ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್‌ನನ್ನು 10 ಕೋಟಿ ರೂಪಾಯಿ ಹಣಕ್ಕಾಗಿ ಹತ್ಯೆಗೈಯಲಾಗಿತ್ತು ಮತ್ತು ಈ ಸಂಬಂಧ ಬಿಜೆಪಿ ನಾಯಕರುಗಳ ನಡುವೆ ಡೀಲ್ ನಡೆದಿತ್ತು ಎಂದು ಆರೋಪಿಸಿದ್ದ ಆಜಂ ಖಾನ್ ಎಂಬವರನ್ನು ಗುಂಡಿಕ್ಕಿ ಕೊಲ್ಲಲು ವಿಫಲ ಯತ್ನ ನಡೆಸಲಾಗಿದೆ.
ವರದಿಗಳ ಪ್ರಕಾರ ಮಂಗಳವಾರ ಸಂಜೆ ರಾಜಸ್ತಾನದ ಉದಯ್ಪುರದಲ್ಲಿ ಈ ಘಟನೆ ನಡೆದಿದೆ. ನಗರದ ಹೊರವಲಯದಲ್ಲಿದ್ದ ಖಾನ್ ಅವರ ಮೇಲೆ ಇಬ್ಬರು ಅಪರಿಚಿತ ಬಂದೂಕುದಾರಿಗಳು ಗುಂಡು ಹಾರಿಸಿದ್ದಾರೆ.
ದಾಳಿಕೋರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಪ್ರಮುಖ ಸಾಕ್ಷಿ ಖಾನ್, ಕೈಗೆ ಗಾಯವಾಗಿದೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಉದಯ್ಪುರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ದಾಳಿ ವಿಫಲವಾಗುತ್ತಿದ್ದಂತೆ ದುಷ್ಕರ್ಮಿಗಳು ತಕ್ಷಣವೇ ಅಲ್ಲಿಂದ ಪರಾರಿಯಾದರು ಎಂದು ಹೇಳಲಾಗಿದೆ.
ಉದಯ್ಪುರದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಉದಯಸಾಗರ ರಸ್ತೆಯಲ್ಲಿ ತನ್ನ ಸ್ನೇಹಿತ ಇಕ್ಬಾಲ್ ಜತೆ ಕಾರಿನಲ್ಲಿ ಹೋಗುತ್ತಿದ್ದ ಆಜಂ ಅವರ ಮೇಲೆ ಬೈಕಿನಲ್ಲಿ ಇಬ್ಬರು ಅಪರಿಚಿತರು ಏಕಾಏಕಿ ಗುಂಡು ಹಾರಿಸಿದ್ದರು. ತಕ್ಷಣವೇ ಸ್ನೇಹಿತ ಆಜಂ ಅವರನ್ನು ಇಲ್ಲಿ ಎಂಬಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಇದಾದ ಕೆಲವೇ ಹೊತ್ತಿನಲ್ಲಿ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದು, ಆಜಂ ಅವರಿಗೆ ರಕ್ಷಣೆ ಒದಗಿಸಿದರು. ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಜೀವ ಬೆದರಿಕೆ ಇದೆ ಎಂದಿದ್ದರು... ಸೊಹ್ರಾಬುದ್ದೀನ್ ಹತ್ಯೆಗಾಗಿ ಮಾರ್ಬಲ್ ವ್ಯಾಪಾರಿಗಳು ಮತ್ತು ರಾಜಸ್ತಾನದ ಮಾಜಿ ಗೃಹಸಚಿವರ ನಡುವೆ 10 ಕೋಟಿ ರೂಪಾಯಿಗಳ ವ್ಯವಹಾರ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿ ಸಾಕ್ಷಿ ಆಜಂ ಆರೋಪಿಸಿದ್ದರು.
ಸೊಹ್ರಾಬುದ್ದೀನ್ ಹತ್ಯೆಯ ಏಕೈಕ ಸಾಕ್ಷಿ ತುಳಸೀರಾಮ್ ಪ್ರಜಾಪತಿಯೊಂದಿಗೆ ಜೈಲಿನಲ್ಲಿ ಕೊಠಡಿ ಹಂಚಿಕೊಂಡಿದ್ದ ಆಜಂ, ಬಿಜೆಪಿ ನಾಯಕ ಮತ್ತು ರಾಜಸ್ತಾನದ ಮಾಜಿ ಗೃಹಸಚಿವ ಗುಲಾಬ್ ಚಾಂದ್ ಕಠಾರಿಯಾ ಅವರಿಗೆ ಸೊಹ್ರಾಬುದ್ದೀನ್‌ನನ್ನು ಮುಗಿಸುವಂತೆ ಆರ್.ಕೆ. ಮಾರ್ಬಲ್ಸ್ 10 ಕೋಟಿ ರೂಪಾಯಿಗಳನ್ನು ನೀಡಿತ್ತು. ಸೊಹ್ರಾಹುದ್ದೀನ್ ಮಾರ್ಬಲ್ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು ಎಂದು ಹೇಳಿದ್ದರು.
ಸೊಹ್ರಾಬುದ್ದೀನ್ ಕೊಲೆಯನ್ನು ನೋಡಿದ್ದ ಕಾರಣಕ್ಕಾಗಿ ಗುಜರಾತ್ ಮತ್ತು ರಾಜಸ್ತಾನ ಪೊಲೀಸರು ನಕಲಿ ಎನ್‌ಕೌಂಟರ್ ಮೂಲಕ ತುಳಸೀರಾಂನನ್ನು ಮುಗಿಸಿದ್ದರು. ಇಷ್ಟೆಲ್ಲ ಮಾಹಿತಿಗಳನ್ನು ಹೊಂದಿರುವ ನನ್ನ ಜೀವವೂ ಈಗ ಅಪಾಯದಲ್ಲಿದೆ. ಸತತವಾಗಿ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆಜಂ ಖಾನ್ ತಿಳಿಸಿದ್ದರು.