ಅಯೋಧ್ಯೆ ಒಡೆತನದ ಕುರಿತ ತೀರ್ಪನ್ನು ಮುಂದಕ್ಕೆ ಹಾಕಲು ಅಲಹಾಬಾದ್ ಉಚ್ಚ ನ್ಯಾಯಾಲಯವು ನಿರಾಕರಿಸಿರುವುದು ಸ್ವಾಗತಾರ್ಹ ನಡೆ ಎಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಈಗಾಗಲೇ ಸಾಕಷ್ಟು ವಿಳಂಬವಾಗಿದೆ; ಮತ್ತಷ್ಟು ಮುಂದಕ್ಕೆ ಹಾಕುವುದು ಸರಿಯಲ್ಲ ಎಂದಿದೆ.
ಸೆಪ್ಟೆಂಬರ್ 25ರಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ನೀಡಲಿರುವ ತೀರ್ಪನ್ನು ಮುಂದಕ್ಕೆ ಹಾಕಬೇಕು ಎಂದು ಮಾಡಲಾಗಿದ್ದ ಮೂರೂ ಮನವಿಗಳನ್ನು ನಿನ್ನೆಯಷ್ಟೇ ನ್ಯಾಯಾಲಯವು ತಿರಸ್ಕರಿಸಿತ್ತು. ಅಲ್ಲದೆ ಓರ್ವ ಅರ್ಜಿದಾರನಿಗೆ 10 ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತ್ತು.
ಇದನ್ನು ಸ್ವಾಗತಿಸಿರುವ ಆರೆಸ್ಸೆಸ್ ವಕ್ತಾರ ರಾಮ್ ಮಾಧವ್, ತೀರ್ಪನ್ನು ವಿಳಂಬಗೊಳಿಸಲು ಮಾಡಲಾದ ಅನಗತ್ಯ ಯತ್ನವದು. ಈ ನಿಟ್ಟಿನಲ್ಲಿ ನ್ಯಾಯಾಲಯದ ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿಯೇ ಇದೆ ಎಂದರು.
ತೀರ್ಪಿನಿಂದ ಉದ್ಭವಿಸಬಹುದಾದ ಸಂಭಾವ್ಯ ಪರಿಸ್ಥಿತಿಯನ್ನು ನಿಯಂತ್ರಿಸಲು ಕಷ್ಟವಾಗಬಹುದು ಎಂಬ ವರದಿಗಳಿಗೂ ಆರೆಸ್ಸೆಸ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ.
ಶಾಂತಿಯನ್ನು ಕಾಪಾಡಿಕೊಳ್ಳಲು ಸಂಘಟನೆ ಎಲ್ಲಾ ರೀತಿಯ ಯತ್ನಗಳನ್ನೂ ಮಾಡಲಿದೆ. ನಮ್ಮದು ಕಾನೂನಿನ ಪರಿಧಿಯೊಳಗಿರುವ ಸಂಘಟನೆ. ಜನತೆ ಯಾವುದೇ ಕಾರಣಕ್ಕೂ ಅಶಾಂತಿಗೆ ಎಡೆ ಮಾಡಿಕೊಡಬಾರದು ಎಂದು ಮಾಧವ್ ಮನವಿ ಮಾಡಿಕೊಂಡಿದ್ದಾರೆ.
ಅಯೋಧ್ಯೆ ಒಡೆತನದ ಕುರಿತು ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ವಿವಾದಿತ ಸ್ಥಳದಲ್ಲೇ ಮಸೀದಿ ಬೇಕೆಂದು ಮುಸ್ಲಿಮರು ಬೇಡಿಕೆಯಿಡುತ್ತಿದ್ದಾರೆ. ಹಿಂದೂಗಳು ರಾಮ ಮಂದಿರ ಬೇಕು ಎಂದು ಹೇಳುತ್ತಾರೆ. ರಾಮಜನ್ಮ ಸ್ಥಾನದಲ್ಲೇ ರಾಮಮಂದಿರ ನಿರ್ಮಾಣವಾಗಬೇಕೆನ್ನುವುದು ಸಂಘ ಪರಿವಾರದ ನಿಲುವು. ಹಾಗಾಗಿ ಇದಕ್ಕೆ ನ್ಯಾಯಾಲಯವೇ ಸೂಕ್ತ ಪರಿಹಾರ ನೀಡಬೇಕಾಗಿದೆ ಎಂದರು.
ತೀರ್ಪು ಹಿಂದೂಗಳ ಪರವಾಗಿ ಬಂದರೆ ಸ್ವಾಗತ ಮಾಡಲಾಗುತ್ತದೆ. ಜನ್ಮಸ್ಥಾನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡದ ತೀರ್ಪು ಬಂದರೆ ಅದರ ವಿರುದ್ಧ ನಾವು ಹಿಂದೂಗಳು ನಿಲ್ಲುತ್ತೇವೆ ಮತ್ತು ಸೂಕ್ತ ಕಾನೂನು ರಚನೆಗೆ ಒತ್ತಾಯಿಸುತ್ತೇವೆ ಎಂದು ಮಾಧವ್ ತಿಳಿಸಿದರು.