ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ತಲ್ಲೂ ಪ್ರತಿಧ್ವನಿಸಿದ ಬೆಳಗಾವಿ ವಿವಾದ; ಭಾರೀ ಗದ್ದಲ (Parliament disrupted over Belgaum | Maharashtra | Karnataka | Anant Kumar)
Bookmark and Share Feedback Print
 
ಬೆಳಗಾವಿ ವಿವಾದ ಇಂದು ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಬೆಳಗಾವಿ ನಮ್ಮದು ಎಂದು ಮಹಾರಾಷ್ಟ್ರದ ಸಂಸದರು ಘೋಷಣೆಗಳನ್ನು ಕೂಗುತ್ತಾ, ಪ್ರಧಾನ ಮಂತ್ರಿಯವರು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸುತ್ತಿದ್ದಂತೆ ಕೆರಳಿದ ಕರ್ನಾಟಕ ಸಂಸದರು ತರಾಟೆಗೆ ತೆಗೆದುಕೊಂಡಿದ್ದಾರೆ.

ಲೋಕಸಭೆಯಲ್ಲಿ ಕೋಲಾಹಲ ಆರಂಭಿಸಿರುವುದು ಮಹಾರಾಷ್ಟ್ರದ ಶಿವಸೇನೆ ಮತ್ತು ಬಿಜೆಪಿ ಸಂಸದರು. ಸುದೀರ್ಘಾವಧಿಯಿಂದ ಇತ್ಯರ್ಥವಾಗದೇ ಉಳಿದಿರುವ ಗಡಿ ವಿವಾದದಲ್ಲಿ ಕೇಂದ್ರವು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಶಿವಸೇನೆಯ ಉಪಾಧ್ಯಕ್ಷ ಆನಂದರಾವ್ ಅದ್ಸೂಲ್ ನೇತೃತ್ವದಲ್ಲಿ ಸಂಸದರು ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದರು.

ಸ್ವಲ್ಪವೇ ಹೊತ್ತಿನಲ್ಲಿ ಮರಾಠಿ ಸದಸ್ಯರು ಸ್ಪೀಕರ್ ಬಾವಿಗಿಳಿದು 'ಬೆಳಗಾಂ ಹಮಾರಾ ಹೈ' (ಬೆಳಗಾವಿ ನಮ್ಮದು) ಎಂದು ಘೋಷಣೆ ಕೂಗುತ್ತಾ, ಕರ್ನಾಟಕ-ಮಹಾರಾಷ್ಟ್ರ ವಿವಾದದಲ್ಲಿ ಪ್ರಧಾನ ಮಂತ್ರಿ ಮಧ್ಯಪ್ರವೇಶಿಸಿ ಎಂದು ಆಗ್ರಹಿಸಿದರು.

ಶಿವಸೇನೆ ಸಂಸದರಾದ ಗಣೇಶ್ ದುಗ್ದಾಂವಕರ್, ಸುಭಾಷ್ ವಾಂಖೆಡೆ ಮತ್ತು ಚಂದ್ರಕಾಂತ್ ಕೈರೆ ಮುಂತಾದವರು ಕೂಡ ಈ ಸಂದರ್ಭದಲ್ಲಿ ಏರು ದನಿಯಲ್ಲಿ ಮಾತನಾಡ ತೊಡಗಿದರು.

ಈ ಹೊತ್ತಿಗೆ ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಸಂಜೀವ್ ನಾಯ್ಕ್ ಹಾಗೂ ಕಾಂಗ್ರೆಸ್‌ನ ನೀಲೇಶ್ ರಾಣೆಯವರು ಕೂಡ ಶಿವಸೇನೆ ಸದಸ್ಯರನ್ನು ಬೆಂಬಲಿಸಿದರು. ಬಿಜೆಪಿಯ ಗೋಪಿನಾಥ್ ಮುಂಡೆ ಕೂಡ ಅವರನ್ನು ಸೇರಿಕೊಂಡರು.

