ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತಯಂತ್ರದಲ್ಲಿ 'ಕೈ'ಯಾಡಿಸಬಹುದು ಎಂದವನಿಗೆ ಜೈಲು! (EVM | software engineer | voting machine | Hari Prasad)
Bookmark and Share Feedback Print
 
ಭಾರತದ ವಿದ್ಯುನ್ಮಾನ ಮತಯಂತ್ರವು ಸಮರ್ಪಕವಾಗಿಲ್ಲ, ಇದು ಟ್ಯಾಂಪರ್ ಪ್ರೂಫ್ ಅಲ್ಲ. ತಾಂತ್ರಿಕವಾಗಿ ಬೇಕಾದಂತೆ ಬದಲಾವಣೆ ಮಾಡಬಹುದು ಎಂದು ನಿರೂಪಿಸಲು ಸಿದ್ಧನಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಓರ್ವನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ನೀಡಿರುವ ಕಾರಣ, ಆತ ಮತಯಂತ್ರವನ್ನು ಕಳ್ಳತನ ಮಾಡಿದ್ದಾನೆ ಎಂದು!

ಇದನ್ನೂ ಓದಿ: ಬಿಜೆಪಿ ಮಾತು ನಿಜ; ಭಾರತದ ಮತಯಂತ್ರ ಸುರಕ್ಷಿತವಲ್ಲ

2009ರ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಲಿಸಿದಾಗ ಅಚ್ಚರಿಗೊಂಡಿದ್ದ ಬಿಜೆಪಿ ಮತ್ತಿತರ ಪ್ರತಿಪಕ್ಷಗಳು, ಮತಯಂತ್ರದತ್ತ ಬೆಟ್ಟು ಮಾಡಿದ್ದವು. ಆದರೆ ಮತಯಂತ್ರ ಅಭೇದ್ಯ ಎಂದು ಕಾಂಗ್ರೆಸ್ ಮತ್ತು ಚುನಾವಣಾ ಆಯೋಗವು ಫಲಿತಾಂಶವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದವು.

ಈ ರೀತಿ ಭಾರತದ ವಿದ್ಯುನ್ಮಾನ ಮತಯಂತ್ರ (ಇವಿಎಂ-Electronic Voting Machine) ಅಭೇದ್ಯವಲ್ಲ ಎಂದು ನಿರೂಪಿಸಿ ತೋರಿಸಲು ನಾನು ಸಿದ್ಧ ಎಂದು ಸವಾಲು ಹಾಕಿ ಜೈಲು ಸೇರಿದ ವ್ಯಕ್ತಿಯ ಹೆಸರು ಹರಿಪ್ರಸಾದ್. ಆಂಧ್ರಪ್ರದೇಶದವರಾಗಿರುವ ಇವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಿಂದಿನ ಕಥೆ ಕೇಳಿ...
ಭಾರತದ ಮತಯಂತ್ರ ಸಮರ್ಪಕವೇ ಎಂಬುದನ್ನು ಪರೀಕ್ಷೆಗೊಳಪಡಿಸಲು ಹರಿಪ್ರಸಾದ್ ಅವರನ್ನೊಳಗೊಂಡ ಮೂವರ ತಂಡವು ಕಾರ್ಯಾಚರಣೆಗೆ ಇಳಿದಿತ್ತು. ಈ ರೀತಿ ಪರೀಕ್ಷೆಗೊಳಪಡಿಸಲು ಮತಯಂತ್ರದ ಅಗತ್ಯವಿತ್ತು. ಆದರೆ ಈ ತಂಡಕ್ಕೆ ನಿರಾಸೆಯನ್ನುಂಟು ಮಾಡಿದ್ದು ಚುನಾವಣಾ ಆಯೋಗ.

ಇದರಿಂದ ವಿಚಲಿತರಾಗದ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮುಂಬೈಯಿಂದ ಕಳ್ಳತನದ ಮೂಲಕ ಮತಯಂತ್ರವೊಂದನ್ನು ಪಡೆದುಕೊಂಡು ಪರೀಕ್ಷೆಗೊಳಪಡಿಸಿದ್ದರು. ಅದರಂತೆ ಭಾರತದ ಮತಯಂತ್ರ ಅಭೇದ್ಯವಲ್ಲ ಎಂಬುದು ತಜ್ಞರ ತಂಡಕ್ಕೆ ಮನವರಿಕೆಯಾಗಿತ್ತು.

