ಅಣ್ಣನಿಗೆ ತಂಗಿ ರಾಖಿ ಕಟ್ಟುವ ರಕ್ಷಾಬಂಧನದಂದು ವಿನೂತನ ಆರಂಭ ಪಡೆದ ಪ್ರಸಂಗವಿದು. ಮೊನ್ನೆ ಮೊನ್ನೆಯವರೆಗೆ ಹುಡುಗಿಯಾಗಿ ಯಾರಿಗೋ ರಾಖಿ ಕಟ್ಟುತ್ತಿದ್ದ ಹುಡುಗಿ, ಇಂದು ಹುಡುಗನಾಗಿದ್ದಾನೆ! ಅದರ ಸಂಕೇತವಾಗಿ ತನ್ನದೇ ಆಪ್ತ ಸ್ನೇಹಿತೆಯಾಗಿದ್ದವಳನ್ನು ತಂಗಿ ಎಂದು ಸ್ವೀಕರಿಸಿ ಇಂದು ರಾಖಿ ಕಟ್ಟಿದ್ದಾನೆ.
ಹೌದು, ಆತನ ಹೆಸರೀಗ ಅಫ್ತಾಪ್. ವಯಸ್ಸು 16. ಇತ್ತೀಚಿನವರೆಗೆ ಫರ್ಹೀನ್ ಅಮೀನ್ ಗಿರಾಚ್ ಎಂಬ ಹೆಸರಿನ ಹುಡುಗಿಯಾಗಿ ಓಡಾಡುತ್ತಿದ್ದವನು. ದೈಹಿಕ-ಮಾನಸಿಕ ಸ್ಥಿತಿಗೆ ಹೊಂದಾಣಿಕೆಯಿಲ್ಲದ್ದನ್ನು ಮನಗಂಡು ಲಿಂಗಾಂತರ ಮಾಡಿ ಗಂಡಾಗಿದ್ದಾನೆ.
ಫರ್ಹೀನ್ ದೇಹವು ಆಂತರಿಕವಾಗಿ ಪುರುಷನಾಗಿದ್ದರೆ, ಬಾಹ್ಯವಾಗಿ ಸ್ತ್ರೀ ರೂಪವನ್ನು ಹೊಂದಿತ್ತು. ದೇಹದಲ್ಲಿ ಎರಡೂ ದೇಹಗಳಿಗೂ ಹೊಂದಾಣಿಕೆಯಾಗುವ ಅವಯವಗಳಿದ್ದವು. ಆದರೆ ಇದ್ಯಾವುದೂ ವಿಚಿತ್ರ ಎಂಬುದು ಸ್ವತಃ ಫರ್ಹೀನ್ ಅಥವಾ ಆಕೆಯ ಹೆತ್ತವರಿಗೆ ತಿಳಿದಿರಲಿಲ್ಲ. ಹಾಗಾಗಿ ಸ್ವಾಭಾವಿಕವೆಂದೇ ಪರಿಗಣಿಸಿ ಇಲ್ಲಿನ ಜೇಟ್ಪುರ್ ಎಂಬಲ್ಲಿನ 'ಶ್ರೀ ಮುನ್ಸಿಪಲ್ ಗರ್ಲ್ಸ್ ಹೈಸ್ಕೂಲ್'ನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ್ದಳು.
ಫರ್ಹೀನ್‌ಗೆ ವಯಸ್ಸು 15ದಾಗಿದ್ದರೂ ರಸಜ್ವಲೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಹೆತ್ತವರು ವೈದ್ಯರಲ್ಲಿ ಕರೆದುಕೊಂಡು ಹೋಗಿದ್ದರು. ಪರಿಶೀಲನೆ ನಡೆಸಿದಾಗ ಆಕೆಯ ದೇಹದಲ್ಲಿ ಪುರುಷತ್ವವೇ ಹೆಚ್ಚಾಗಿರುವುದು ಕಂಡು ಬಂತು. ಹಾಗಾಗಿ ಡಾ. ಹೇಮಂತ್ ಭಕ್ಷಿಯವರು ಲಿಂಗಾಂತರ ಮಾಡುವ ನಿರ್ಧಾರಕ್ಕೆ ಬಂದಿದ್ದರು.
