ದೇಶದಲ್ಲಿ ಕೇಸರಿ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು ಎಂದು ಗೃಹಸಚಿವ ಪಿ. ಚಿದಂಬರಂ ನಿನ್ನೆ ಹೇಳಿಕೆ ನೀಡಿದ ಬೆನ್ನಿಗೆ ಇಂದು ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದ್ದು, ಆರೋಪವು ಕೀಳು ರಾಜಕೀಯ ಎಂದು ಬಿಜೆಪಿ ಜರೆದಿದೆ.
ಗುರುವಾರ ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಿ ದೇಶದಲ್ಲಿನ ಕೇಸರಿ ಭಯೋತ್ಪಾದನೆ ವಿಚಾರವನ್ನು ಚರ್ಚೆಗೆ ಸ್ವೀಕರಿಸಬೇಕು ಎಂದು ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಒತ್ತಾಯಿಸಿದ ನಂತರ ಕೋಲಾಹಲ ಸೃಷ್ಟಿಯಾಗಿ ಕಲಾಪಕ್ಕೆ ಅಡ್ಡಿಯಾಯಿತು.
ಸದನ ಸೇರುತ್ತಿದ್ದಂತೆ ಎದ್ದುನಿಂತ ಪಾಸ್ವಾನ್, ಗೃಹಸಚಿವರು ನೀಡಿರುವ ಹೇಳಿಕೆ ಕುರಿತು ಚರ್ಚೆ ನಡೆಯಬೇಕು. ಅದಕ್ಕಾಗಿ ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಿ ಎಂದು ಪಟ್ಟು ಹಿಡಿದರು.
ದೇಶದ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದನೆಯ ಕೈವಾಡವಿರುವುದು ಕಂಡು ಬಂದಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ನಿನ್ನೆಯಷ್ಟೇ ಚಿದಂಬರಂ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪಾಸ್ವಾನ್ ಅವರ ಮಾತಿನಿಂದ ಕೆರಳಿದ ಬಿಜೆಪಿ ಸದಸ್ಯರು, ಅವರನ್ನು ಕೋಮುವಾದಿ ಎಂದು ಜರೆದರು. ಅಲ್ಲದೆ ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಪೆಟ್ಟಿಗೆ ಮೇಲೆ ಕಣ್ಣಿಟ್ಟಿರುವ ಎಲ್‌ಜೆಪಿ ನಾಯಕ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿದಾಳಿ ನಡೆಸಿದರು.
ಬಿಜೆಪಿಯ ಎಂ. ವೆಂಕಯ್ಯ ನಾಯ್ಡು ಸೇರಿದಂತೆ ಬಿಜೆಪಿ ಸದಸ್ಯರು ಪಾಸ್ವಾನ್ ವಿರುದ್ಧ ವಾಗ್ದಾಳಿ ನಡೆಸುತ್ತಾ, ಅವರು ವೋಟ್ ಬ್ಯಾಂಕ್‌ಗಾಗಿ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಈ ಹೊತ್ತಿಗೆ ಮಧ್ಯಪ್ರವೇಶಿಸಿದ ಸ್ಪೀಕರ್ ಹಮೀದ್ ಅನ್ಸಾರಿ, ಪ್ರಶ್ನೋತ್ತರ ವೇಳೆಯನ್ನು ರದ್ದು ಮಾಡಲಾಗುವುದಿಲ್ಲ. ದಯವಿಟ್ಟು ಸದಸ್ಯರು ತಮ್ಮ ಆಸನಗಳಿಗೆ ಮರಳಿ ಎಂದು ಮನವಿ ಮಾಡಿಕೊಂಡರು.
