ಬೆಳಗಾವಿ ವಿವಾದದ ಕುರಿತು ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ್ದ ಶಿವಸೇನೆ ಸದಸ್ಯರು ಇಂದು ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದ್ದು, ಚರ್ಚೆಗೆ ನಿರಾಕರಿಸಿದ ಸ್ಪೀಕರ್ ವಿರುದ್ಧ ಕಿಡಿ ಕಾರಿರುವ ಘಟನೆ ವರದಿಯಾಗಿದೆ.
ಬೆಳಗಾವಿ ವಿವಾದದ ಕುರಿತು ತಕ್ಷಣವೇ ಚರ್ಚೆ ನಡೆಯಬೇಕು ಎಂಬ ಬೇಡಿಕೆಯನ್ನು ಸ್ಪೀಕರ್ ಹಮೀದ್ ಅನ್ಸಾರಿ ತಳ್ಳಿ ಹಾಕಿದ್ದರಿಂದ ಮುನಿಸಿಕೊಂಡ ಶಿವಸೇನಾ ಸಂಸದರು ನಂತರ ಸಭಾತ್ಯಾಗ ನಡೆಸಿದರು.
ಪ್ರಶ್ನೋತ್ತರ ವೇಳೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ವಿವಾದಿತ ವಿಚಾರದ ಕುರಿತು ಚರ್ಚೆಗೆ ಅನುಮತಿ ನೀಡುವಂತೆ ಸ್ಪೀಕರ್ ಅವರನ್ನು ಶಿವಸೇನಾ ಸಂಸದ ಮನೋಹರ್ ಜೋಷಿ ಒತ್ತಾಯಿಸಿದರು. ಆದರೆ ಇದಕ್ಕೆ ಉತ್ತರಿಸಿದ ಅನ್ಸಾರಿ, ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಚರ್ಚೆ ನಡೆಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು.
ಆದರೆ ಸದನದಲ್ಲಿ ಚರ್ಚೆ ನಡೆಸಬಹುದು. ಬೆಳಗಾವಿ ಕುರಿತ ಚರ್ಚೆಗೆ ಅವಕಾಶ ನೀಡದ ಹೊರತು ಪ್ರಶ್ನೋತ್ತರ ವೇಳೆ ನಡೆಯಲು ಬಿಡುವುದಿಲ್ಲ ಎಂದು ಜೋಷಿ ಇದಕ್ಕೆ ಪ್ರತಿಕ್ರಿಯಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೋಷಿ, ಚರ್ಚೆಗೆ ಅವಕಾಶ ನೀಡಲಾಗಿದೆ ಎಂದು ಆಗಸ್ಟ್ 2ರಂದು ನನಗೆ ಸ್ಪೀಕರ್ ಪತ್ರ ಕಳುಹಿಸಿದ್ದರು. ಆದರೆ ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಆಗಸ್ಟ್ 6ರಂದು ಮತ್ತೊಂದು ಪತ್ರ ನನಗೆ ಬಂತು. ಇದು ಹೇಗೆ ಸಾಧ್ಯ? ಒಂದು ಪತ್ರ ಚರ್ಚೆಗೆ ಅವಕಾಶ ನೀಡಿದ್ದರೆ, ಮತ್ತೊಂದರಲ್ಲಿ ನಿರಾಕರಿಸಲಾಗಿದೆ. ನನ್ನ ಪ್ರಕಾರ ಅಧ್ಯಕ್ಷರ ಮೇಲೆ ಯಾವುದೋ ಪ್ರಭಾವವನ್ನು ಬೀರಲಾಗಿದೆ ಎಂದು ಆರೋಪಿಸಿದರು.
ಅಲ್ಲದೆ ಈ ವಿಚಾರದಲ್ಲಿ ತಕ್ಷಣವೇ ಸಂಸದೀಯ ವ್ಯವಹಾರಗಳ ಸಚಿವರು ಮಧ್ಯಪ್ರವೇಶಿಸಬೇಕು. ಕಳೆದ 12 ದಿನಗಳಿಂದ ಈ ವಿಚಾರದ ಕುರಿತು ಚರ್ಚೆ ನಡೆಸಲು ನಾವು ಯತ್ನಿಸುತ್ತಿದ್ದೇವೆ ಎಂದು ಜೋಷಿ ಹೇಳಿಕೊಂಡಿದ್ದಾರೆ.