ತಾವು ನಡೆಸಿದ ಸಂಶೋಧನೆಗಳನ್ನು ಬಹಿರಂಗಪಡಿಸಲು ಮುಂದಾಗಿದ್ದ ಹರಿಪ್ರಸಾದ್ ಮತ್ತು ಅವರ ಜತೆಗಿದ್ದ ಇಬ್ಬರು ವಿದೇಶಿ ತಜ್ಞರು, ನಾಲ್ಕು ತಿಂಗಳ ಹಿಂದಷ್ಟೇ ಟಿವಿ ಕಾರ್ಯಕ್ರಮವೊಂದರಲ್ಲಿ ರುಜುವಾತುಪಡಿಸಿದ್ದರು. ಕೆಲವೇ ನಿಮಿಷಗಳಲ್ಲಿ ಬೇಗೆ ಫಲಿತಾಂಶಗಳನ್ನು ತಿದ್ದಬಹುದು ಎಂಬುದನ್ನು ಹರಿಪ್ರಸಾದ್ ತಂಡವು ನಿರೂಪಿಸಿ ತೋರಿಸಿತ್ತು.

ಇದು ಬಹಿರಂಗವಾಗುತ್ತಿದ್ದಂತೆ ಮುಖಭಂಗಕ್ಕೀಡಾದ ಆಡಳಿತಶಾಹಿ ವ್ಯವಸ್ಥೆಯು ಆತನನ್ನು ಬಾಯ್ಮುಚ್ಚಿಲು ಯತ್ನಿಸಿದ್ದು ಸಫಲವಾಗದೇ ಇದ್ದಾಗ ಉಳಿದಿದ್ದ ಅಸ್ತ್ರ ಬಂಧನ. ಮತಯಂತ್ರವನ್ನು ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಹೊರಿಸಿ ಜೈಲಿಗೆ ತಳ್ಳಲಾಗಿದೆ.

ಪ್ರೋತ್ಸಾಹಿಸುವ ಬದಲು ಹೀಗೆ...
ಕಳೆದ ಒಂದೂವರೆ ವರ್ಷದಿಂದ ಭಾರತದ ಮತಯಂತ್ರವನ್ನು ಟ್ಯಾಂಪರ್ ಪ್ರೂಫ್ ಆಗಿ ಹೇಗೆ ತಯಾರಿಸಬಹುದು ಎಂದು ಹರಿಪ್ರಸಾದ್ ಕಾರ್ಯ ನಿರ್ವಹಿಸುತ್ತಿದ್ದರು. ದುರಂತವೆಂದರೆ ಅವರನ್ನು ಪ್ರಶಂಸಿಸಿ, ಪ್ರೋತ್ಸಾಹಿಸುವ ಬದಲು ಬಂಧಿಸಲಾಗಿದೆ ಎಂದು ಹರಿಪ್ರಸಾದ್ ಸಹವರ್ತಿ ವಿ.ವಿ. ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ನಾವು ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್.ವೈ. ಖುರೇಷಿಯವರನ್ನು ಭೇಟಿ ಮಾಡಿದ್ದೇವೆ. ಒಂದು ಕಡೆಯಿಂದ ನಮ್ಮನ್ನು ಚರ್ಚೆಗೆ ಆಹ್ವಾನಿಸಲಾಗುತ್ತದೆ, ಮತ್ತೊಂದು ಕಡೆಯಿಂದ ಪೊಲೀಸರಿಂದ ಬೆನ್ನು ಹತ್ತಿಸಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಅವರಿಗೆ ಮಾಹಿತಿ ನೀಡಿದ್ದೇವೆ ಎಂದು ರಾವ್ ತಿಳಿಸಿದ್ದಾರೆ.

ಕಾಂಗ್ರೆಸ್ ತುಟಿ ಬಿಚ್ಚುತ್ತಿಲ್ಲ...
ಇಷ್ಟೆಲ್ಲ ನಡೆದರೂ ಆಡಳಿತ ಪಕ್ಷ ಕಾಂಗ್ರೆಸ್ ಇದುವರೆಗೂ ತುಟಿ ಬಿಚ್ಚಿಲ್ಲ. ಆದರೆ ಬಿಜೆಪಿ, ಎಡಪಕ್ಷಗಳು, ತೆಲುಗು ದೇಶಂ ಸೇರಿದಂತೆ ಹಲವು ಪಕ್ಷಗಳು ಮತಯಂತ್ರದ ಕುರಿತು ತನಿಖೆ ನಡೆಸಬೇಕು ಮತ್ತು ತಕ್ಷಣವೇ ಈ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ಸಭೆ ಕರೆಯಬೇಕೆಂದು ಒತ್ತಾಯಿಸಿವೆ.