ಇತ್ತೀಚೆಗಷ್ಟೇ ಅಹಮದಾಬಾದ್‌ನಲ್ಲಿ ದೈಹಿಕ ಸ್ಥಿತಿಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಗೊಳಗಾಗಿ, ತನ್ನ ಶರೀರದಲ್ಲಿದ್ದ ಸ್ತ್ರೀತ್ವವನ್ನು ನಿವಾರಿಸಿಕೊಂಡು ಗಂಡಾಗಿ ಪರಿವರ್ತನೆಯಾಗಿದ್ದಳು. ಪುರುಷನಾಗಿ ಪರಿವರ್ತನೆಯಾಗಬೇಕಾಗಿರುವುದರಿಂದ ಫರ್ಹೀನ್ ದೇಹದಲ್ಲಿದ್ದ ಮಹಿಳಾ ಲೈಂಗಿಕ ಅವಯವಗಳನ್ನು ತೆಗೆದು ಹಾಕಲಾಗಿತ್ತು.
ಗಂಡಾಗಿ ಪರಿವರ್ತನೆಗೊಂಡ ನಂತರ ಫರ್ಹೀನ್‌ಗೆ ಅಫ್ತಾಬ್ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೆ ಬಾಲಕಿಯರ ಶಾಲೆಯಿಂದ ತನ್ನ ಪ್ರಮಾಣಪತ್ರಗಳನ್ನು ವಾಪಸ್ ಪಡೆದು, ಬಾಲಕ ಸ್ಕೂಲಿಗೂ ಸೇರ್ಪಡೆಯಾಗಿದ್ದಾನೆ.
ಶ್ರೀಜಿ ವಿದ್ಯಾ ಮಂದಿರದಲ್ಲಿ ತಾನು ವಿದ್ಯಾಭ್ಯಾಸ ಮುಂದುವರಿಸುತ್ತೇನೆ ಎಂದಿರುವ ಅಫ್ತಾಬ್, ಇಂದು ತನ್ನ ತನ್ನ ಗೆಳತಿಯಾಗಿದ್ದ ಕರೀನಾ ಗುಲ್ಬಾನಿಯಿಂದ ರಾಖಿ ಕಟ್ಟಿಸಿಕೊಂಡಿದ್ದಾನೆ.
ಫರ್ಹೀನ್‌ಳಿಗೆ ಕರೀನಾ ಆಪ್ತ ಗೆಳತಿಯಾಗಿದ್ದಳು. ಇದೀಗ ಫರ್ಹೀನ್ ಅಫ್ತಾಬ್ ಆಗಿ ಬದಲಾಗಿರುವುದರಿಂದ ಕರೀನಾ ಸಹೋದರಿಯಾಗಿದ್ದಾಳೆ ಎಂದು ಪ್ರಬುದ್ಧವಾಗಿ ಅಫ್ತಾಬ್ ಹೇಳುತ್ತಿದ್ದಾನೆ.
ಈತನಿಗೆ ಒದಗಿ ಬಂದಿರುವ ರಕ್ಷಾಬಂಧನ ವಿಶೇಷ ಎಂದು ಹೇಳಲು ಇನ್ನೇನು ಕಾರಣ ಬೇಕು, ಅಲ್ಲವೇ?
ಮಹಿಳೆಯರಿಗೆ ರಾಖಿ ಕೊಡುಗೆ... ರಕ್ಷಾಬಂಧನದ ಹಿನ್ನೆಲೆಯಲ್ಲಿ ದೆಹಲಿಯ ಸರಕಾರಿ ಬಸ್ಸುಗಳಲ್ಲಿ ಇಂದು ಇಡೀ ದಿನ ಮಹಿಳೆಯರಿಗೆ ಉಚಿತ ಯಾನದ ಅವಕಾಶವನ್ನು ಇಲ್ಲಿ ಡಿಟಿಸಿ ಒದಗಿಸಿದೆ.
ಎಸಿ ಬಸ್ಸುಗಳನ್ನು ಹೊರತುಪಡಿಸಿ ಬೆಳಿಗ್ಗೆ ಎಂಟರಿಂದ ಸಂಜೆ ಐದರ ನಡುವೆ ನಗರದಲ್ಲಿ ಸಂಚರಿಸುವ ಎಲ್ಲಾ ಸರಕಾರಿ ಬಸ್ಸುಗಳಲ್ಲಿ ರಕ್ಷಾಬಂಧನದ ನಿಮಿತ್ತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ದೆಹಲಿ ಸಾರಿಗೆ ಸಚಿವ ಅರವಿಂದರ್ ಸಿಂಗ್ ಪ್ರಕಟಿಸಿದ್ದಾರೆ.