ಇದರಿಂದ ಕುಪಿತಗೊಂಡ ಕರ್ನಾಟಕದ ಬಿಜೆಪಿ ಸಂಸದರು, ಪ್ರತಿಘೋಷಣೆಗಳನ್ನು ಕೂಗಿದರು. ಹಿರಿಯ ನಾಯಕ ಅನಂತ್ ಕುಮಾರ್ ಇದನ್ನು ಪ್ರಬಲವಾಗಿ ಬೆಂಬಲಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಕೂಡ ಸದನದ ಬಾವಿಗಿಳಿದರು. ಇವರನ್ನು ರೈಲ್ವೇ ಖಾತೆ ರಾಜ್ಯ ಸಚಿವ, ಕಾಂಗ್ರೆಸ್ ಸಂಸದ ಕೆ.ಎಚ್. ಮುನಿಯಪ್ಪ ಕೂಡ ಬೆಂಬಲಿಸಿದ್ದಲ್ಲದೆ, ಶಿವಸೇನೆ ವಿರುದ್ಧ ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಗೃಹಸಚಿವ ಪಿ. ಚಿದಂಬರಂ, ಲೋಕಸಭೆಯ ನಾಯಕ ಪ್ರಣಬ್ ಮುಖರ್ಜಿ ಹಾಗೂ ಕೃಷಿ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಕೂಡ ಲೋಕಸಭೆಯಲ್ಲಿ ಹಾಜರಿದ್ದರು.

ಸ್ಪೀಕರ್ ಮೀರಾ ಕುಮಾರ್ ಎರಡೂ ಬಣದ ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿದರೂ, ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದರಿಂದ ಕಲಾಪವನ್ನು ಮುಂದೂಡಿದರು.

ಕರ್ನಾಟಕದ ಬೆಳಗಾವಿ, ಬೀದರ್, ಕಾರವಾರ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿನ ಮರಾಠಿ ಭಾಷಿಗರ ಪ್ರಾಬಲ್ಯವಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಮಾಡಿದ್ದ ಮನವಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಅಫಿದಾವಿತ್ ಸಲ್ಲಿಸಿರುವುದರಿಂದ ತೀವ್ರ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರ ತಗಾದೆ ತೆಗೆದಿದೆ.

ಸಂಬಂಧಪಟ್ಟ ಸುದ್ದಿಗಳಿವು:
** ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಕೇಂದ್ರ ಘೋಷಣೆ
** ಬೆಳಗಾವಿ ವಿವಾದ; ತಿದ್ದುಪಡಿಗೆ ಮಹಾರಾಷ್ಟ್ರಕ್ಕೆ ಅವಕಾಶ
** ಬೆಳಗಾವಿ ವಿವಾದ; ಮಹಾರಾಷ್ಟ್ರ ಪುಢಾರಿಗಳಿಂದ ಕಿಡಿ
** ಎಲ್ಲರೂ ಮಹಾರಾಷ್ಟ್ರ ವಿರೋಧಿಗಳೇ: ಗುಡುಗಿದ ಠಾಕ್ರೆಗಳು
** ಮುಂಬೈಯಲ್ಲೂ ಕನ್ನಡಿಗರಿದ್ದಾರೆ, ನೆನಪಿರಲಿ: ಠಾಕ್ರೆ ಎಚ್ಚರಿಕೆ
** ಬೆಳಗಾವಿ, ಕಾರವಾರಕ್ಕೆ ಕೇಂದ್ರಾಡಳಿತ: 'ಮಹಾ' ಆಗ್ರಹ
** ಶಿವಸೇನೆಯ ಗೂಂಡಾಗಳಿಂದ ಕನ್ನಡಿಗರ ಮೇಲೆ ದಾಳಿ
ಸಂಬಂಧಿತ ಮಾಹಿತಿ ಹುಡುಕಿ