ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರ ಅಮೇಠಿ ಲೋಕಸಭಾ ಕ್ಷೇತ್ರವನ್ನೊಳಗೊಂಡ ನೂತನ ಜಿಲ್ಲೆ ರಚನೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸರ್ವೋಚ್ಚ ನ್ಯಾಯಾಲಯ ತೆರವುಗೊಳಿಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಮಹತ್ವದ ರಾಜಕೀಯ ಮುನ್ನಡೆ ಪಡೆದುಕೊಂಡಿದ್ದಾರೆ.
ಜುಲೈ ಒಂದರಂದು ಉತ್ತರ ಪ್ರದೇಶ ಸರಕಾರವು ಹೊರಡಿಸಿದ್ದ ನೂತನ ಜಿಲ್ಲೆಯ ಅಸ್ತಿತ್ವದ ಆದೇಶಕ್ಕೆ ಇತ್ತೀಚೆಗಷ್ಟೇ ಅಲಹಾಬಾದ್ ಹೈಕೋರ್ಟ್ ತಡೆ ನೀಡಿತ್ತು. ನೂತನ ಜಿಲ್ಲೆ ರಚನೆಯನ್ನು ವಿರೋಧಿಸಿ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನು ಮಾಯಾ ಸರಕಾರವು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಈ ಸಂಬಂಧ ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡ ಅಪೆಕ್ಸ್ ಕೋರ್ಟ್, ತಡೆಯಾಜ್ಞೆಯನ್ನು ತೆರವುಗೊಳಿಸಿದ್ದಲ್ಲದೆ ಅಲಹಾಬಾದ್ ಹೈಕೋರ್ಟ್ ನಿರ್ಧಾರವನ್ನು ಮರು ಪರಿಶೀಲನೆ ನಡೆಸುವಂತೆ ಸಲಹೆ ನೀಡಿತು.
ರಾಹುಲ್ ಗಾಂಧಿಯವರ ಅಮೇಠಿ ಮತ್ತು ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ರಾಯ್‌ಬರೇಲಿ ಮತ್ತು ಸುಲ್ತಾನ್‌ಪುರ ಜಿಲ್ಲೆಗಳಿಂದ ಐದು ತಾಲೂಕುಗಳನ್ನು ಬೇರ್ಪಡಿಸಿ ಆ ಜಿಲ್ಲೆಗೆ 'ಛತ್ರಪತಿ ಶಾಹುಜೀ ಮಹಾರಾಜ್ ನಗರ್' ಎಂದು ನಾಮಕರಣ ಮಾಡಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿತ್ತು.
ದಲಿತರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ವರಿಷ್ಠೆ ಮಾಯಾವತಿ ನೇರವಾಗಿ ಕಾಂಗ್ರೆಸ್ ಮಡಿಲಿಗೇ ಕೈ ಹಾಕಿದ್ದು, ರಾಹುಲ್ ಗಾಂಧಿಗೆ ಹಿನ್ನಡೆಯನ್ನುಂಟು ಮಾಡಲು ಯತ್ನಿಸಿದ್ದರು ಎಂದು ಈ ಕುರಿತು ಆರೋಪಿಸಲಾಗಿತ್ತು.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಜಿಲ್ಲೆಗೆ ದಲಿತ ನಾಯಕನ ಹೆಸರನ್ನಿಡಲು ಮಾಯಾವತಿ ನಿರ್ಧರಿಸಿದ್ದರು. ಈ ನೂತನ ಜಿಲ್ಲೆಯ ಸೃಷ್ಟಿಯಿಂದ ರಾಹುಲ್ ಕ್ಷೇತ್ರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲವಾದರೂ, ಕಾಂಗ್ರೆಸ್ ಮತ್ತಿತರ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು.