ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ರಾಹುಲ್ ಗಾಂಧಿ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ! (Narendra Modi | Congress | Rahul Gandhi | BJP)
Bookmark and Share Feedback Print
 
ಕಾಂಗ್ರೆಸ್‌ನ ಯುವರಾಜ ಎಂದೇ ಬಿಂಬಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿಗಿಂತ ಅರ್ಹ ಅಭ್ಯರ್ಥಿ ಪ್ರಧಾನಿ ಪಟ್ಟಕ್ಕೆ ಬೇರಿಲ್ಲ, ಇಂದೇ ಚುನಾವಣೆ ನಡೆದರೆ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯುವುದು ಕಾಂಗ್ರೆಸ್ ಪಾಳಯ ಮತ್ತು ರಾಷ್ಟ್ರದ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವ ಸಾಮರ್ಥ್ಯ ಹೊಂದಿರುವುದು ಕೂಡ 125 ವರ್ಷಗಳ ಇತಿಹಾಸ ಹೊಂದಿರುವ ಪಕ್ಷ ಎಂದು ಜನತೆ ಸಮೀಕ್ಷೆಯೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ದೇಶದಲ್ಲೇ ಮೋದಿ ನಂ.1 ಸಿಎಂ, ಯಡಿಯೂರಪ್ಪ ನಂ.13

ಜೂನ್ 26, 2010ರಿಂದ ಜುಲೈ 15ರ ನಡುವೆ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ 19 ರಾಜ್ಯಗಳ 98 ಲೋಕಸಭಾ ಕ್ಷೇತ್ರಗಳಲ್ಲಿನ 12,392 ಅರ್ಹ ಮತದಾರರನ್ನು ಪ್ರಶ್ನಿಸಲಾಗಿತ್ತು.

'ಇಂಡಿಯಾ ಟುಡೇ' ಆಂಗ್ಲ ನಿಯತಕಾಲಿಕ ನಡೆಸಿರುವ ಸಮೀಕ್ಷೆಯ ಫಲಿತಾಂಶವಿದು. ಸಮೀಕ್ಷೆಯಲ್ಲಿ ವ್ಯಕ್ತಪಟ್ಟಿರುವ ಅಭಿಪ್ರಾಯಗಳ ಪ್ರಕಾರ ಅಟಲ್ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ, ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿಯವರಿಗಿಂತಲೂ ರಾಹುಲ್ ಗಾಂಧಿಯೇ ಪ್ರಧಾನಿ ಪಟ್ಟಕ್ಕೆ ಅರ್ಹರು.

ವಾಜಪೇಯಿಗಿಂತಲೂ ಉತ್ತಮ...
ಭಾರತದ ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ ನಿಮ್ಮ ಪ್ರಕಾರ ಯಾರು ಎಂದು ಕೇಳಿದ್ದಕ್ಕೆ ಶೇ.29ರಷ್ಟು ಮಂದಿ ಸೂಚಿಸಿರುವ ಹೆಸರು ರಾಹುಲ್ ಗಾಂಧಿ. ಶೇ.16 ಮಂದಿಯಷ್ಟೇ ವಾಜಪೇಯಿ ಹೆಸರನ್ನು ಸೂಚಿಸಿದ್ದರೆ, ಸೋನಿಯಾ ಗಾಂಧಿ ಹೆಸರನ್ನು ಶೇ.13 ಮಂದಿ ಪ್ರಸ್ತಾಪಿಸಿದ್ದಾರೆ.

ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ನಂ.1 ಮುಖ್ಯಮಂತ್ರಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನರೇಂದ್ರ ಮೋದಿ ಆಶ್ಚರ್ಯಕರ ರೀತಿಯಲ್ಲಿ ಪ್ರಧಾನಿ ಪಟ್ಟಕ್ಕೆ ಅರ್ಹರಲ್ಲ ಎಂಬುದು ಸಮೀಕ್ಷೆಯಲ್ಲಿ ಬಿಂಬಿತವಾಗಿದೆ. ಅವರು ಪ್ರಧಾನಿಯಾಗಬೇಕೆಂದು ಬಯಸಿದವರು ಕೇವಲ ಶೇ.9 ಮಂದಿ ಮಾತ್ರ. ಇದಕ್ಕಿಂತಲೂ ಕಡಿಮೆ (ಶೇ.7) ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರದ್ದು.