ಮತಯಂತ್ರ ಅಭೇದ್ಯವಲ್ಲ ಎಂದು ತೋರಿಸಿಕೊಟ್ಟ ತಂತ್ರಜ್ಞ ಹರಿಪ್ರಸಾದ್ ಅವರನ್ನು ಬಂಧಿಸಿರುವುದನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಈ ಕುರಿತು ತನಿಖೆ ನಡೆಯುವ ಅಗತ್ಯವಿದೆ ಎಂದಿದ್ದಾರೆ.

ಭಾರತದ ವಿದ್ಯುನ್ಮಾನ ಮತಯಂತ್ರಗಳು ಅಕ್ರಮವನ್ನು ತಡೆಯುವ ಸಾಮರ್ಥ್ಯ ಹೊಂದಿಲ್ಲ ಎನ್ನುವುದರಲ್ಲಿ ಈಗ ಯಾವುದೇ ಸಂಶಯವಿಲ್ಲ. ಈ ಕುರಿತು ತಜ್ಞರು ತಮ್ಮ ದಿಟ್ಟ ಉತ್ತರಗಳನ್ನು ನೀಡಿದ್ದಾರೆ. ಅದನ್ನು ಗಮನಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುವ ಬದಲು, ತಜ್ಞರನ್ನು ಯಾಕೆ ಬಂಧಿಸಲಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಹರಿಪ್ರಸಾದ್ ಯಂತ್ರವನ್ನು ತನ್ನ ವೈಯಕ್ತಿಕ ಬಳಕೆಗಾಗಿ ಉಪಯೋಗಿಸಿರಲಿಲ್ಲ. ಅದರಲ್ಲಿನ ದೋಷವನ್ನು ಪತ್ತೆ ಹಚ್ಚಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾರದರ್ಶಕವನ್ನಾಗಿಸಲು ಬಯಸಿದ್ದರು. ಅದು ಅಪರಾಧವಲ್ಲ ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಹರಿಪ್ರಸಾದ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಎಲ್ಲಾ ಕೇಸುಗಳನ್ನೂ ವಜಾಗೊಳಿಸಬೇಕು ಎಂದು ಆಗ್ರಹಿಸಿರುವ ಟಿಡಿಪಿ ನಾಯಕ, ಮತಯಂತ್ರಗಳ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಸರಕಾರವು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.

ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಲು ತಕ್ಷಣವೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಸದನದಲ್ಲಿ ಆಗ್ರಹಿಸಿದ್ದಾರೆ.

ಜೇಟ್ಲಿಯವರ ಮಾತಿಗೆ ಟಿಡಿಪಿ ಸದಸ್ಯ ಎಂ.ವಿ. ಮ್ಯಾಸುರ ರೆಡ್ಡಿ, ಎಡರಂಗದ ಸೀತಾರಾಮ್ ಯೆಚೂರಿ, ಎಐಎಡಿಎಂಕೆಯ ವಿ. ಮೈತ್ರೇಯನ್ ಸೇರಿದಂತೆ ಹಲವು ಮಂದಿ ದನಿಗೂಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಬೇಕಿದ್ದ ಆಡಳಿತವು, ಲೋಪಗಳನ್ನು ಯಾರೋ ಎತ್ತಿ ತೋರಿಸಿದಾಗ ಅದರತ್ತ ಗಮನ ಹರಿಸುವ ಬದಲು ದಮನಿಸುವ ನೀತಿಯನ್ನು ಅನುಸರಿಸುತ್ತಿರುವುದು ಇಂತಹ ಪ್ರಕರಣಗಳಿಂದ ರುಜುವಾತಾಗಿದೆ ಎಂದು ಹೇಳದೆ ವಿಧಿಯಿಲ್ಲ, ಏನಂತೀರಿ?
ಸಂಬಂಧಿತ ಮಾಹಿತಿ ಹುಡುಕಿ