ನರಹಂತಕ ವೀರಪ್ಪನ್ ಪೊಲೀಸರ ಗುಂಡಿಗೆ ಬಲಿಯಾದ ನಂತರ ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಆತನ ಪತ್ನಿ ಮುತ್ತುಲಕ್ಷ್ಮಿಯ ಎಲ್ಲಾ ಜಾಮೀನು ಅರ್ಜಿಗಳು ತಿರಸ್ಕರಿಸಲ್ಪಟ್ಟ ನಂತರ ಆಕೆಗೆ ಯಾರೊಬ್ಬರೂ ನೆರವು ನೀಡಲು ಮುಂದೆ ಬರುತ್ತಿಲ್ಲ ಎಂದು ಆಕೆಯ ಸಹೋದರಿ ಅಲವತ್ತುಕೊಂಡಿದ್ದಾಳೆ.
ಮುತ್ತುಲಕ್ಷ್ಮಿ ಸಲ್ಲಿಸಿದ್ದ ಎಲ್ಲಾ ಜಾಮೀನು ಅರ್ಜಿಗಳನ್ನು ತಳ್ಳಿ ಹಾಕಲಾಗಿದೆ. ಈಗ ಯಾರೊಬ್ಬರೂ ಮುಂದೆ ಬಂದು ಸಹಾಯ ಮಾಡುತ್ತಿಲ್ಲ. ಮಾನವ ಹಕ್ಕುಗಳ ಸಂಘಟನೆಗಳು ಸಹಾಯ ಮಾಡುವ ಭರವಸೆ ನೀಡಿದ್ದವು, ಆದರೆ ಅವುಗಳು ಕೂಡ ಸುಮ್ಮನಿವೆ ಎಂದು ಮುತ್ತುಲಕ್ಷ್ಮಿಯ ಹಿರಿಯ ಸಹೋದರಿ ಧನಂ ಆರೋಪಿಸಿದ್ದಾಳೆ.
ಈಗಲೂ ಮುತ್ತುಲಕ್ಷ್ಮಿಯ ವಿರುದ್ಧ ಐದು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ ಎಂದು ಬೆಟ್ಟು ಮಾಡಿ ತೋರಿಸಿರುವ ಆಕೆ, ಇವುಗಳಿಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡದೇ ಇರುವುದು ಕೈದಿಗೆ ಅಸಮಾಧಾನ ತಂದಿದೆ ಎಂದಿದ್ದಾಳೆ.
ಮುತ್ತುಲಕ್ಷ್ಮಿಯ ದೊಡ್ಡ ಮಗಳು ಆಂಗ್ಲ ಸಾಹಿತ್ಯ ಕೋರ್ಸ್ ಮಾಡುತ್ತಿದ್ದರೆ, ಚಿಕ್ಕ ಮಗಳು ಚೆನ್ನೈಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಇವರಿಬ್ಬರನ್ನು ಹೊರತುಪಡಿಸಿ ಭೇಟಿಗೆ ವೀರಪ್ಪನ್ ಸಹೋದರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದೂ ಧನಂ ಹೇಳಿದ್ದಾಳೆ.
ತಾಯಿಯನ್ನು ಭೇಟಿ ಮಾಡಲು ಮಕ್ಕಳಿಗೆ ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ. ಅದಕ್ಕೂ ಸಾಕಷ್ಟು ಸತಾಯಿಸಲಾಗುತ್ತಿದೆ ಎಂದು ಕರ್ನಾಟಕ ಪೊಲೀಸರ ಮೇಲೆ ಹರಿಹಾಯ್ದಿದ್ದಾಳೆ.
ಆರೋಪಗಳೇನು? ಪೊಲೀಸ್ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ನಾಗರಿಕರು ಸೇರಿದಂತೆ ಸುಮಾರು 184 ಮಂದಿ ಹಾಗೂ 200 ಆನೆಗಳನ್ನು ದಂತಕ್ಕಾಗಿ ಕೊಂದಿದ್ದ ನರಹಂತಕ ವೀರಪ್ಪನ್ 2004ರ ಅಕ್ಟೋಬರ್ 16ರಂದು ತಮಿಳುನಾಡು ವಿಶೇಷ ಪಡೆಯ (ಎಸ್‌ಟಿಎಫ್) ಗುಂಡಿಗೆ ಬಲಿಯಾದ ನಂತರ ಆತನ ಪತ್ನಿ ಮುತ್ತುಲಕ್ಷ್ಮಿ ಮತ್ತು ಇಬ್ಬರು ಮಕ್ಕಳು ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದರು.
ಪೊಲೀಸರಿಗೆ ಹೆದರಿ ಆಗಾಗ ತನ್ನ ವಾಸ್ತವ್ಯವನ್ನು ಬದಲಾಯಿಸುತ್ತಿದ್ದ ಆಕೆಯನ್ನು 2008ರ ನವೆಂಬರ್ 25ರಂದು ರಾತ್ರಿ ಕರ್ನಾಟಕ ಪೊಲೀಸರು ಬಂಧಿಸಿದ್ದರು.
ಡಿಸಿಎಫ್ ಪಿ. ಶ್ರೀನಿವಾಸನ್, ಎಸ್‌ಪಿ ಟಿ. ಹರಿಕೃಷ್ಣ ಮತ್ತು ಪಿಎಸ್ಐ ಶಕೀಲ್ ಅಹ್ಮದ್ ಹತ್ಯೆ, ಪಾಲಾರ್ ಸ್ಫೋಟ ಪ್ರಕರಣ, ರಾಮಾಪುರ ಪೊಲೀಸ್ ಠಾಣೆಗೆ ದಾಳಿ ಹಾಗೂ ಗೋಪಾಲ್ ಹೊಸೂರ್ ಮತ್ತವರ ತಂಡದ ಮೇಲೆ ಮಲೆಮಹದೇಶ್ವರ ಬೆಟ್ಟದ ಸಮೀಪ ನಡೆಸಿರುವ ದಾಳಿಯಲ್ಲಿ ವೀರಪ್ಪನ್ ಜತೆ ಮುತ್ತುಲಕ್ಷ್ಮಿಯೂ ಸಹಕರಿಸಿದ್ದಳು ಎಂದು ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲಾಗಿರುವುದರಿಂದ ಆಕೆ ಇದುವರೆಗೂ ಬಿಡುಗಡೆಯಾಗಿಲ್ಲ.