ನ್ಯಾಯಾಧೀಶರುಗಳೇ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದಿದ್ದಾರೆ. ಅದೂ ಒಬ್ಬಿಬ್ಬರಲ್ಲ, ಏಳು ಮಂದಿ. ಎಲ್ಎಲ್ಎಂ ಪದವಿಯ ಮೊದಲ ವರ್ಷದ ಪರೀಕ್ಷೆಯಲ್ಲಿ ಈ ರೀತಿ ಕಾಪಿ ಹೊಡೆದ ಏಳು ಮಂದಿ ನ್ಯಾಯಾಧೀಶರುಗಳನ್ನು ಇದೀಗ ಆಂಧ್ರಪ್ರದೇಶ ಹೈಕೋರ್ಟ್ ಅಮಾನತುಗೊಳಿಸಿದ್ದು, ತನಿಖೆಗೆ ಆದೇಶ ನೀಡಿದೆ.
ವಾರಂಗಲ್‌ನಲ್ಲಿನ ಕಾಕತಿಯಾ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಎಂ (ಮಾಸ್ಟರ್ ಆಫ್ ಲಾಸ್) ಮೊದಲ ವರ್ಷದ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ನಕಲು ಮಾಡಿದ್ದ ರಾಜ್ಯದ ಏಳು ಮಂದಿ ಆಧೀನ ನ್ಯಾಯಾಲಯಗಳ ನ್ಯಾಯಾಧೀಶರುಗಳು ಸಿಕ್ಕಿ ಬಿದ್ದಿದ್ದರು.
ಈ ನ್ಯಾಯಾಧೀಶರುಗಳ ಜತೆ, ಇದೇ ಪರೀಕ್ಷೆ ಬರೆಯುತ್ತಿದ್ದ ಏಳು ಮಂದಿ ವಕೀಲರೂ ಸಿಕ್ಕಿ ಬಿದ್ದಿದ್ದಾರೆ. ಪರೀಕ್ಷೆಗಳ ನಿಯಂತ್ರಕರು ಮತ್ತು ವಿಶೇಷ ದಳವು ದಾಳಿ ನಡೆಸಿದ ಸಂದರ್ಭದಲ್ಲಿ ಕಾನೂನು ಪರೀಕ್ಷೆಯಲ್ಲಿನ ಅಕ್ರಮಗಳು ಬಯಲಾಗಿದ್ದವು.
ವಕೀಲರು ಮತ್ತು ಜಡ್ಜ್‌ಗಳು ಭಾರತೀಯ ಸಂವಿಧಾನದ ಕುರಿತ ಕಾನೂನು ಪತ್ರಿಕೆಯೊಂದಕ್ಕೆ ಪರೀಕ್ಷೆ ಬರೆಯುತ್ತಿದ್ದರು. ಅವರು ಕಾನೂನು ಪುಸ್ತಕ ಮತ್ತು ಚೀಟಿಗಳನ್ನು ತೆಗೆದುಕೊಂಡೇ ತರಗತಿಗೆ ಬಂದಿದ್ದರು. ಪತ್ರಕರ್ತರು ಈ ಕುರಿತು ವರದಿಗಳನ್ನು ಮಾಡಿದ ನಂತರ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿದ್ದರು.
ಈ ರೀತಿ ಒಟ್ಟು 12 ಮಂದಿ ಸಿಕ್ಕಿ ಬಿದ್ದಿರುವ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ವಶದಲ್ಲಿದ್ದ ಉತ್ತರ ಪತ್ರಿಕೆ ಮತ್ತು ಮುದ್ರಿತ ಚೀಟಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ ಮತ್ತು ಉಳಿದ ಪರೀಕ್ಷೆಗಳಿಗೂ ಹಾಜರಾಗಲು ಅವಕಾಶ ನೀಡುವುದಿಲ್ಲ. ಅವರೆಲ್ಲರನ್ನೂ ಡಿಬಾರ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಬಿದ್ದು ಅಮಾನತಾಗಿರುವ ಜಡ್ಜ್‌ಗಳು: ರಂಗಾರೆಡ್ಡಿ ಜಿಲ್ಲೆಯ ಸೀನಿಯರ್ ಸಿವಿಲ್ ಜಡ್ಜ್ ಕೆ. ಅಜಿತ್ ಸಿಂಹ ರಾವ್, ಅನಂತಪುರ ಜಿಲ್ಲೆಯ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಎಂ. ಕಿಸ್ಟಪ್ಪ, ರಂಗಾರೆಡ್ಡಿ ಜಿಲ್ಲೆಯ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪಿ. ವಿಜಯೇಂದ್ರ ರೆಡ್ಡಿ, ಗುಂಟೂರು ಜಿಲ್ಲೆಯ ಬಾಪಾತ್ಲಾದ ಸೀನಿಯರ್ ಸಿವಿಲ್ ಜಡ್ಜ್ ಎಂ. ಶ್ರೀನಿವಾಸಾಚಾರಿ ಮತ್ತು ವಾರಂಗಲ್‌ನ ಹೆಚ್ಚುವರಿ ಜೂನಿಯರ್ ಸಿವಿಲ್ ಜಡ್ಜ್ ಹನುಮಂತ ರಾವ್.