ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದರ ವೇತನ 50,000 ರೂ.; ಶೀಘ್ರದಲ್ಲೇ ನಿರ್ಧಾರ (MP's salary | Govt of India | Congress | BJP)
Bookmark and Share Feedback Print
 
ಸಂಸತ್ ಸದಸ್ಯರ ವೇತನ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಇಂದು ನಡೆಯಬೇಕಾಗಿದ್ದ ಸಂಪುಟ ಸಚಿವರ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ಪ್ರಸಕ್ತ ಪಡೆಯುತ್ತಿರುವ 16,000 ಸಂಬಳವನ್ನು 50,000 ರೂಪಾಯಿಗಳಿಗೆ ಏರಿಕೆ ಮಾಡುವ ಕುರಿತು ಸಂಪುಟವು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿತ್ತು.

ಕಳೆದ ವಾರವಿಡೀ ಗೌಜಿ-ಗದ್ದಲಗಳಿಂದಲೇ ತುಂಬಿದ್ದ ಸಂಸತ್ತಿನಲ್ಲಿ ಈ ವಾರ ವೇತನ ಪರಿಷ್ಕರಣೆ ಮಸೂದೆಯು ಮಂಡನೆಯಾಗಲಿದ್ದು, ಈ ಸಂಬಂಧ ಸೋಮವಾರ ಕೇಂದ್ರ ಸಂಪುಟವು ತನ್ನ ಅಂಗೀಕಾರ ನೀಡಲಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಸಂಸದರ ಸಂಬಳ ಹೆಚ್ಚಳಕ್ಕೆ ಯಾರೂ ಗದ್ದಲ ಎಬ್ಬಿಸಲ್ಲ!

ಅದೇ ಹೊತ್ತಿಗೆ ಸದನ ಸಮಿತಿಯು ಶಿಫಾರಸು ಮಾಡಿರುವ ಸಂಸದರ ವೇತನವನ್ನು ಒಪ್ಪಿಕೊಳ್ಳಲು ಕೇಂದ್ರ ಸಂಪುಟವು ನಿರಾಕರಿಸಿದೆ. 16,000 ವೇತನವನ್ನು 80,001 ರೂಪಾಯಿಗಳಿಗೆ ಏರಿಕೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ 50,000 ರೂಪಾಯಿಗಳಿಗೆ ಏರಿಕೆ ಮಾಡುವ ನಿರ್ಧಾರಕ್ಕೆ ಕೇಂದ್ರ ಬಂದಿದೆ.

ಅಲ್ಲದೆ ಕಲಾಪಕ್ಕೆ ಭಾಗವಹಿಸಿದ್ದಕ್ಕೆ ನೀಡುವ ದಿನ ಭತ್ಯೆಯನ್ನು 1,000 ರೂಪಾಯಿಗಳಿಂದ 2,000 ರೂಪಾಯಿಗಳಿಗೆ ಏರಿಸಲು ನಿರ್ಧರಿಸಲಾಗಿದೆ. ಉಳಿದಂತೆ ವಿಮಾನ-ರೈಲು ಪ್ರಯಾಣ, ದೂರವಾಣಿ ಭತ್ಯೆ ಸೇರಿದಂತೆ ಇನ್ನಿತರ ವೆಚ್ಚಗಳನ್ನು ನಿಭಾಯಿಸಲು ಭತ್ಯೆಗಳನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆಗಳನ್ನು ಪರಿಗಣಿಸಲಾಗುತ್ತಿಲ್ಲ ಎಂದು ಹೇಳಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿರುವ ಹಿನ್ನೆಲೆಯಲ್ಲಿ ವೇತನ ಹೆಚ್ಚಳ ಅತ್ಯಗತ್ಯ ಎನ್ನುವುದು ಸಂಸದರ ವಾದ. ಅಲ್ಲದೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಪಡೆಯುವ ವೇತನಕ್ಕಿಂತ (80,000 ರೂಪಾಯಿ) ಒಂದು ರೂಪಾಯಿಯಾದರೂ ಜಾಸ್ತಿ ವೇತನವನ್ನು ನಮಗೆ ನೀಡಬೇಕೆಂದು ಸದನ ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿತ್ತು.

ಈ ಕುರಿತು ಇಂದು ನಡೆಯಬೇಕಿದ್ದ ಸಂಪುಟ ಸಭೆಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರೂ ವೇತನ ಹೆಚ್ಚಳಕ್ಕೆ ಇದೇ ವಾರದಲ್ಲಿ ಸಂಪುಟ ಅಂಗೀಕಾರ ನೀಡಿದ ನಂತರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