ಅಯೋಧ್ಯೆಯ ಕುರಿತ ಮಹತ್ವದ ತೀರ್ಪು ಇದೇ ಮಾಸಾಂತ್ಯದಲ್ಲಿ ಹೊರ ಬರಲಿರುವ ಹಿನ್ನೆಲೆಯಲ್ಲಿ ತಾನು ಈಗಾಗಲೇ ರಾಮ ಮಂದಿರ ನಿರ್ಮಾಣದ ಕುರಿತ ರಾಷ್ಟ್ರಾಭಿಮಾನವನ್ನು ಬಡಿದೆಬ್ಬಿಸಲು ರಾಷ್ಟ್ರವ್ಯಾಪಿ ಚಳವಳಿಯನ್ನು ಆರಂಭಿಸಿರುವುದಾಗಿ ವಿಶ್ವ ಹಿಂದೂ ಪರಿಷತ್ ತಿಳಿಸಿದೆ.
ಜನರ ಧಾರ್ಮಿಕ ಭಾವನೆಗಳನ್ನು ನ್ಯಾಯಾಲಯಗಳು ನಿರ್ಧರಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ ಒಂದು ಪಕ್ಷವಾಗಿರದ ಹೊರತಾಗಿಯೂ ರಾಮ ಮಂದಿರ ನಿರ್ಮಾಣದ ಕುರಿತು ರಾಷ್ಟ್ರೀಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಗಸ್ಟ್ 16ರಿಂದ ಚಳವಳಿಗೆ ಚಾಲನೆ ನೀಡಲಿದೆ. ಇದು ನವೆಂಬರ್ 16ರವರೆಗೆ ಮುಂದುವರಿಯಲಿದೆ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ಸುರೇಂದ್ರ ಜೈನ್ ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಪಡೆದುಕೊಳ್ಳುವ ಸಲುವಾಗಿ ದೇಶದ ವಿವಿಧ 10,000 ಸ್ಥಳಗಳಲ್ಲಿ ಏಕಕಾಲದಲ್ಲಿ 'ಜನಜಾಗರಣ' ರ‌್ಯಾಲಿ ನಡೆಯಲಿದೆ. ಅಲ್ಲದೆ ವಿವಾದಿತ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಿಸಲು ಅನುವಾಗುವಂತೆ ಕಾನೂನು ರೂಪಿಸಲು ಬೆಂಬಲ ನೀಡಬೇಕು ಎಂದು ಎಲ್ಲಾ ಸಂಸದರಿಗೂ ಸಂಘಟನೆ ಪತ್ರ ಬರೆಯಲಿದೆ ಎಂದರು.
ಸಂಸತ್ತಿನಲ್ಲಿ ಚರ್ಚೆಯಾಗಬೇಕು: ಆರೆಸ್ಸೆಸ್ ಇದೇ ತಿಂಗಳು ಅಯೋಧ್ಯೆ ಕುರಿತು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪನ್ನು ನೀಡಿದ ನಂತರ ರಾಮ ಜನ್ಮಭೂಮಿ ಕುರಿತು ರಾಷ್ಟ್ರೀಯ ಸಾಮರಸ್ಯ ರೂಪಿಸಲು ಸಂಸತ್ತಿನಲ್ಲಿ ಚರ್ಚೆ ನಡೆಯುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ತೀರ್ಪಿನ ನಂತರ ಈ ಕುರಿತು ಸಂಸತ್ತಿನಲ್ಲಿ ಸಮಗ್ರ ಚರ್ಚೆಯಾಗಬೇಕು ಎಂದು ನಾವು ಬಯಸುತ್ತಿದ್ದೇವೆ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ತಿಳಿಸಿದರು.
ಅದೇ ಹೊತ್ತಿಗೆ ರಾಮಮಂದಿರ ವಿಚಾರವನ್ನು ರಾಜಕೀಕರಣಗೊಳಿಸಬಾರದು ಎಂದು ಬಿಜೆಪಿಗೆ ಆರೆಸ್ಸೆಸ್ ಎಚ್ಚರಿಕೆಯನ್ನೂ ನೀಡಿದೆ.
ಆರೆಸ್ಸೆಸ್ ಯಾವುದೇ ರೀತಿಯ ಹಿಂಸೆಯ ವಿರುದ್ಧವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಲಿದ್ದು, ಯಾವುದೇ ರೀತಿಯ ವಿವಾದ ಅಥವಾ ಉದ್ವಿಗ್ನತೆಯನ್ನು ತಪ್ಪಿಸಲು ನಾವು ಬಯಸುತ್ತಿದ್ದೇವೆ ಎಂದು ಮಾಧವ್ ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಬಿಜೆಪಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರವನ್ನು ನಿರ್ಮಿಸುವ ವಿಚಾರದಲ್ಲಿ ಬಿಜೆಪಿ ತನ್ನ ನಿಲುವು ಬದಲಾಯಿಸಿಲ್ಲ ಎಂದಿರುವ ಪಕ್ಷದ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, ನ್ಯಾಯಾಲಯದಿಂದ ತೀರ್ಪು ಹೊರಬರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸುವ ಕುರಿತು ಬಿಜೆಪಿಯ ನಿಲುವು ಸ್ಪಷ್ಟವಾಗಿದೆ ಮತ್ತು ಇದಕ್ಕೆ ಬಿಜೆಪಿ ಬದ್ಧ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನಾವು ಈಗ ನೀಡುವುದಿಲ್ಲ. ನ್ಯಾಯಾಲಯದ ತೀರ್ಪು ಬರಲಿ, ನಂತರ ನೋಡೋಣ ಎಂದು ತಿಳಿಸಿದರು.
ರಾಮ ನಮ್ಮೆಲ್ಲರಿಗೆ ಮತ್ತು ದೇಶಕ್ಕೆ ಮಾದರಿ. ಯಾವುದೇ ಕಾರಣಕ್ಕೂ ರಾಮನನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಧರ್ಮಾತೀತವಾಗಿ ಪ್ರತಿಯೊಬ್ಬ ವ್ಯಕ್ತಿಯೂ ರಾಮ ನಮ್ಮ ದೇಶದ ಸಾಂಸ್ಕೃತಿಕ ಮಾದರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಬಹುತೇಕ ಮುಸ್ಲಿಮರು ಕೂಡ ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಎಂದು ಒಪ್ಪಿಕೊಂಡಿದ್ದಾರೆ. ಕೆಲವರಷ್ಟೇ ಇದಕ್ಕೆ ರಾಜಕೀಯ ಬಣ್ಣ ಹಚ್ಚಲು ಯತ್ನಿಸುತ್ತಿದ್ದಾರೆ ಎಂದು ಪ್ರಕರಣವನ್ನು ವಿಶ್ಲೇಷಿಸಿದರು.