ಲಷ್ಕರ್ ಇ ತೋಯ್ಬಾ ಫಿದಾಯಿನ್ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಆಕೆಯ ತಾಯಿಯ ಮನವಿಯನ್ನು ತಳ್ಳಿ ಹಾಕಿರುವ ಗುಜರಾತ್ ಹೈಕೋರ್ಟ್, ಸುಪ್ರೀಂ ಕೋರ್ಟ್ ನೇಮಿಸಿರುವ ಸಿಟ್ ತಂಡಕ್ಕೆ ಹಸ್ತಾಂತರಿಸಿದೆ.
19ರ ಹರೆಯದ ಇಶ್ರತ್ ಜಹಾನ್ ಮತ್ತು ಇತರ ಮೂವರ ಎನ್‌ಕೌಂಟರ್ ಪ್ರಕರಣದ ವಿಸ್ತೃತ ತನಿಖೆಯನ್ನು ಸಿಬಿಐ ಮಾಜಿ ನಿರ್ದೇಶಕ, ಸಿಟ್ (ವಿಶೇಷ ತನಿಖಾ ದಳ) ಮುಖ್ಯಸ್ಥ ಆರ್.ಕೆ. ರಾಘವನ್ ತಂಡ ನಡೆಸಲಿದೆ.
ಇದರೊಂದಿಗೆ ಗುಜರಾತಿನ ಬಿಜೆಪಿ ಸರಕಾರಕ್ಕೆ ಮತ್ತೊಂದು ಕಳಂಕ ಅಂಟಿಸಲು ಯತ್ನಿಸುತ್ತಿದ್ದ ಮುಖ್ಯಮಂತ್ರಿ ನರೇಂದ್ರ ಮೋದಿ ಎದುರಾಳಿಗಳಿಗೆ ತೀವ್ರ ನಿರಾಸೆಯಾದಂತಾಗಿದೆ.
ಪ್ರಸಕ್ತ ಪ್ರಕರಣವನ್ನು ಗಮನಿಸಿದಾಗ ಯಾವುದೇ ದುರುದ್ದೇಶದೊಂದಿಗೆ ಎನ್‌ಕೌಂಟರ್ ನಡೆಸಿರುವ ಅಂಶಗಳು ಗಮನಕ್ಕೆ ಬರುತ್ತಿಲ್ಲ. ಹಾಗಾಗಿ ಸಿಬಿಐ ತನಿಖೆ ನಡೆಸಬೇಕೆಂಬ ಇಶ್ರತ್ ತಾಯಿಯ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ಅಭಿಲಾಷಾ ಕುಮಾರಿಯವರನ್ನೊಳಗೊಂಡ ವಿಭಾಗೀಯ ಪೀಠವು ತಿಳಿಸಿದೆ.
ಆದರೂ ಈ ಹಿಂದೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಫಲಿತಾಂಶದ ಕುರಿತು ಅಸಂತೃಪ್ತಿ ಹೊಂದಿರುವುದರಿಂದ, ಎನ್‌ಕೌಂಟರ್ ನೈಜತೆಯ ಕುರಿತು ಮತ್ತಷ್ಟು ತನಿಖೆ ನಡೆಸುವ ಅಗತ್ಯವಿದೆ. ತನಿಖೆಗಳಲ್ಲಿ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಪ್ರಕರಣವನ್ನು ಸಿಟ್ ತನಿಖೆಗೆ ನ್ಯಾಯಾಲಯವು ಹಸ್ತಾಂತರಿಸುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣವನ್ನು ಸಿಟ್‌ಗೆ ವರ್ಗಾಯಿಸುವ ಸಂಬಂಧ ಎರಡು ವಾರಗಳೊಳಗೆ ಅಗತ್ಯ ಆದೇಶಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಲಯವು ಸೂಚಿಸಿದೆ. ಅಲ್ಲದೆ ತನಿಖೆ ಆರಂಭಿಸಿದ ಮೂರು ತಿಂಗಳೊಳಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶ ನೀಡಿದೆ.
ಎನ್‌ಕೌಂಟರ್ ವಿವರ... 2004ರ ಜೂನ್ 15ರಂದು ಅಹಮದಾಬಾದ್ ಸಮೀಪ ಗುಜರಾತ್ ಕ್ರೈಂ ಬ್ರಾಂಚ್ ಅಧಿಕಾರಿಗಳು ನಡೆಸಿದ್ದ ಎನ್‌ಕೌಂಟರಿಗೆ ಮುಂಬೈ ಮೂಲದ ಇಶ್ರತ್ ಜಹಾನ್, ಜಾವೇದ್ ಗುಲಾಂ ಶೇಖ್ ಆಲಿಯಾಸ್ ಪ್ರಾಣೇಶ್ ಕುಮಾರ್ ಪಿಳ್ಳೈ, ಅಮ್ಜದ್ ಆಲಿ ಆಲಿಯಾಸ್ ರಾಜ್‌ಕುಮಾರ್ ಅಕ್ಬರ್ ಆಲಿ ರಾಣಾ ಮತ್ತು ಜಿಸಾನ್ ಜೋಹರ್ ಅಬ್ದುಲ್ ಗನಿ ಎಂಬ ನಾಲ್ವರು ಬಲಿಯಾಗಿದ್ದರು.
