ವ ಹಿರಿಯ ಅಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಸಿಟ್ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು ಎಂದು ಸಿಬಿಐ ಮೂಲಗಳು ಹೇಳಿಕೊಂಡಿವೆ.
ಅಮಿತ್ ಶಾ ರಿಮಾಂಡ್ ವಿಸ್ತರಣೆ... ಈ ನಡುವೆ ನ್ಯಾಯಾಂಗ ಬಂಧನದಲ್ಲಿರುವ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಐದು ದಿನಗಳ ಕಾಲ ತಮ್ಮ ಕಸ್ಟಡಿಗೆ ಒಪ್ಪಿಸಬೇಕು ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ.
ಅಮಿತ್ ವಿಚಾರಣೆಗೆ ಸಹಕರಿಸಬಹುದು ಎಂಬ ನಿಟ್ಟಿನಲ್ಲಿ ತಾನು ಈ ಹಿಂದೆ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಕೇಳಿರಲಿಲ್ಲ. ಆದರೆ ಅವರಿಂದ ಹೆಚ್ಚಿನ ಮಾಹಿತಿಗಳು ಲಭಿಸಿಲ್ಲ. ಹಾಗಾಗಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕು ಎಂದು ಕೇಂದ್ರೀಯ ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಅಮಿತ್‌ರಿಂದ ಜಾಮೀನು ಅರ್ಜಿ.. ಸೊಹ್ರಾಬುದ್ದೀನ್ ಶೇಖ್ ಹತ್ಯೆ, ಅಪಹರಣ, ಸುಲಿಗೆ ಮತ್ತು ಪಿತೂರಿ ಆರೋಪಗಳನ್ನು ಎದುರಿಸುತ್ತಿರುವ ಅಮಿತ್ ಶಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದು ಸೆಷನ್ಸ್ ನ್ಯಾಯಾಧೀಶ ಜಿ.ಕೆ. ಉಪಾಧ್ಯಾಯ್ ವಿಚಾರಣೆ ನಡೆಸಲಿದ್ದಾರೆ.