ದೇಶದ ಸಂಪನ್ಮೂಲದ ಮೊದಲ ಹಕ್ಕಿರುವುದು ಅಲ್ಪಸಂಖ್ಯಾತರಿಗೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಆರೆಸ್ಸೆಸ್ ನಾಯಕನ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಆರೆಸ್ಸೆಸ್ ಮಾಜಿ ಮುಖ್ಯಸ್ಥ ಕೆ.ಎಸ್. ಸುದರ್ಶನ್ ಅವರ ಹೇಳಿಕೆಗೆ ಹೆಚ್ಚು ಮಹತ್ವ ನೀಡಬೇಕಾದ ಅಗತ್ಯವಿಲ್ಲ. ಅವರ ಇಂತಹ ಕೆಲವು ಹೇಳಿಕೆಗಳನ್ನು ಸಂಘಟನೆ ಒಪ್ಪಿಕೊಳ್ಳದ ಕಾರಣದಿಂದಲೇ ಅಧ್ಯಕ್ಷ ಪಟ್ಟದಿಂದ ಅವರನ್ನು ಕೆಳಗಿಳಿಸಲಾಗಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.
2006ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಲ್ಪಸಂಖ್ಯಾತರ ಕುರಿತು ಅನಪೇಕ್ಷಿತ ಹೇಳಿಕೆ ನೀಡಿದ್ದರು. ಈ ದೇಶದ ಸಂಪನ್ಮೂಲದ ಮೇಲೆ ಅಲ್ಪಸಂಖ್ಯಾತರಿಗೆ, ಅದರಲ್ಲೂ ಮುಸ್ಲಿಮರಿಗೇ ಮೊದಲ ಹಕ್ಕು. ಹಾಗಾದಲ್ಲಿ ಅಭಿವೃದ್ಧಿ ಕಾರ್ಯಗಳು ಸಮಾನಾಂತರವಾಗಿ ಸಾಗಬಹುದು ಎಂದು ಹೊಗಳಿ ಅಟ್ಟಕ್ಕೇರಿಸಿದ್ದರು.
ಈ ಕುರಿತು ಪ್ರಧಾನಿ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಆರೆಸ್ಸೆಸ್ ನಾಯಕ ಸುದರ್ಶನ್, ಅಲ್ಪಸಂಖ್ಯಾತರು ನಿಮ್ಮ ಅಳಿಯಂದಿರೇ ಎಂದು ಪ್ರಶ್ನಿಸಿದ್ದರು.
ಈ ಕುರಿತು ದಿಗ್ವಿಜಯ್ ಸಿಂಗ್ ಅವರ ಪ್ರತಿಕ್ರಿಯೆ ಕೇಳಿದಾಗ, ಸುದರ್ಶನ್ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ ಎಂದರು.
ಮತ್ತೊಂದು ಆರೋಪಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ್, ಸಂಘ ಪರಿವಾರದ ಮೂಲವು ಐಎಸ್ಐಯಿಂದ ಆರ್ಥಿಕ ಸಹಕಾರ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿರುವುದು ಕಾಂಗ್ರೆಸ್ಸಲ್ಲ, ಪುಣೆಯಲ್ಲಿನ ಆರೆಸ್ಸೆಸ್ ಮುಖ್ಯಸ್ಥ ಎಂದಿದ್ದಾರೆ.