ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿರುವ ಶಿವಸೇನೆ ವರಿಷ್ಠ ಬಾಳ್ ಠಾಕ್ರೆ, ಇದು ದೇಶದ ಅಧಃಪತನಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ಕಾಶ್ಮೀರಕ್ಕೆ ಸ್ವಾಯತ್ತತೆಯೇ? ಹಾಗೇನಾದರೂ ಆ ರಾಜ್ಯಕ್ಕೆ ಸ್ವಾಯತ್ತತೆಯ ಸ್ಥಾನಮಾನ ನೀಡಿದಲ್ಲಿ ದೇಶವು ವಿನಾಶದತ್ತ ಸಾಗಲಿದೆ ಎಂದು ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಹೇಳಿದ್ದಾರೆ.
ಈ ಉಪಾಯವನ್ನು ಮುಂದಿಟ್ಟಿರುವುದಕ್ಕೆ ಕಾಂಗ್ರೆಸ್ಸನ್ನು ತೀವ್ರವಾಗಿ ಟೀಕಿಸಿರುವ ಅವರು, ಅಧಿಕಾರ ಬಿಟ್ಟು ಕೆಳಗಿಳಿಯುವಂತೆ ಆಗ್ರಹಿಸಿದ್ದಾರೆ.
ಸಂವಿಧಾನದ ಚೌಕಟ್ಟಿನೊಳಗೆ ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಕುರಿತು ಕೇಂದ್ರ ಸರಕಾರವು ಪರಿಶೀಲನೆ ನಡೆಸಲಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಕ್ಕೆ ಪ್ರತಿಯಾಗಿ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿಯವರಿಂದ ಬಂದಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಠಾಕ್ರೆ, 'ಈ ಹಿಂದೆ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ಸ್ವಾಯತ್ತತೆಯ ಸ್ಥಾನಮಾನ ನೀಡಲಾಗುತ್ತದೆ ಎಂದು ಪ್ರಕಟಿಸಿದ್ದರು; ಶೇಖ್ ಅಬ್ದುಲ್ಲಾ ಅವರನ್ನು ರಾಜ್ಯದ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದರು. ಆದರೆ ಇದನ್ನು ಇಡೀ ದೇಶ ಮತ್ತು ಸಂಸದರು ತೀವ್ರವಾಗಿ ವಿರೋಧಿಸಿದ್ದರಿಂದ ತನ್ನ ನಡೆಯನ್ನು ನೆಹರೂ ಬದಲಾಯಿಸಿಕೊಂಡಿದ್ದರು' ಎಂದು ವಿವರಣೆ ನೀಡಿದ್ದಾರೆ.
ಸಂಸದರಿಂದ ಭಾರೀ ವಿರೋಧ ವ್ಯಕ್ತವಾಗಿದ್ದ ಕಾರಣ, ನೆಹರೂ ತನ್ನ ಬೋಳು ತಲೆಯಲ್ಲಿ ಉಳಿದಿದ್ದ ಕೂದಲುಗಳನ್ನೂ ಕಳೆದುಕೊಳ್ಳಲಾರಂಭಿಸಿದಾಗ ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ನಿರ್ಧಾರವನ್ನು ಕೈ ಬಿಟ್ಟಿದ್ದರು. ಈಗ ಅಬ್ದುಲ್ಲಾ ಅವರ ವಂಶಜ ಫಾರೂಕ್ ಮತ್ತು ಒಮರ್ ಕೂಡ ಸ್ವಾಯತ್ತತೆಯ ಪರವಾಗಿದ್ದಾರೆ. ಆದರೆ ಇಡೀ ದೇಶ ಸ್ವಾಯತ್ತತೆಗೆ ವಿರುದ್ಧವಾಗಿರುವಾಗ ಇದು ನಡೆಯಲು ಸಾಧ್ಯವಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಅವರು ಸ್ವಾಯತ್ತತೆ ಪ್ರಸ್ತಾಪವನ್ನು ಸ್ವಾಗತಿಸಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಮೇಲಿನಂತೆ ಠಾಕ್ರೆ ಹೇಳಿದ್ದಾರೆ.