ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬುರ್ಖಾ ಹಾಕದೆ ಪಾಠ ಮಾಡಬಹುದು; ಶಿಕ್ಷಕಿಗೆ ಜಯ (Teacher | burqa | Muslim university | Sirin Middya)
Bookmark and Share Feedback Print
 
ಪಶ್ಚಿಮ ಬಂಗಾಲದ ಸಚಿವರೊಬ್ಬರ ಮಧ್ಯಪ್ರವೇಶದಿಂದ ಬುರ್ಖಾ ವಿವಾದ ಸುಖಾಂತ್ಯವಾಗಿದೆ. ಶಿಕ್ಷಕಿ ಶಿರಿನ್ ಮಿದ್ಯಾ ಬುರ್ಖಾ ಧರಿಸದೆ ಶಾಲೆಯಲ್ಲಿ ಪಾಠ ಮಾಡಬಹುದಾಗಿದೆ ಎಂದು ಆಲಿ ವಿಶ್ವವಿದ್ಯಾಲಯವು ಆದೇಶ ಹೊರಡಿಸಿದ್ದು, ಆ ಮೂಲಕ ಮೂಲಭೂತವಾದಿ ಮುಸ್ಲಿಂ ವಿದ್ಯಾರ್ಥಿ ಸಂಘಟನೆಗೆ ತೀವ್ರ ಮುಖಭಂಗವಾಗಿದೆ.

ಇದನ್ನೂ ಓದಿ: ಶಿಕ್ಷಕಿ ಬುರ್ಖಾ ಧರಿಸಲೇಬೇಕು: ವಿದ್ಯಾರ್ಥಿಗಳ ಫರ್ಮಾನು

ಕೊಲ್ಕತ್ತಾದ ಆಲಿ ಮುಸ್ಲಿಂ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪಾಠ ಮಾಡಬೇಕಿದ್ದರೆ ಕಡ್ಡಾಯವಾಗಿ ಬುರ್ಖಾ ಧರಿಸಿಕೊಂಡು ಬರಬೇಕು, ಇಲ್ಲದೇ ಇದ್ದರೆ ತರಗತಿಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಕಾಲೇಜಿನ ವಿದ್ಯಾರ್ಥಿ ಸಂಘಟನೆ ಫರ್ಮಾನು ಹೊರಡಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಶಿರಿನ್ ಮಿದ್ಯಾ
PR

24ರ ಹರೆಯದ ಶಿಕ್ಷಕಿಯನ್ನು ಪಾಠ ಮಾಡದಂತೆ ನಿಷೇಧ ಹೇರಿದ ಸುಮಾರು ನಾಲ್ಕು ತಿಂಗಳ ನಂತರ ಇದೀಗ ಮತ್ತೆ ಪಾಠ ಆರಂಭಿಸುವಂತೆ ವಿಶ್ವವಿದ್ಯಾಲಯವು ಸೂಚನೆ ನೀಡಿದೆ. ಬುರ್ಖಾ ಧರಿಸಬೇಕಾಗಿಲ್ಲ, ಅಂತಹ ಯಾವುದೇ ನಿಯಮ ವಿಶ್ವವಿದ್ಯಾಲಯ ರೂಪಿಸಿಲ್ಲ ಎಂದೂ ಅದು ತಿಳಿಸಿದೆ.

ವಿದ್ಯಾರ್ಥಿಗಳ ಬೆದರಿಕೆ ಹಿನ್ನೆಲೆಯಲ್ಲಿ ಶಿರಿನ್ ವಿಶ್ವವಿದ್ಯಾಲಯದ ಸಾಲ್ಟ್ ಲೇಕ್ ಕ್ಯಾಂಪಸ್ಸಿನಲ್ಲಿರುವ ಗ್ರಂಥಾಲಯದಲ್ಲಿ ಕೆಲಸ ಮಾಡುವಂತೆ ಈ ಹಿಂದೆ ವಿಶ್ವವಿದ್ಯಾಲಯ ಸೂಚಿಸಿತ್ತು. ಆದರೆ ಇದಕ್ಕೆ ಶಿಕ್ಷಕಿ ಶಿರಿನ್ ಒಪ್ಪಿಗೆ ಸೂಚಿಸಿರಲಿಲ್ಲ.

