ತಿರುಚನಾಪಳ್ಳಿ, ಬುಧವಾರ, 8 ಸೆಪ್ಟೆಂಬರ್ 2010( 16:45 IST )
ಕರ್ನಾಟಕವು ಸಾಕಷ್ಟು ಕಾವೇರಿ ನೀರನ್ನು ರಾಜ್ಯಕ್ಕೆ ಹರಿಸದೇ ಇದ್ದರೆ ಕೇಂದ್ರ ಸರಕಾರದ ಮೊರೆ ಹೋಗುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಬುಧವಾರ ತಿಳಿಸಿದ್ದಾರೆ.
ನ್ಯಾಯಾಧಿಕರಣ ಅಸ್ತಿತ್ವಕ್ಕೆ ಬಂದ ನಂತರ ಮತ್ತು ಅದು ತೀರ್ಪು ನೀಡಿದ ಬಳಿಕ ಉಂಟಾಗಿರುವ ಕಾನೂನು ಸಮಸ್ಯೆಗಳ ಬಗ್ಗೆ ನಿಮಗೆಲ್ಲ ತಿಳಿದಿದೆ. ಕಾವೇರಿ ನದಿಪಾತ್ರದ ರೈತರಿಗೆ ಬೇಸಾಯ ಮಾಡಲು ಸಾಕಷ್ಟು ನೀರು ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಮಾನವೀಯತೆ ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಮಾತುಕತೆ ನಡೆಸುತ್ತಾ ಬಂದಿವೆ ಎಂದರು.
ಪ್ರಸಕ್ತ ಸುಪ್ರೀಂ ಕೋರ್ಟಿನಲ್ಲಿರುವ ಪ್ರಕರಣವು ಮುಂದಿನ ವರ್ಷ ಪರಿಹಾರ ಕಾಣಬಹುದೇ ಎಂದು ಪತ್ರಕರ್ತರು ಮುಖ್ಯಮಂತ್ರಿಯವರಲ್ಲಿ ಪ್ರಶ್ನಿಸಿದಾಗ, ಈ ಕುರಿತು ನಾವು ಪ್ರಯತ್ನಿಸಬಹುದು, ಅಷ್ಟೇ ಎಂದರು.
2007ರ ಫೆಬ್ರವರಿಯಲ್ಲಿ ಕಾವೇರಿ ಜಲ ವಿವಾದ ನ್ಯಾಯಾಧೀಕರಣ (ಸಿಡಬ್ಲ್ಯೂಡಿಟಿ) ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿರುವ ಕರ್ನಾಟಕ ಸರಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಲ್ಲಿ ದೊರೆತ ಮಧ್ಯಂತರ ತೀರ್ಪಿನಂತೆ, ತಮಿಳುನಾಡಿಗೆ ಕರ್ನಾಟಕವು 205 ಟಿಎಂಸಿ ನೀರನ್ನು ವಾರ್ಷಿಕವಾಗಿ ಬಿಡಲು ಆದೇಶ ನೀಡಲಾಗಿತ್ತು.
ಮಳೆ ಕಡಿಮೆಯಾಗುತ್ತಿರುವ ಕಾರಣ ಸದ್ಯ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಈ ಹಿಂದೆ ಹೇಳಿತ್ತು. ಆದರೆ ಶನಿವಾರ ತಮಿಳುನಾಡಿನಲ್ಲೇ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಾಕಷ್ಟು ಮಳೆ ಬಂದರೆ ನೀರು ಬಿಡುವುದಾಗಿ ಹೇಳಿದ್ದರು.
ಪ್ರಸಕ್ತ ಕಾವೇರಿ ನದಿಪಾತ್ರದಲ್ಲಿ ಅತ್ಯುತ್ತಮ ಮಳೆಯಾಗುತ್ತಿದೆ. ಇದು ಮುಂದುವರಿದಲ್ಲಿ ತಮಿಳುನಾಡಿಗೆ ನೀರು ಹರಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದರು.