ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀವ್ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟೋರಾ? (Rajiv Gandhi | birthday | Mahatma Gandhi | Congress)
Bookmark and Share Feedback Print
 
ರಾಜೀವ್ ಗಾಂಧಿ ಈ ದೇಶಕ್ಕೆ ಏನು? ಈ ಪ್ರಶ್ನೆಗೆ ಸರಳ ಉತ್ತರ ಮಾಜಿ ಪ್ರಧಾನಿ. ಮೋಹನ್‌ದಾಸ್ ಕರಮಚಂದ್ ಗಾಂಧಿ ಯಾರು? ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು. ಆದರೆ ಆಗಸ್ಟ್ 13ರ ಶುಕ್ರವಾರ ಪತ್ರಿಕೆಗಳತ್ತ ಕಣ್ಣು ಹಾಯಿಸಿದವರಿಗೆ ಈ ಬಗ್ಗೆ ಸಂಶಯಗಳು ಹುಟ್ಟಿರಬಹುದು. ಕಾರಣ ಆ ದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ತಲಾ 13ಕ್ಕಿಂತಲೂ ಹೆಚ್ಚು ಜಾಹೀರಾತುಗಳನ್ನು ದೇಶದ ಹಲವಾರು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವುದು!

ಇದನ್ನೂ ಓದಿ: ರಾಜೀವ್ ಗಾಂಧಿ ಜಾಹೀರಾತಿಗೆ 2 ತಿಂಗಳಲ್ಲಿ 3 ಕೋಟಿ ವೆಚ್ಚ!

ಹೌದು, ಶುಕ್ರವಾರ ಪ್ರಮುಖ ಆಂಗ್ಲ ಪತ್ರಿಕೆಗಳಿಗೆ ಪೂರ್ಣಪುಟ-ಅರ್ಧ ಪುಟದ ತಲಾ 13ರಷ್ಟು ಜಾಹೀರಾತುಗಳನ್ನು ನೀಡಲಾಗಿದೆ. ಎಲ್ಲಾ ಜಾಹೀರಾತುಗಳಲ್ಲೂ ರಾಜೀವ್ ಗಾಂಧಿಯವರ 'ಸಾಧನೆ'ಗಳನ್ನು ಪ್ರಶಂಸಿಸಲಾಗಿದೆ.
ಇದು ಮೊನ್ನೆ ನೀಡಿರುವ ಜಾಹೀರಾತುಗಳು...
PR

ದಿಢೀರ್ ಪ್ರವಾಹದಿಂದ ತತ್ತರಿಸಿರುವ ಲೇಹ್‌ಗೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂತ್ರಸ್ತರಿಗೆ 125 ಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದ್ದು ನಿಮಗೆಲ್ಲ ನೆನಪಿದ್ದರೆ, 2005ರಿಂದೀಚೆಗೆ ರಾಜೀವ್ ಹುಟ್ಟುಹಬ್ಬಕ್ಕೆ ಯುಪಿಎ ಸರಕಾರ ಖರ್ಚು ಮಾಡಿರುವ ಹಣವೆಷ್ಟು ಎಂದು ಕೇಳಿ-- ನೂರಲ್ಲ, ಇನ್ನೂರಲ್ಲ, 300 ಕೋಟಿ ರೂಪಾಯಿಗಳನ್ನು 13ಕ್ಕೂ ಹೆಚ್ಚು ಸಚಿವಾಲಯಗಳ ಮೂಲಕ ವೆಚ್ಚ ಮಾಡಿದೆ ಎನ್ನುತ್ತದೆ ಒಂದು ಮೂಲ.

ತೆರಿಗೆದಾರರ ದುಡ್ಡನ್ನು ಯಾವ ರೀತಿಯೆಲ್ಲ ಪೋಲು ಮಾಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಎಂತಹ ಸಾಧಕನೇ ಆಗಿದ್ದರೂ, ಆತನ ಹೆಸರಿನಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿ ಜಾಹೀರಾತು ನೀಡಿದರೆ ಏನು ಸಾಧನೆ ಮಾಡಿದಂತಾಗುತ್ತದೆ? ಅದನ್ನು ಬರ-ನೆರೆಯಿಂದ ನರಳುತ್ತಿರುವವರಿಗೆ ಹಂಚಬಹುದಲ್ಲವೇ ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಪ್ರಭಾತ್ ಝಾ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯನ್ನೂ ನಡೆಸಿದ್ದು, ಝಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಹುಟ್ಟುಹಬ್ಬಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತದ ಜಾಹೀರಾತು ನೀಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಸುಮಾರು 300 ಕೋಟಿ ರೂಪಾಯಿಗಳು, ಅಂದರೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಕಿಸೆಯಿಂದಲೂ ರಾಜೀವ್ ಗಾಂಧಿ ಹುಟ್ಟುಹಬ್ಬಕ್ಕೆ ತಲಾ 2.5 ರೂಪಾಯಿಗಳು ಸಂದಿವೆ. ಇದೇ ರೀತಿ ಪ್ರತಿ ವರ್ಷ ಹುಟ್ಟುಹಬ್ಬಕ್ಕೆ-ಶ್ರದ್ಧಾಂಜಲಿಗೆಂದು ವೆಚ್ಚ ಮಾಡುವ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಬಹುದಲ್ಲವೇ?

2010ರ ಆಗಸ್ಟ್ 20ರಂದು ದೇಶದ ವಿವಿಧ ಪತ್ರಿಕೆಗಳಿಗೆ ಕೇಂದ್ರ ಸರಕಾರದ ಸಚಿವಾಲಯಗಳು ನೀಡಿರುವ ಜಾಹೀರಾತುಗಳನ್ನು ನೋಡಿ. ಇಲ್ಲಿ ರಾಜೀವ್ ಸಾಧನೆಗಳನ್ನು ಪುಂಖಾನುಪುಂಖವಾಗಿ ಶ್ಲಾಘಿಸಲಾಗಿದೆ.

1) ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ - ಪೂರ್ಣ ಪುಟ
2) ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ - ಪೂರ್ಣ ಪುಟ
3) ಜಲ ಸಂಪನ್ಮೂಲ ಸಚಿವಾಲಯ - ಪೂರ್ಣ ಪುಟ
4) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ - ಅರ್ಧ ಪುಟ
5) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ - ಅರ್ಧ ಪುಟ
6) ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯ - ಅರ್ಧ ಪುಟ
7) ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ - ಅರ್ಧ ಪುಟ
8) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ - ಅರ್ಧ ಪುಟ
9) ಉಕ್ಕು ಸಚಿವಾಲಯ - ಅರ್ಧ ಪುಟ
10 ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವಾಲಯ - ಅರ್ಧ ಪುಟ
11) ವಿದ್ಯುತ್ ಸಚಿವಾಲಯ - ಅರ್ಧ ಪುಟ
12) ರಾಷ್ಟ್ರೀಯ ಮಹಿಳಾ ಆಯೋಗ - ಅರ್ಧ ಪುಟ
13) ಗ್ರಾಮೀಣಾಭಿವೃದ್ಧಿ ಸಚಿವಾಲಯ - ಅರ್ಧಪುಟ

ರಾಜೀವ್ ಗಾಂಧಿಯವರ ಹುಟ್ಟುಹಬ್ಬಕ್ಕೇ ಜಾಹೀರಾತು ಮೀಸಲಲ್ಲ. ಅವರ ಪುಣ್ಯದಿನದಂದೂ ರಾಶಿ-ರಾಶಿ ಜಾಹೀರಾತುಗಳನ್ನು ದೇಶದ ನೂರಾರು ಪತ್ರಿಕೆಗಳಿಗೆ ನೀಡಲಾಗುತ್ತಿದೆ. 2010ರ ಮೇ 21ರಂದು ರಾಜೀವ್ ಗಾಂಧಿ ಶ್ರದ್ಧಾಂಜಲಿ ನೆಪದಲ್ಲಿ ಕೇಂದ್ರ ಸರಕಾರದ ಸುಮಾರು ಒಂಬತ್ತು ಇಲಾಖೆಗಳು ಪೂರ್ಣ-ಅರ್ಧ ಪುಟಗಳ ಜಾಹೀರಾತುಗಳನ್ನು ಪತ್ರಿಕೆಗಳಿಗೆ ನೀಡಿದ್ದವು. ಅವುಗಳ ಪಟ್ಟಿಯನ್ನೇ ನೋಡಿ.

1) ಮಾಹಿತಿ ಮತ್ತು ಪ್ರಸಾರ ಸಚಿವಾಲಯ - ಪೂರ್ಣ ಪುಟ
2) ವಿದ್ಯುತ್ ಸಚಿವಾಲಯ - ಪೂರ್ಣ ಪುಟ
3) ಮಾನವ ಸಂಪನ್ಮೂಲ ಸಚಿವಾಲಯ - ಅರ್ಧ ಪುಟ
4) ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ - ಅರ್ಧ ಪುಟ
5) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ - ಅರ್ಧ ಪುಟ
6) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ - ಅರ್ಧ ಪುಟ
7) ಗೃಹ ಸಚಿವಾಲಯ - ಅರ್ಧ ಪುಟ
8) ಉಕ್ಕು ಸಚಿವಾಲಯ - ಅರ್ಧಪುಟ
9) ಮಾಹಿತಿ ತಂತ್ರಜ್ಞಾನ ಸಚಿವಾಲಯ - ಕಾಲು ಪುಟ

ರಾಜೀವ್ ಗಾಂಧಿಯವರು ಪ್ರಧಾನಿಯಾಗಿ ಈ ದೇಶಕ್ಕೆ ಏನೆಲ್ಲ ಕೊಡುಗೆಗಳನ್ನು ನೀಡಿದ್ದಾರೆನ್ನುವುದು ಜನತೆಗೆ ತಿಳಿದಿರುವ ಹೊತ್ತಿನಲ್ಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಾಣವನ್ನೇ ಅರ್ಪಿಸಿದ್ದ ಮಹಾತ್ಮಾ ಗಾಂಧಿ ಹುಟ್ಟುಹಬ್ಬಕ್ಕೆ ಸರಕಾರ ಎಷ್ಟು ವೆಚ್ಚ ಮಾಡಿದೆ ಎಂಬುದನ್ನೂ ತಿಳಿದುಕೊಳ್ಳಬೇಕಲ್ಲವೇ? 'ಗಾಂಧಿ' ಎಂಬ ಉಪನಾಮವನ್ನೂ ಮಹಾತ್ಮಾ ಗಾಂಧಿಯವರಿಂದ ಪಡೆದ ಕಾಂಗ್ರೆಸ್ ಕೇಂದ್ರೀಯ ನಾಯಕತ್ವವು ಈ ವಿಚಾರದಲ್ಲಿ ನಡೆದುಕೊಂಡಿರುವ ರೀತಿ ಇಲ್ಲಿ ಬಯಲಾಗುತ್ತದೆ.

2009ರ ಅಕ್ಟೋಬರ್ ಎರಡರಂದು ಗಾಂಧೀಜಿಯವರ ಈ ಹಿಂದಿನ ಹುಟ್ಟುಹಬ್ಬ ಸಂಭ್ರಮವನ್ನು ಯುಪಿಎ ಸರಕಾರವು ಜಾಹೀರಾತುಗಳ ಮೂಲಕ ಹೇಗೆ ಆಚರಿಸಿಕೊಂಡಿದೆ ಎಂಬುದನ್ನೇ ನೋಡಿ.

1) ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ - ಪೂರ್ಣ ಪುಟ
2) ಪಂಚಾಯತ್ ರಾಜ್ ಸಚಿವಾಲಯ - ಪೂರ್ಣ ಪುಟ
3) ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ - ಅರ್ಧ ಪುಟ
4) ಕಾನೂನು ಸಚಿವಾಲಯ - ಅರ್ಧ ಪುಟ
5) ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾಗಿಕೆಗಳ ಸಚಿವಾಲಯ - ಕಾಲು ಪುಟ
6) ಆರೋಗ್ಯ ಸಚಿವಾಲಯ - ಅರ್ಧ ಪುಟ
7) ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ - ಅರ್ಧ ಪುಟ

ಅದೇ ರೀತಿ 2010ರ ಜನವರಿ 30ರಂದು ಗಾಂಧೀಜಿಯವರ ಶ್ರದ್ಧಾಂಜಲಿ ದಿನದಂದು ಯುಪಿಎ ಸರಕಾರದ ಸಚಿವಾಲಯಗಳು ನೀಡಿರುವ ಜಾಹೀರಾತು ಸಂಖ್ಯೆಗಳನ್ನೇ ನೋಡಿ.