ಈ ಪಟ್ಟಿಯಲ್ಲಿ ಮಾಯಾವತಿ, ನಿತೀಶ್ ಕುಮಾರ್, ಪ್ರಣಬ್ ಮುಖರ್ಜಿ, ಪಿ. ಚಿದಂಬರಂ, ಸುಷ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿಯವರ ಹೆಸರುಗಳು ಕೊನೆಗಷ್ಟೇ ಕಾಣಿಸಿಕೊಂಡಿವೆ.

ಕಾಂಗ್ರೆಸ್ ಸರಕಾರ ಬರುತ್ತೆ...
ಇಂದೇ ಚುನಾವಣೆ ನಡೆದಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಎದು ಹೇಳಿದವರೇ ಹೆಚ್ಚು. ಶೇ.34.6 ಮಂದಿ ಈ ಉತ್ತರವನ್ನು ನೀಡಿದ್ದಾರೆ.

2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿ ಕೂಟವು 259 ಸೀಟುಗಳನ್ನು ಗೆದ್ದುಕೊಂಡಿತ್ತು. ಈಗ ಚುನಾವಣೆ ನಡೆದರೆ 246ರಿಂದ 256ರಷ್ಟು ಕ್ಷೇತ್ರಗಳನ್ನು ಗೆಲ್ಲಲಿದೆ. ಸುಮಾರು ಶೇ.-0.8ರಷ್ಟು ಮಾತ್ರ ಕುಸಿತ ಕಾಣಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಶೇ.1.2ರ ಹೆಚ್ಚಳದೊಂದಿಗೆ 168ರಿಂದ 178 ಸ್ಥಾನಗಳನ್ನು ಗೆಲ್ಲಲಿದೆ ಎಂದವರು ಶೇ.26.4 ಮಂದಿ ಮಾತ್ರ. ಕಳೆದ ಮಹಾ ಚುನಾವಣೆಯಲ್ಲಿ ಇದು 159 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಸ್ಥಿರ ಸರಕಾರಕ್ಕೆ ಕಾಂಗ್ರೆಸ್...
ಕೇಂದ್ರದಲ್ಲಿ ಯಾವ ಪಕ್ಷವು ಸ್ಥಿರ ಸರಕಾರವನ್ನು ನೀಡುವ ಅರ್ಹತೆ ಹೊಂದಿದೆ ಎಂಬ ಪ್ರಶ್ನೆಗೂ ಕಾಂಗ್ರೆಸ್ ಕಡೆ ಜನತೆ ಬೆಟ್ಟು ಮಾಡಿ ತೋರಿಸಿದ್ದಾರೆ. ಹೀಗೆಂದು ಹೇಳಿದವರು ಶೇ.35ರಷ್ಟು ಮಂದಿ. ಶೇ.28ರಷ್ಟು ಮಂದಿ ಮಾತ್ರ ಬಿಜೆಪಿ ಎಂಬ ಉತ್ತರ ನೀಡಿದ್ದಾರೆ. ಇತರರ ಕಡೆ ಒಲವು ತೋರಿಸಿರುವವರು ಶೇ.19ರಷ್ಟು ಜನ.

ಸಮಸ್ಯೆಗಳನ್ನು ಪರಿಹರಿಸಲು...
ದೇಶದ ಮಹತ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಕಾಂಗ್ರೆಸ್‌ಗಿಂತ ಉತ್ತಮ ಪಕ್ಷ ಬೇರೊಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.36ರಷ್ಟು ಮಂದಿ ಕಾಂಗ್ರೆಸ್ ಎಂದಿದ್ದರೆ, ಶೇ.30 ಜನತೆ ಕೇಸರಿ ಪಕ್ಷ ಎಂದಿದ್ದಾರೆ. ಉಳಿದವರಿಗೆ ದೊರಕಿರುವ ಬಹುಮತ ಶೇ.23 ಮಾತ್ರ.

