ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಒಡೆತನ ಯಾರಿಗೆ?; ಸೆ.24ಕ್ಕೆ ಅಂತಿಮ ತೀರ್ಪು (Ayodhya | Babri Masjid | Ram Janmabhoomi | VHP)
Bookmark and Share Feedback Print
 
125 ವರ್ಷಗಳಷ್ಟು ಹಳೆಯದಾದ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಕಾನೂನು ಹೋರಾಟದ ಬಹುನಿರೀಕ್ಷಿತ ಅಂತಿಮ ತೀರ್ಪು ಸೆಪ್ಟೆಂಬರ್ 24ರಂದು ಹೊರ ಬೀಳಲಿದೆ.

ಅಲಹಾಬಾದ್ ಹೈಕೋರ್ಟ್‌ನ ವಿಶೇಷ ಪೀಠವು ಪ್ರಕರಣದ ತೀರ್ಪನ್ನು ಸೆ.24ರಂದು ನೀಡಲಿದೆ ಎಂದು ಕೋರ್ಟ್ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಇಂದು ಪ್ರಕರಣವನ್ನು ಕೈಗೆತ್ತಿಕೊಂಡ ಪೀಠವು, ಸಂಬಂಧಪಟ್ಟ ಎಲ್ಲಾ ವಾದಿಗಳೂ ಸೆಪ್ಟೆಂಬರ್ 24ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಸೂಚನೆ ನೀಡಿತು. ಇದನ್ನು ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ವಕೀಲ ಜಾಫರ್‌ಯಾಬ್ ಜಿಲಾನಿ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಹಿಂದೂಗಳಿಗೋ, ಮುಸ್ಲಿಮರಿಗೋ?; ದಿನಗಣನೆ

ಸುದೀರ್ಘ ಕಾಲ ನಡೆದಿದ್ದ ಪ್ರಕರಣದ ವಿಚಾರಣೆಯನ್ನು ಜುಲೈ ತಿಂಗಳಲ್ಲಿ ಮುಗಿಸಿದ್ದ ನ್ಯಾಯಮೂರ್ತಿ ಎಸ್.ಯು. ಖಾನ್, ಡಿ.ವಿ. ಶರ್ಮಾ ಮತ್ತು ಸುಧೀರ್ ಅಗರ್ವಾಲ್ ಅವರನ್ನೊಳಗೊಂಡ ತ್ರಿಸದಸ್ಯ ವಿಶೇಷ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು.

ಆ ಬಳಿಕ ಅಂತಿಮ ತೀರ್ಪಿನ ದಿನಾಂಕದ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದವು. ಪ್ರಕರಣದಲ್ಲಿ ಧಾರ್ಮಿಕ ಮತ್ತು ರಾಜಕೀಯ ಭಾವನೆಗಳು ಕೂಡ ಅಡಗಿರುವುದರಿಂದ ತೀರ್ಪು ದೇಶದ ರಾಜಕೀಯ ವ್ಯವಸ್ಥೆಯ ಮೇಲೂ ಭಾರೀ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಈ ಹಿಂದೆ ಸೆಪ್ಟೆಂಬರ್ 17ರಂದು ಕೋರ್ಟ್ ತನ್ನ ಮಹತ್ವದ ತೀರ್ಪನ್ನು ನೀಡಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಸೆ.24ರಂದು ತೀರ್ಪು ನೀಡಲಿದೆ ಎಂದು ರಿಜಿಸ್ಟ್ರಾರ್ ಹೇಳುವುದರೊಂದಿಗೆ ಗೊಂದಲಗಳಿಗೆ ತೆರೆ ಬಿದ್ದಿದೆ.

ತನ್ನ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್ ಮೂರು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲಿದೆ.

1) ಅಯೋಧ್ಯೆಯಲ್ಲಿನ ವಿವಾದಿತ ಸ್ಥಳವು ರಾಮನ ಜನ್ಮ ಸ್ಥಳವೇ?
2) ಅಲ್ಲಿದ್ದ ದೇವಳವನ್ನು ಧ್ವಂಸಗೊಳಿಸಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗಿತ್ತೇ?
3) ಬಾಬ್ರಿ ಮಸೀದಿಯನ್ನು ಇಸ್ಲಾಂ ತತ್ವಗಳ ಅನುಸಾರ ಕಟ್ಟಲಾಗಿತ್ತೇ?

ತೀರ್ಪು ಯಾರ ಪರ ಬಂದರೂ ಹಿಂಸಾಚಾರ ನಡೆಯಬಹುದೆಂಬ ಭೀತಿಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರವು ಅರೆ ಸೇನಾಪಡೆಗಳನ್ನು ಕಳುಹಿಸಿಕೊಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ಇತರ ರಾಜ್ಯಗಳು ಕೂಡ ಬಹುನಿರೀಕ್ಷಿತ ಫಲಿತಾಂಶದ ಹಿನ್ನೆಲೆಯಲ್ಲಿ ಭದ್ರತೆ ಬಿಗುಗೊಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