ಹೈದರಾಬಾದ್, ಶುಕ್ರವಾರ, 3 ಸೆಪ್ಟೆಂಬರ್ 2010( 13:13 IST )
ಶ್ರೀಮಂತ ದೇವರು ಎಂದು ಜಗದ್ವಿಖ್ಯಾತಿ ಪಡೆದಿರುವ ತಿರುಪತಿ ಬಾಲಾಜಿಗೂ ವಿಮೆ. ಹೌದು, ತಿರುಮಲ ಬೆಟ್ಟದಲ್ಲಿರುವ ಎಲ್ಲಾ ದೇವಸ್ಥಾನಗಳು ಮತ್ತು ಅಲ್ಲಿನ ರಾಶಿ ರಾಶಿ ಚಿನ್ನಾಭರಣಗಳಿಗೆ 52,000 ಕೋಟಿ ರೂಪಾಯಿಗಳ ವಿಮೆ ಮಾಡಲಾಗುತ್ತಿದೆ.
ಪ್ರತಿದಿನ 70,000ಕ್ಕೂ ಹೆಚ್ಚು ಭಕ್ತಾದಿಗಳು ದರ್ಶನ ಮಾಡುತ್ತಿರುವ ತಿರುಪತಿ ಬಾಲಾಜಿ ದೇವಳಕ್ಕೆ ಪ್ರತಿ ತಿಂಗಳು ಹುಂಡಿ, ಟಿಕೆಟ್ ಮಾರಾಟ, ಲಡ್ಡು ಮತ್ತಿತರ ಮೂಲಗಳಿಂದ 10 ಕೋಟಿ ರೂಪಾಯಿಗಳ ಆದಾಯವಿದೆ.
12ನೇ ಶತಮಾನಕ್ಕೆ ಸೇರಿದ ಚಿನ್ನ, ವಜ್ರ ಸೇರಿದಂತೆ ಒಟ್ಟು 20 ಟನ್ (20,000 ಕೇಜಿ) ಚಿನ್ನಾಭರಣಗಳನ್ನು ತಿರುಮಲ ತಿರುಪತಿ ದೇವಸ್ಥಾನಂ ಹೊಂದಿದೆ. ಹಾಗಾಗಿ ಇವುಗಳ ರಕ್ಷಣೆ ಮುಂದಾಗಿರುವ ಆಡಳಿತ ಮಂಡಳಿಯು, ವಿಮೆ ಮಾಡಿಸಲು ಮುಂದಾಗಿದೆ.
ಆದರೆ ಇಲ್ಲಿ ಸಮಸ್ಯೆಯಾಗಿರುವುದೆಂದರೆ 52,000 ಕೋಟಿ ರೂಪಾಯಿಗಳ ವಿಮೆಗೆ ಯಾವುದೇ ವಿಮಾ ಕಂಪನಿಗಳು ಮುಂದೆ ಬರದೇ ಇರುವುದು. ಎಲ್ಲಾ ಕಂಪನಿಗಳಿಗೂ ಇಷ್ಟೊಂದು ದೊಡ್ಡ ಮೊತ್ತದ ಇನ್ಸೂರೆನ್ಸ್ ಮಾಡುವುದು ಅಪಾಯಕಾರಿಯೆನಿಸಿದೆ.
ಆದರೂ ಅಧಿಕಾರಿಗಳು ಧೃತಿಗೆಟ್ಟಿಲ್ಲ. ಅಂತಾರಾಷ್ಟ್ರೀಯ ಮರು ವಿಮಾ ಸಂಸ್ಥೆಯೊಂದರ ಜತೆ ಒಪ್ಪಂದ ಹೊಂದಿರುವ ದೇಶೀಯ ವಿಮಾ ಸಂಸ್ಥೆಯ ಜತೆ ತಿರುಪತಿ ದೇವಸ್ಥಾನಕ್ಕೆ ಇನ್ಸೂರೆನ್ಸ್ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಸುಮಾರು 12 ದೇವಸ್ಥಾನಗಳನ್ನು ಹೊಂದಿರುವ ತಿರುಮಲ ತಿರುಪತಿ ದೇವಸ್ಥಾನಂ ಪ್ರಸ್ತಾವಿತ ವಿಮೆಯನ್ನು ಮಾಡಿಸುವುದು ಸಾಧ್ಯವಾದರೆ, ದೇಶದ ಎರಡನೇ ಅತಿ ದೊಡ್ಡ ವಿಮಾ ಸೌಲಭ್ಯ ಹೊಂದಿದ ಆಸ್ತಿ ಎಂಬ ದಾಖಲೆ ನಿರ್ಮಾಣವಾಗಲಿದೆ. ಪ್ರಸಕ್ತ 1.22 ಲಕ್ಷ ಕೋಟಿ ರೂಪಾಯಿಗಳ ವಿಮೆ ಹೊಂದಿರುವ ಒಎನ್‌ಜಿಸಿ ಮೊದಲ ಸ್ಥಾನದಲ್ಲಿದೆ.
ಕಳೆದ ವರ್ಷವಷ್ಟೇ ಕರ್ನಾಟಕದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರು 42 ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.