ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತಾವಧಿಯಲ್ಲಿ ಬಿಹಾರ ಅಭಿವೃದ್ಧಿ ಕಾರ್ಯಗಳಿಲ್ಲದೆ ನಲುಗಿದೆ ಎಂದು ಹೇಳಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ರಾಜ್ಯದಲ್ಲಿ ಪ್ರಚಾರ ಮಾಡುವ ಮೊದಲು ಪೂರಕ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದೆ.
ಅವರ ಪಕ್ಷದ ಪರವಾಗಿ ಬಿಹಾರದಲ್ಲಿ ಪ್ರಚಾರ ಮಾಡಲು ರಾಹುಲ್ ಅವರಿಗೆ ಹಕ್ಕು ಇದೆ. ಆದರೆ ಅದಕ್ಕಾಗಿ ಅವರು ಸೂಕ್ತ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬಹುಶಃ ಅವರಿಗೆ ಅವರ ರಾಜಕೀಯ ಸಲಹೆಗಾರರು ಸರಿಯಾದ ಮಾಹಿತಿಗಳನ್ನು ನೀಡಿಲ್ಲ ಎಂದೆನಿಸುತ್ತದೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಅಭಿಪ್ರಾಯಪಟ್ಟರು.
ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಮತ್ತು ನಂತರ ಅವರ ಪತ್ನಿ ರಾಬ್ರಿ ದೇವಿ ರಾಜ್ಯವನ್ನು 15 ವರ್ಷಗಳ ಕಾಲ ಆಳಿದ ಸಂದರ್ಭದಲ್ಲಿ ಪ್ರಗತಿಯ ಕುರಿತು ರಾಹುಲ್ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದೂ ಪ್ರಸಾದ್ ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಪ್ರಗತಿ ಆಗಿರುವುದೇ ನಿಜವಾಗಿದ್ದಲ್ಲಿ, ಇಲ್ಲಿನ ಜನ ಮುಂಬೈ, ಹರ್ಯಾಣ, ಪಂಜಾಬ್ ಮತ್ತು ದೆಹಲಿಗಳಿಗೆ ಜೀವನ ಸಾಗಿಸಲು ಯಾಕೆ ವಲಸೆ ಹೋಗುತ್ತಿದ್ದರೆ ಎಂದು ರಾಹುಲ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ರಾಹುಲ್ ಯುವಜನತೆಯನ್ನು ಸೆಳೆದುಕೊಳ್ಳುತ್ತಿದ್ದಾರೆ ಎಂಬ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಬಿಜೆಪಿ ಮುಖಂಡ, ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿಕೆಗಳನ್ನು ನೀಡುತ್ತಿರುವ ಹೊತ್ತಿನಲ್ಲಿ ಅತ್ತ ಅವರ ಮೂಗಿನಡಿಯಲ್ಲಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ ಧೂಳೀಪಟವಾಗಿದೆ ಎಂಬುದನ್ನು ಉದಾಹರಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಬಿಹಾರ ವಿಧಾನಸಭಾ ಚುನಾವಣೆಗಳಿಗಾಗಿ ಪ್ರಚಾರ ಮಾಡಲಿದ್ದಾರೆಯೇ ಎಂಬ ಪ್ರಶ್ನೆಯೂ ಪ್ರಸಾದ್ ಅವರಿಗೆ ಎದುರಾಯಿತು.
ಈ ಕುರಿತು ಪಕ್ಷವು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ. ಅಷ್ಟಕ್ಕೂ ಇದು ಪಕ್ಷಕ್ಕೆ ಕಳವಳ ತರುವ ವಿಚಾರವೇನಲ್ಲ ಎಂದರು.