ಮುಂಬೈ ಹೊರವಲಯದ ಮುಂಬ್ರಾದಲ್ಲಿ ಅಜ್ಮತ್ ಪಾರ್ಕ್ ನಿವಾಸಿಯಾಗಿದ್ದ ಇಶ್ರತ್ ಜೂನ್ 12ರಂದು ಮನೆಯಿಂದ ಹೊರಟಿದ್ದಳು. ಅದೇ ಹೊತ್ತಿಗೆ ಅತ್ತ ಜಾವೇದ್ ಕೂಡ ಹೊರಟಿದ್ದ. ಇಶ್ರತ್-ಜಾವೇದ್ ಇಬ್ಬರೂ ಜೂನ್ 13ರಂದು ಅಹಮದಾಬಾದ್ ತಲುಪಿದ್ದರು. ಅಲ್ಲಿ ಅವರನ್ನು ರಾಣಾ ಮತ್ತು ಜಿಸಾನ್ ಸೇರಿಕೊಂಡಿದ್ದಾರೆ.
ನಾಲ್ವರೂ ಒಟ್ಟು ಸೇರಿ ನರೇಂದ್ರ ಮೋದಿಯವರ ಮನೆಯನ್ನು ಹತ್ತಿರದಿಂದ ವೀಕ್ಷಿಸಿದ್ದಾರೆ. ಇದೇ ಹೊತ್ತಿಗೆ ಮೋದಿಯನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ ಎಂಬ ಮಾಹಿತಿ ರಾಜ್ಯದ ಪೊಲೀಸರಿಗೆ ತಿಳಿದಿತ್ತು. ಅದರಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ಅದೇ ಹೊತ್ತಿಗೆ ಜೂನ್ 15ರಂದು ಮುಂಜಾನೆ ನಾಲ್ಕು ಗಂಟೆಗೆ ನೀಲಿ ಬಣ್ಣದ ಟಾಟಾ ಇಂಡಿಕಾ ಕಾರು ಪೊಲೀಸರ ಕಣ್ಣಿಗೆ ಬಿದ್ದಿದೆ. ಸಂಶಯಾಸ್ಪದವಾಗಿ ಕಂಡು ಬಂದ ಕಾರನ್ನು ಬೆನ್ನಟ್ಟಿದಾಗ ಪೊಲೀಸರ ಮೇಲೆಯೇ ದಾಳಿ ನಡೆದಿತ್ತು. ಆಗ ಪೊಲೀಸರು ಕಾರಿನ ಟೈರಿಗೆ ಗುಂಡು ಹಾರಿಸಿದ್ದಾರೆ.
ಅಷ್ಟರಲ್ಲಿ ಕಾರು ನಿಲ್ಲಿಸಿ, ಅದರಲ್ಲಿದ್ದ ಓರ್ವ ವ್ಯಕ್ತಿ ಎಕೆ47 ರೈಫಲಿನಿಂದ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದ. ಆಗ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರೂ ಶಂಕಿತರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಮತಾಂತರಗೊಂಡಿದ್ದ ಪ್ರಾಣೇಶ್.... ಕೇರಳದ ತಾಮರಕ್ಕುಲಂನ ಗೋಪಿನಾಥ ಪಿಳ್ಳೈ ಎಂಬ ಶಿಕ್ಷಕನ ಪುತ್ರ ಪ್ರಾಣೇಶ್ ಕುಮಾರ್ ಪಿಳ್ಳೈ. ಈತ ಸಾಜಿದಾ ಎಂಬ ಮುಸ್ಲಿಂ ಯುವತಿಯನ್ನು ಮದುವೆಯಾಗುವುದಕ್ಕೋಸ್ಕರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಜಾವೇದ್ ಗುಲಾಂ ಮೊಹಮ್ಮದ್ ಶೇಖ್ ಎಂದು ಹೆಸರು ಬದಲಾಯಿಸಿಕೊಂಡಿದ್ದ.
ಈ ನಡುವೆ ಎಲೆಕ್ಟ್ರಿಷಿಯನ್ ತರಬೇತಿಗಾಗಿ 1988ರಲ್ಲಿ ಪುಣೆಗೆ ಹೋಗಿದ್ದಾಗ ಇಶ್ರತ್‌ಳ ತಂದೆಯ ಪರಿಚಯವಾಗಿ, ನಂತರ ಅಲ್ಲೇ ಕೆಲಸಕ್ಕೂ ಸೇರಿಕೊಂಡಿದ್ದ. ನಂತರ 1998ರಲ್ಲಿ ದುಬೈಗೆ ಹೋಗಿ, 2002ರಲ್ಲಿ ವಾಪಸ್ಸಾಗಿದ್ದ. ಈ ಹೊತ್ತಿನಲ್ಲಿ ತನ್ನ ಮೂಲ ಹೆಸರು ಪ್ರಾಣೇಶ್ ಮತ್ತು ನಂತರದ ಹೆಸರು ಜಾವೇದ್ ಎರಡೂ ಹೆಸರಿನಲ್ಲಿ ಪಾಸ್‌ಪೋರ್ಟ್ ಹೊಂದಿದ್ದ. ಬಳಿಕ ನಡೆಸಿದ ಕೆಲವು ಕ್ರಿಮಿನಲ್ ಕೃತ್ಯಗಳಿಗಾಗಿ ಬಂಧನಕ್ಕೂ ಒಳಗಾಗಿದ್ದ.