ನಂತರ ಪ್ರಕರಣದ ಕುರಿತು ಗಮನ ಹರಿಸಿದ್ದ ಪಶ್ಚಿಮ ಬಂಗಾಲದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಅಬ್ದಸ್ ಸತ್ತಾರ್, ವಿಶ್ವವಿದ್ಯಾಲಯದ ಜತೆ ಮಾತುಕತೆ ನಡೆಸಿದ ನಂತರ ಈ ಮೇಲಿನಂತೆ ಸೂಚನೆ ನೀಡಿದ್ದಾರೆ.

ವಿಶ್ವ ವಿದ್ಯಾಲಯದ ಪ್ರಧಾನ ಕಾಲೇಜಿನಲ್ಲಿ ಬುರ್ಖಾ ಧರಿಸದೆ ತರಗತಿಗಳನ್ನು ನಡೆಸಬಹುದು ಎಂದು ವಿಶ್ವವಿದ್ಯಾಲಯದ ಕುಲಪತಿಯವರು ತಿಳಿಸಿದ್ದಾರೆ. ಹಾಗಾಗಿ ನೀವು ತರಗತಿಗೆ ಹಾಜರಾಗಬಹುದು ಎಂದು ಉಪ ಕುಲಪತಿ ಎಸ್.ಕೆ. ಅಶ್ಫಾಕ್ ಆಲಿ ಅವರು ಶಿರಿನ್ ಅವರಿಗೆ ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ ಶಿರಿನ್ ಯಾವಾಗ ತರಗತಿಗಳನ್ನು ಆರಂಭಿಸಲಿದ್ದಾರೆ ಎಂಬ ಕುರಿತು ಮಾಹಿತಿಗಳಿಲ್ಲ.

ಇದೀಗ ತನ್ನ ವರಸೆ ಬದಲಾಯಿಸಿರುವ ವಿದ್ಯಾರ್ಥಿಗಳ ಸಂಘಟನೆ, ಶಿಕ್ಷಕಿ 'ಸಭ್ಯ' ದಿರಿಸಿನೊಂದಿಗೆ ಬಂದರೆ ನಮ್ಮ ಅಭ್ಯಂತರವೇನೂ ಇಲ್ಲ ಎಂದಿದೆ.

ಟೀಚರ್ ಸಭ್ಯ ದಿರಿಸಿನೊಂದಿಗೆ ತರಗತಿಗೆ ಬರುವುದಾದರೆ ನಾವು ಯಾವುದೇ ರೀತಿಯಲ್ಲೂ ಅಡ್ಡಿ ಮಾಡಲಾರೆವು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಸಾನುರ್ ಜಮಾನ್ ತಿಳಿಸಿದ್ದಾರೆ.

ಈ ಕಾಲೇಜಿನ ಬಹುತೇಕ ಎಲ್ಲಾ ವಿದ್ಯಾರ್ಥಿನಿಯರೂ ಸಾಂಪ್ರದಾಯಿಕ ದಿರಿಸು ಬುರ್ಖಾದಲ್ಲೇ ಬರುತ್ತಿದ್ದಾರೆ. ಆದರೆ ಶಿಕ್ಷಕಿ ಶಿರಿನ್ ಬುರ್ಖಾವಲ್ಲದ, ಇತರ ಸಭ್ಯ ದಿರಿಸಿನೊಂದಿಗೆ ಬರುವುದಾದರೆ ನಾವು ಅಡ್ಡಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ ಪ್ರಕರಣದಲ್ಲಿ ಶಿಕ್ಷಕಿ ಶಿರಿನ್‌ಗೆ ನ್ಯಾಯ ದೊರೆತಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