ಅತ್ಯುತ್ತಮ ಪ್ರಧಾನಿ ಇಂದಿರಾ...
ದೇಶ ಕಂಡ ಅತ್ಯುತ್ತಮ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಶೇ.31 ಮಂದಿ ಇಂದಿರಾ ಗಾಂಧಿ ಎಂಬ ಉತ್ತರವನ್ನು ನೀಡಿದ್ದಾರೆ. ಅಚ್ಚರಿಯ ವಿಚಾರವೆಂದರೆ ಲಾಲ್ ಬಹದ್ದೂರ್ ಶಾಸ್ತ್ರಿ (ಶೇ.7) ಮತ್ತು ಜವಾಹರಲಾಲ್ ನೆಹರೂ (ಶೇ.11) ಕೆಳಗಿನ ಸ್ಥಾನಗಳಲ್ಲಿ ಗುರುತಿಸಿಕೊಂಡಿರುವುದು.

ಎರಡನೇ ಸ್ಥಾನ ರಾಜಕೀಯ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಪಾಲಾಗಿದೆ. ಅವರ ಪರ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.21ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಎರಡನೇ ಬಾರಿ ಪ್ರಧಾನಿಯಾಗಿ ಮುಂದುವರಿದಿರುವ ಮನಮೋಹನ್ ಸಿಂಗ್ ಅವರು ಜನಪ್ರಿಯ ಪ್ರಧಾನಿಯಲ್ಲ ಎಂಬುದೂ (ಶೇ.7) ಬಹಿರಂಗವಾಗಿದೆ.

ಬಡವರ ಬಂಧು ಕಾಂಗ್ರೆಸ್...
ಬಡವರ ಕುರಿತು ಕಾಳಜಿ ಹೊಂದಿರುವ ಪಕ್ಷವಾಗಿಯೂ ಕಾಂಗ್ರೆಸ್ ಹೊರ ಹೊಮ್ಮಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪಕ್ಷದತ್ತ ಶೇ.34 ಮಂದಿ ಬೆರಳು ತೋರಿಸಿದ್ದಾರೆ. ಬಿಜೆಪಿಯೇ ಬಡವರ ಬಂಧು ಎಂದಿರುವವರು ಶೇ.24 ಮಂದಿ ಮಾತ್ರ. ಇತರ ಪಕ್ಷಗಳೇ ಈ ನಿಟ್ಟಿನಲ್ಲಿ ವಾಸಿ ಎಂದು ಶೇ.24 ಮಂದಿ ಹೇಳಿದ್ದಾರೆ.

ಪ್ರತಿಪಕ್ಷವಾಗಿ ಬಿಜೆಪಿ ಹೇಗಿದೆ?
ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿಯ ನಿರ್ವಹಣೆ ಸಮಾಧಾನಕರ. ಸರಾಸರಿ ಮಾರ್ಕಿನೊಂದಿಗೆ (ಶೇ.36) ಕೇಸರಿ ಪಕ್ಷ ಜಸ್ಟ್ ಪಾಸಾಗಿದೆ. ಶೇ.6ರಷ್ಟು ಮಂದಿ ನಿರೀಕ್ಷೆಯನ್ನೂ ಮೀರಿದೆ ಎಂದಿದ್ದರೆ, ಶೇ.27 ಜನತೆ ಅತ್ಯುತ್ತಮ ಎಂದಿದ್ದಾರೆ. ತೀರಾ ಕೆಟ್ಟದಾಗಿದೆ ಎಂದು ದೂಷಿಸಿರುವವರು ಶೇ.22.

ಬಿಜೆಪಿ ಅಧ್ಯಕ್ಷರಾಗಿ ನಿತಿನ್ ಗಡ್ಕರಿ ಸಾಧಾರಣ ಎಂದು ಶೇ.30 ಮಂದಿ ಹೇಳಿದ್ದಾರೆ. ನಿರೀಕ್ಷೆಯನ್ನು ಮೀರಿಸಿದ್ದಾರೆ ಎಂದವರು ಶೇ.4, ಅತ್ಯುತ್ತಮ ಎಂದವರು ಶೇ.19, ಕಳಪೆ ಎಂದವರು ಶೇ.18.
ಸಂಬಂಧಿತ ಮಾಹಿತಿ ಹುಡುಕಿ