ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರತ್ವಕ್ಕೆ ಬಣ್ಣವಿಲ್ಲ: ಕಾಂ | ಹಿಂದೂಗಳಿಗೆ ಅಪಮಾನ: ಬಿಜೆಪಿ (Congress | P Chidambaram | saffron terrorism | Hindu)
Bookmark and Share Feedback Print
 
'ಕೇಸರಿ ಭಯೋತ್ಪಾದನೆ' ಎಂದು ಉಲ್ಲೇಖಿಸುವ ಮೂಲಕ ಗೃಹಸಚಿವ ಪಿ. ಚಿದಂಬರಂ ಹಿಂದೂಗಳಿಗೆ ಅಪಮಾನ ಎಸಗಿದ್ದಾರೆ ಎಂದು ಬಿಜೆಪಿ ಸದಸ್ಯರು ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಭಯೋತ್ಪಾದನೆಗೆ ಬಣ್ಣವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಗೃಹಸಚಿವರ ವಿವಾದಿತ ಹೇಳಿಕೆಯ ಕುರಿತು ಕ್ಷಮೆ ಕೇಳಬೇಕೆಂದು ಶಿವಸೇನೆ ಮತ್ತು ಬಿಜೆಪಿ ಸದಸ್ಯರು ಆಗ್ರಹಿಸಿದ್ದರಿಂದ ರಾಜ್ಯಸಭಾ ಕಲಾಪವು ಇಂದು ಎರಡೆರಡು ಬಾರಿ ಮುಂದೂಡಲ್ಪಟ್ಟಿತು.

ಇದನ್ನೂ ಓದಿ: ಹಲವು ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆ: ಕೇಂದ್ರ

ಇಂದು ಕಲಾಪ ಆರಂಭವಾಗುತ್ತಿದ್ದಂತೆ ಶಿವಸೇನೆಯ ಮನೋಹರ್ ಜೋಷಿಯವರು ಚಿದಂಬರಂ ಹೇಳಿಕೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಕೇಸರಿ ಭಯೋತ್ಪಾದನೆ ಎಂಬುದೇ ಇಲ್ಲ, ಸಚಿವರು ಸಂಬಂಧಪಟ್ಟವರ ಹೆಸರನ್ನು ಉಲ್ಲೇಖಿಸಿ ಹೇಳಿಕೆ ನೀಡಬೇಕೇ ಹೊರತು, ಧರ್ಮವನ್ನು ಉಲ್ಲೇಖಿಸಿಯಲ್ಲ ಎಂದರು.

ಜೋಷಿಯವರ ಮಾತಿಗೆ 'ಹಿಂದೂಗಳನ್ನು ಅಪಮಾನ ಮಾಡುವುದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ' ಎಂದು ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಬೆಂಬಲ ವ್ಯಕ್ತಪಡಿಸಿದರು.

ಈ ಹೊತ್ತಿಗೆ ಪ್ರತಿಪಕ್ಷದ ನಾಯಕ ಬಿಜೆಪಿಯ ಅರುಣ್ ಜೇಟ್ಲಿಯವರನ್ನು ಮಾತನಾಡುವಂತೆ ಸ್ಪೀಕರ್ ಸೂಚಿಸಿದರೂ, ಕಾಂಗ್ರೆಸ್ ಸೇರಿದಂತೆ ಆಡಳಿತ ಪಕ್ಷಗಳ ಸದಸ್ಯರು ಮತ್ತು ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಮುಂತಾದವರು ಅಡ್ಡಿಪಡಿಸಿದರು.

ಆರೆಸ್ಸೆಸ್‌ಗೆ ಭಯೋತ್ಪಾದನೆ ಜತೆ ನಂಟಿದೆ ಎಂದು ಪಾಸ್ವಾನ್ ಹೇಳುತ್ತಿದ್ದಂತೆ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು, 'ಆರೆಸ್ಸೆಸ್‌ಗೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ' ಎಂದು ಘೋಷಣೆಗಳನ್ನು ಕೂಗಿದರು.

ಕೋಲಾಹಲದ ನಂತರ ಮತ್ತೆ ಸದನ ಸೇರಿದಾಗ ಮಾತನಾಡಿದ ಜೇಟ್ಲಿ, ಗೃಹಸಚಿವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸದನದಲ್ಲಿ ಭಾರೀ ಬೇಸರ ವ್ಯಕ್ತವಾಗಿದೆ. ನಮ್ಮ ದೇಶವು ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು, ನಕ್ಸಲ್ ಹಿಂಸಾಚಾರವನ್ನು, ಕಾಶ್ಮೀರ ಸಮಸ್ಯೆಯನ್ನು ಸೇರಿದಂತೆ ಭಯೋತ್ಪಾದನೆಯ ವಿವಿಧ ಮುಖಗಳನ್ನು ನೋಡಿದೆ. ಆ ಸಂದರ್ಭದಲ್ಲಿ ಯಾವುದೇ ಸಮುದಾಯ ಅಥವಾ ಧರ್ಮವನ್ನು ಅವರು ಸಂಬಂಧ ಕಲ್ಪಿಸಿರಲಿಲ್ಲ ಎಂದರು.