1) ಮಾಹಿತಿ ಮತ್ತು ಪ್ರಸಾರ ಸಚಿವಾಲಯ - ಪೂರ್ಣ ಪುಟ
2) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ - ಅರ್ಧ ಪುಟ
3) ವಿದ್ಯುತ್ ಸಚಿವಾಲಯ - ಅರ್ಧ ಪುಟ
4) ಮಾಹಿತಿ ಮತ್ತು ಪ್ರಚಾರ ಸಚಿವಾಲಯ - ಕಾಲು ಪುಟ

ಇದೇ ರೀತಿ ದೇಶ ಕಂಡ ಅಪರೂಪದ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬ ಮತ್ತು ಶ್ರದ್ಧಾಂಜಲಿಯಂದು ಅವರ ಸಾಧನೆಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಯಾವ ರೀತಿ ನೆನಪಿಸಿಕೊಂಡಿದೆ ನೋಡಿ.

ಅವರ ಶ್ರದ್ಧಾಂಜಲಿ ದಿನ ಜನವರಿ 11. ಅಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಯವು ಒಳಗಿನ ಪುಟದಲ್ಲಿ ಕಪ್ಪು-ಬಿಳುಪಿನಲ್ಲಿ ಕೇವಲ ಕಾಲು ಪುಟದ ಜಾಹೀರಾತನ್ನು ನೀಡಿ ಕೈ ತೊಳೆದುಕೊಂಡಿದೆ. ನೆನಪಿಡಿ - ರಾಜೀವ್ ಗಾಂಧಿಯವರ ಎಲ್ಲಾ ಜಾಹೀರಾತುಗಳನ್ನೂ ಬಹುವರ್ಣದಲ್ಲಿ ಮುದ್ರಿಸಲಾಗಿತ್ತು.

ಶಾಸ್ತ್ರಿಯವರ ಹುಟ್ಟುಹಬ್ಬ ಅಕ್ಟೋಬರ್ 2ರಂದು. ಕಳೆದ ವರ್ಷ ಆ ದಿನ ಕಾಲು ಪುಟ ಜಾಹೀರಾತಿನಲ್ಲಿ ಶಾಸ್ತ್ರಿಯವರ ಕೊಡುಗೆಯನ್ನು ನಮ್ಮ ಸರಕಾರ ಸ್ಮರಿಸಿಕೊಂಡಿದೆ.

ದೇಶದಲ್ಲಿ ಉಗ್ರರ ಹಾವಳಿ ತಡೆಯಲು ರಕ್ಷಣಾ ಪಡೆಗಳ ಬಲವರ್ಧನೆ, ನಕ್ಸಲರ ಹಾವಳಿ, ಪ್ರವಾಹ ಇತ್ಯಾದಿಗಳಿಂದ ಮನೆ-ಮಠ, ಬಂಧುಗಳನ್ನು ಕಳೆದುಕೊಂಡವರಿಗೆ ಇದೇ ಜಾಹೀರಾತು ಹಣದಲ್ಲಿ ಒಂದಿಷ್ಟು ಪಾಲು ನೀಡಿದ್ದರೆ, ಅದೆಷ್ಟು ಮನೆಗಳು ಬೆಳಗುತ್ತಿರಲಿಲ್ಲ? ಬಡವರ ಬಂಧು ಎಂದು ಹೇಳಿಕೊಳ್ಳುತ್ತಿರುವ 125 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅನ್ನಿಸುತ್ತಿದೆಯೇ?
ಸಂಬಂಧಿತ ಮಾಹಿತಿ ಹುಡುಕಿ