ಪಾಸ್ವಾನ್ ಅವರಿಗೆ ಬೆಂಬಲ ನೀಡಲು ರಾಷ್ಟ್ರೀಯ ಜನತಾದಳದ ರಾಜನೀತಿ ಪ್ರಸಾದ್ ಬರುತ್ತಿದ್ದಂತೆ ಬಿಜೆಪಿ ಸದಸ್ಯರು ಕೂಡ ಒಕ್ಕೊರಲಿನಿಂದ ಪ್ರತಿಭಟನೆ ಆರಂಭಿಸಿದಾಗ ಎಚ್ಚರಿಕೆ ನೀಡಿದ ಅನ್ಸಾರಿ, ದಯವಿಟ್ಟು ಕಲಾಪಕ್ಕೆ ಅಡ್ಡಿಪಡಿಸಬೇಡಿ. ಇದ್ಯಾವುದೂ ದಾಖಲಾಗುವುದಿಲ್ಲ ಎಂದರು.
ಪಾಸ್ವಾನ್ ಅವರತ್ತ ಬೆಟ್ಟು ಮಾಡಿದ ಸ್ಪೀಕರ್ ಅವರು, ನೀವೊಬ್ಬ ಹಿರಿಯ ಸದಸ್ಯರು. ಇದು ನಿಮಗೆ ಹೇಳಿ ಮಾಡಿಸಿದ್ದಲ್ಲ. ದಯವಿಟ್ಟು ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡಿ. ನಿಮ್ಮ ಹೇಳಿಕೆಗಳು ದಾಖಲಾಗುತ್ತಿಲ್ಲವಾದ್ದರಿಂದ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತಿದೆ ಎಂದರು.
ಕೊಂಚ ಸಮಾಧಾನಗೊಂಡತೆ ಕಂಡ ಪಾಸ್ವಾನ್, ಶೂನ್ಯವೇಳೆಯಲ್ಲಿ ಕೇಸರಿ ಭಯೋತ್ಪಾದನೆ ಕುರಿತು ಪ್ರಸ್ತಾಪಿಸಲು ನನಗೆ ಅವಕಾಶ ನೀಡಬೇಕು ಎಂದರು. ಆದರೆ ಇಂದು ಶೂನ್ಯವೇಳೆಯೇ ಇಲ್ಲ ಎಂದು ಅನ್ಸಾರಿ ಬಾಯ್ಮುಚ್ಚಿಸಿದರು.
ಬಳಿಕ ಪರಿಸ್ಥಿತಿ ಹತೋಟಿಗೆ ಬಂದು, ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಾಯಿತು.
ತಪ್ಪು ಮುಚ್ಚಿ ಹಾಕುವ ಯತ್ನ... ಚಿದಂಬರಂ ಆರೋಪಕ್ಕೆ ಸಂಸತ್ ಹೊರಗಡೆ ಪ್ರತಿಕ್ರಿಯಿರುವ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ, ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಇಂತಹ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದರು.
ಸಾಮಾನ್ಯ ಜನತೆಯ ಕಳವಳಕ್ಕೆ ಕಾರಣವಾಗಿರುವ ಬೆಲೆಯೇರಿಕೆ, ಆಂತರಿಕ ರಕ್ಷಣೆಯ ಕುರಿತು ಸರಕಾರ ವಿಫಲವಾಗಿದೆ. ಇದನ್ನು ಅಡಗಿಸುವ ಸಲುವಾಗಿ ಅನವಶ್ಯಕ ವಿಚಾರಗಳನ್ನು ಜನರೆದುರು ತರಲಾಗುತ್ತಿದೆ ಎಂದ ಅವರು, ಕೇಸರಿ ಭಯೋತ್ಪಾದನೆ ಆರೋಪದ ಕುರಿತು ಪ್ರತಿಕ್ರಿಯಿಸುವಲ್ಲಿ ಎಚ್ಚರಿಕೆ ವಹಿಸಿದರು.
ಭಯೋತ್ಪಾದನೆಯಲ್ಲಿ ಕೆಲವು ವ್ಯಕ್ತಿಗಳು ಪಾಲ್ಗೊಂಡಿರಬಹುದು, ಆದರೆ ಭಯೋತ್ಪಾದನೆಗೆ ಒಂದು ಧರ್ಮವನ್ನು ತಳುಕು ಹಾಕಲಾಗದು ಎಂದು ಹೇಳುವ ಮೂಲಕ ಕೇಸರಿ ಭಯೋತ್ಪಾದನೆ ವ್ಯಾಖ್ಯಾನವು ಸರಿಯಲ್ಲ ಎಂದರು.