ಇತ್ತೀಚೆಗಷ್ಟೇ ಆಂಧ್ರಪ್ರದೇಶದ ನ್ಯಾಯಾಧೀಶರೊಬ್ಬರು ಒಂದೇ ದಿನದಲ್ಲಿ 111 ಪ್ರಕರಣಗಳಿಗೆ ಮುಕ್ತಿ ನೀಡಿದ್ದನ್ನು ಕೇಳಿದ್ದೀರಿ. ಅದರ ಬೆನ್ನಿಗೆ ಹರ್ಯಾಣ ನ್ಯಾಯಾಧೀಶರೊಬ್ಬರು ಸ್ಪರ್ಧೆಗೆ ಬಿದ್ದವರಂತೆ 148 ಕೇಸುಗಳನ್ನು ಮುಗಿಸಿ ದಾಖಲೆ ಮುರಿದಿದ್ದಾರೆ.
ಕೈತಾಲ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಕೆ. ಶೋರಿ ಎಂಬವರೇ ಈ ರೀತಿಯಾಗಿ ತ್ವರಿತ ನ್ಯಾಯ ಒದಗಿಸಿ ಸುದ್ದಿಯಾಗಿರುವವರು. ಭಾರತದ ನ್ಯಾಯಾಲಯಗಳಲ್ಲಿ ಲಕ್ಷಗಟ್ಟಲೆ ಪ್ರಕರಣಗಳು ಬಾಕಿ ಉಳಿಯುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ಇಂತಹ ಧನಾತ್ಮಕ ಬೆಳವಣಿಗೆಗಳು ಕಾಣಿಸುತ್ತಿವೆ.
ಶೋರಿಯವರು ಮುಕ್ತಿ ನೀಡಿದ ಪ್ರಕರಣಗಳಲ್ಲಿ 137 ಜಮೀನು ಸಂಬಂಧಿ ವಿವಾದಗಳಿಗೆ ಸೇರಿದ್ದವು. ಉಳಿದ 11 ಪ್ರಕರಣಗಳು ವಾಹನ ಅಫಘಾತ, ಹಿಂದೂ ವಿವಾಹ ಕಾಯ್ದೆ, ಕ್ರಿಮಿನಲ್ ಪರಿಷ್ಕರಣೆಗಳು ಮತ್ತು ಸಿವಿಲ್ ಮನವಿಗಳಿಗೆ ಸಂಬಂಧಪಟ್ಟದ್ದು.
ಇಂತಹ ಅಚ್ಚರಿಯ ಸಾಧನೆ ಮಾಡಿದರೂ ಅವರು ಮಾಧ್ಯಮಗಳ ಜತೆ ಮಾತಿಗಿಳಿಯಲು ನಿರಾಕರಿಸಿದ್ದಾರೆ. ಆದರೆ ಕೈತಾಲ್ ಜಿಲ್ಲಾ ಬಾರ್ ಅಸೋಸಿಯೇಷನ್ ಶೋರಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ತ್ವರಿತ ವಿಚಾರಣೆ ಮತ್ತು ಶೀಘ್ರ ನಿರ್ಧಾರಗಳಿಗೆ ನ್ಯಾಯಾಧೀಶ ಶೋರಿ ಹೆಸರಾದವರು. ಕಳೆದ ತಿಂಗಳಿನ ಆಗಸ್ಟ್ 1ರಂದು 87 ಪ್ರಕರಣಗಳಲ್ಲಿ ಅಂತಿಮ ತೀರ್ಪು ನೀಡಿದ್ದರು. ಒಟ್ಟಾರೆ ಆ ತಿಂಗಳಲ್ಲಿ ಅವರು 225 ಪ್ರಕರಣಗಳಿಗೆ ಮುಕ್ತಿ ನೀಡಿದ್ದು. ನಮ್ಮ ನ್ಯಾಯಾಲಯಗಳಲ್ಲಿ ರಾಶಿ ಬೀಳುತ್ತಿರುವ ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಇದು ಅತ್ಯುತ್ತಮ ನಡೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಒಂದೇ ದಿನದಲ್ಲಿ 111 ಪ್ರಕರಣಗಳಿಗೆ ತೀರ್ಪು ನೀಡಿದ್ದ ಆಂಧ್ರಪ್ರದೇಶದ ಗುಂಟೂರು ಸಿವಿಲ್ ಜಡ್ಜ್ ಜೆ.ವಿ.ವಿ. ಸತ್ಯನಾರಾಯಣ ಮೂರ್ತಿಯವರ ದಾಖಲೆಯನ್ನು ಶೋರಿಯವರು ಹಿಂದಿಕ್ಕಿದ್ದಾರೆ. ಇಂತಹ ಸಾಧನೆಗಳು ದೇಶದ ಇತರ ನ್ಯಾಯಾಧೀಶರುಗಳಿಗೆ ಸ್ಫೂರ್ತಿಯಾಗಲಿ ಎಂದು 'ಬಾರ್' ಆಶಯ ವ್ಯಕ್ತಪಡಿಸಿದೆ.
ಈ ಬೆಳವಣಿಗೆಗೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ. ಶೀಘ್ರ ತೀರ್ಪು ನೀಡುವುದರಿಂದ ನ್ಯಾಯ ಸಂದರೆ ಸಮಸ್ಯೆಯಿಲ್ಲ. ಆದರೆ ನ್ಯಾಯವನ್ನು ನಿರ್ಧಾರ ಮಾಡುವಲ್ಲಿ ದಾಖಲೆಯೇ ಪ್ರಮುಖವಾದರೆ ಅಲ್ಲಿ ಜನತೆ ಬಲಿಪಶುಗಳಾಗುತ್ತಾರೆ. ಹಾಗಾಗದೇ ಇರುವಂತೆ ನ್ಯಾಯಾಧೀಶರುಗಳು ಗಮನ ಹರಿಸಬೇಕಾಗಿದೆ. ಒಟ್ಟಾರೆ ತ್ವರಿತ ನ್ಯಾಯದ ಅಗತ್ಯ ನಮ್ಮ ದೇಶಕ್ಕಿದೆ ಎಂದು ಪಂಜಾಬ್-ಹರ್ಯಾಣ ಹೈಕೋರ್ಟ್ ವಕೀಲರೊಬ್ಬರು ಹೇಳಿದ್ದಾರೆ.