ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡು ದೇಶವನ್ನು ಬ್ರಿಟೀಷರಿಂದ ಮುಕ್ತಿಗೊಳಿಸುವಲ್ಲಿ ತನ್ನದೇ ಪಾತ್ರ ನಿರ್ವಹಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ 125 ವರ್ಷಗಳು ತುಂಬಿದ ಹೊತ್ತಿನಲ್ಲಿ ನಿರಂತರ 12 ವರ್ಷಗಳ ಕಾಲ ಸಾರಥಿಯಾಗಿ ದಾಖಲೆ ನಿರ್ಮಿಸಿರುವ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸತತ ನಾಲ್ಕನೇ ಬಾರಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಗುರುವಾರವಷ್ಟೇ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಹಲವು ನಾಯಕರು ಸೋನಿಯಾ ಹೆಸರನ್ನು ಸೂಚಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮತ ಹಾಕಲು ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳ 7,946 ಸದಸ್ಯರು ಹಕ್ಕು ಹೊಂದಿದ್ದು, ಈ ಹಿಂದೆ ನಿಗದಿಯಾಗಿದ್ದಂತೆ ಎಲ್ಲವೂ ನಡೆಯುತ್ತಿದ್ದರೆ ಜುಲೈ ಅಂತ್ಯದೊಳಗೆ ಸೋನಿಯಾ ಮರು ಆಯ್ಕೆ ನಡೆಯಬೇಕಿತ್ತು. ಆದರೆ ಸಂಸತ್ ಅಧಿವೇಶನ ಮತ್ತಿತರ ರಾಜಕೀಯ ಚಟುವಟಿಕೆಗಳಿಂದಾಗಿ ಇದು ಸಾಧ್ಯವಾಗಿರಲಿಲ್ಲ.
ಸೋನಿಯಾರಿಂದ ದಾಖಲೆ... ಕಳೆದ 12 ವರ್ಷಗಳಿಂದ ಎಐಸಿಸಿ ಅಧ್ಯಕ್ಷೆಯಾಗಿ ಮುಂದುವರಿದಿರುವ ಸೋನಿಯಾರದ್ದು ದಾಖಲೆ. ಇದುವರೆಗೂ ಇಷ್ಟೊಂದು ಸುದೀರ್ಘ ವರ್ಷಗಳ ಕಾಲ ಪಕ್ಷದ ಉನ್ನತ ಹುದ್ದೆಯನ್ನು ಇಟ್ಟುಕೊಂಡ ಉದಾಹರಣೆಗಳಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿ ಸೀತಾರಾಮ್ ಕೇಸರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ 1998ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಸೋನಿಯಾ ಅಧಿನಾಯಕಿಯಾಗಿ ದಶಕ ಪೂರೈಸಿದ ದಾಖಲೆಯನ್ನು ನಿರ್ಮಿಸಿದ್ದಾರೆ.
1885ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಂಘಟನೆಯು ನಂತರದ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ಮಾರ್ಪಟ್ಟಿತ್ತು. ಇಂತಹ ಕಾಂಗ್ರೆಸ್ ಒಂದು ಹಂತದಲ್ಲಿ ಕ್ಷೀಣಿಸಿ ಹೋಗಿತ್ತು. ಆ ಹೊತ್ತಿನಲ್ಲಿ ಪಕ್ಷಕ್ಕೆ ಮರಳಿ ಜೀವ ತುಂಬಿದ್ದು ಸೋನಿಯಾ ಗಾಂಧಿ.
ಈ ಹಿಂದೆಲ್ಲ ಸೋನಿಯಾರವರ ಪಟ್ಟಾಭಿಷೇಕಕ್ಕೆ ಹಲವರ ಆಕ್ಷೇಪಗಳಿದ್ದವು. ಪ್ರಸಕ್ತ ಸ್ಥಿತಿಯಲ್ಲಿ ಅಂತಹ ಯಾರೊಬ್ಬರೂ ಪಕ್ಷದ ಮುಖ್ಯವಾಹಿನಿಯಲ್ಲಿ ಕಾಣಸಿಗುತ್ತಿಲ್ಲ.
1991ರಲ್ಲಿ ಪತಿ ರಾಜೀವ್ ಗಾಂಧಿಯವರನ್ನು ಕಳೆದುಕೊಂಡ ನಂತರ ಕಾಂಗ್ರೆಸ್‌ಗೆ ಬರಲು ಮೀನಾ-ಮೇಷ ಎನಿಸಿದ್ದ ಸೋನಿಯಾ ಕೊನೆಗೂ 1997ರಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿ, ನಂತರದ ವರ್ಷವೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಬಳಿಕ 1999ರಲ್ಲಿ ಬಳ್ಳಾರಿ ಮತ್ತು ಅಮೇಠಿಯಿಂದ ಲೋಕಸಭೆಗೆ ಸ್ಪರ್ಧಿಸಿ, ಎರಡೂ ಕಡೆ ಗೆದ್ದಿದ್ದರು. 2004 ಮತ್ತು 2009ರಲ್ಲಿ ರಾಯ್ ಬರೇಲಿಯಿಂದ ಅವರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಸಕ್ತ ಲೋಕಸಭೆಯಲ್ಲಿ 206 ಹಾಗೂ ರಾಜ್ಯಸಭೆಯಲ್ಲಿ 72 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್, 12 ರಾಜ್ಯಗಳಲ್ಲಿ ತನ್ನದೇ ಪಕ್ಷದ ಆಡಳಿತವನ್ನು ಹೊಂದಿದೆ. ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಗೋವಾ, ಹರ್ಯಾಣ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಪಾಂಡಿಚೇರಿ, ರಾಜಸ್ತಾನ ಮತ್ತು ಮೇಘಾಲಯಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳಿದ್ದಾರೆ.