ಸಚಿವರು ಕೇಸರಿ ಭಯೋತ್ಪಾದನೆ ಎಂದು ಹೇಳಿ ಕಾಲಕಳೆಯುವ ಬದಲು ಮಾವೋವಾದಿಗಳ ಅಟ್ಟಹಾಸ ಮತ್ತು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿರುವ ಜೇಟ್ಲಿ, ಚಿದಂಬರಂ ಈಗ ಕೇಸರಿ ಭಯೋತ್ಪಾದನೆ ಎಂಬ ಕಲ್ಪನೆಯಲ್ಲಿ ತೇಲುತ್ತಿದ್ದಾರೆ. ಅದನ್ನು ಬಿಟ್ಟು ಸಮಾಜಮುಖಿ ಹೇಳಿಕೆಗಳನ್ನು ನೀಡಲಿ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಸ್ವಾನ್, ಚಿದಂಬರಂ ಜವಾಬ್ದಾರಿಯುತ ಸರಕಾರದ ಸಚಿವರಾಗಿ ಹೇಳಿಕೆ ನೀಡಿದ್ದಾರೆ. ಅವರು ಹೇಳಿರುವ ಕೇಸರಿ ಭಯೋತ್ಪಾದನೆ ನಿಜವಾಗಿಯೂ ನಡೆಯುತ್ತಿದೆ. ಸರಕಾರವು ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಮತ್ತು ಆರೆಸ್ಸೆಸ್‌ಗಳನ್ನು ನಿಷೇಧಿಸಬೇಕು ಎಂದರು.

ಈ ಹೊತ್ತಿಗೆ ಬಿಜೆಪಿ ಸದಸ್ಯರು ಎರಡನೇ ಬಾರಿ ಸದನದ ಬಾವಿಗಿಳಿದು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ಭಯೋತ್ಪಾದನೆಗೆ ಬಣ್ಣವಿಲ್ಲ: ಕಾಂಗ್ರೆಸ್
ರಾಜ್ಯಸಭೆಯಲ್ಲಿ ಭಾರೀ ಗದ್ದಲ ಏರ್ಪಟ್ಟಿರುವಂತೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ಭಯೋತ್ಪಾದನೆಗೆ ಬಣ್ಣವಿಲ್ಲ; ಅದನ್ನು ಮಟ್ಟ ಹಾಕುವ ಕೆಲಸ ನಡೆಯಬೇಕಿದೆ ಎಂದು ಪ್ರತಿಕ್ರಿಯೆ ನೀಡಿದೆ.

ಕೇಸರಿ ಬಣ್ಣವೆಂಬುದು ಭಾರತೀಯ ಸಂಸ್ಕೃತಿಯ ಭಾಗ. ಇದನ್ನು ಯಾರೊಬ್ಬರೂ ಅಥವಾ ಯಾವುದೇ ರಾಜಕೀಯ ಪಕ್ಷವು ತನ್ನ ಸ್ವಂತದ್ದೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಭಯೋತ್ಪಾದನೆಯನ್ನು ಯಾವುದೇ ಬಣ್ಣದ ಜತೆ ಹೋಲಿಸುವುದು ಕೂಡ ಸರಿಯಲ್ಲ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.

ಭಯೋತ್ಪಾದನೆ ಯಾವುದೇ ವರ್ಣವನ್ನು ಹೊಂದಿಲ್ಲ, ಅದರ ಬಣ್ಣ ಕಪ್ಪು ಮಾತ್ರ. ಕೇಸರಿ, ಹಸಿರು, ಬಿಳಿ ಅಥವಾ ಕೆಂಪು-- ಭಯೋತ್ಪಾದನೆಯೆಂದರೆ ಭಯೋತ್ಪಾದನೆ ಎಂದಿರುವ ಅವರು, ಚಿದಂಬರಂ ಹೇಳಿಕೆಯ ಕುರಿತು, 'ಮಾತನಾಡುವಾಗ ಶಬ್ದಗಳ ಆಯ್ಕೆಯಲ್ಲಿ ಜಾಗರೂಕತೆ ವಹಿಸಬೇಕು' ಎಂದರು.
ಸಂಬಂಧಿತ ಮಾಹಿತಿ ಹುಡುಕಿ