ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್-ವಕೀಲರು ರಹಸ್ಯ ಮಾತಿಗೆ ಅವಕಾಶವಿಲ್ಲ: ಹೈಕೋರ್ಟ್
(Pakistani terrorist | Ajmal Kasab | Bombay HC | death sentence)
2008ರ ಮುಂಬೈ ದಾಳಿಯಲ್ಲಿನ ತನ್ನ ಪಾತ್ರಕ್ಕಾಗಿ ಪಡೆದುಕೊಂಡಿರುವ ಮರಣ ದಂಡನೆ ಶಿಕ್ಷೆ ಖಚಿತಗೊಳಿಸುವ ಪ್ರಕರಣದಲ್ಲಿ ವಕೀಲರುಗಳ ಜತೆ ರಹಸ್ಯ ಮಾತುಕತೆಗೆ ಅನುವು ಮಾಡಿಕೊಡಬೇಕೆಂಬ ಅಜ್ಮಲ್ ಕಸಬ್ ಮನವಿಯನ್ನು ಪಾಕ್ ಭಯೋತ್ಪಾದಕನ ಹಿಂದಿನ ದಾಖಲೆಗಳು ಮತ್ತು ಆಕ್ರಮಣಕಾರಿ ವರ್ತನೆಯನ್ನು ಗಮನಕ್ಕೆ ತೆಗೆದುಕೊಂಡ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ.
ಸರಕಾರಿ ವಕೀಲ ಉಜ್ವಲ್ ನಿಕ್ಕಂ ಒದಗಿಸಿರುವ, ಜೈಲು ಸಿಬ್ಬಂದಿಗಳ ಮೇಲೆ ಸೆಪ್ಟೆಂಬರ್ 1ರಂದು ಕಸಬ್ ನಡೆಸಿರುವ ದಾಳಿಯ ವೀಡಿಯೋ ಚಿತ್ರಣವನ್ನು ನಾವು ನೋಡಿದ್ದೇವೆ. ಅಲ್ಲದೆ ಜೈಲಿನಲ್ಲಿರುವ ಸಂದರ್ಭದಲ್ಲಿ ಕಸಬ್ ಈ ಹಿಂದೆ ತೋರಿಸಿರುವ ಆಕ್ರಮಣಕಾರಿ ವರ್ತನೆಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ ಎಂದು ಕಸಬ್ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆ ತಿಳಿಸಿದರು.
ಇಂತಹ ಸ್ವರೂಪವಿರುವ ಪ್ರಕರಣದಲ್ಲಿ ನ್ಯಾಯಾಲಯವು ಕಸಬ್‌ಗಿರುವ ಬೆದರಿಕೆಯನ್ನು ಪ್ರಶ್ನಿಸುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಸುರಕ್ಷತೆಯು ಇತರೆಲ್ಲ ವಿಚಾರಗಳನ್ನು ಮೀರಿ ನಿಲ್ಲುತ್ತದೆ. ಹಾಗಾಗಿ ಜೈಲು ಸಿಬ್ಬಂದಿ ಮತ್ತು ಪೊಲೀಸರಿಂದ ಕಣ್ಣಲತೆ ದೂರದಲ್ಲಿ ವಕೀಲರುಗಳ ಜತೆ ಮಾತುಕತೆ ನಡೆಸಲು ಅವಕಾಶ ನೀಡಬೇಕೆಂಬ ಕಸಬ್ ಮನವಿಯನ್ನು ತಳ್ಳಿ ಹಾಕುತ್ತಿದ್ದೇವೆ ಎಂದು ದ್ವಿಸದಸ್ಯ ಪೀಠವು ತಿಳಿಸಿತು.
ಕಸಬ್‌ನನ್ನು ಇಡಲಾಗಿರುವ ಜೈಲಿನ ಒಳಗಡೆ ಮತ್ತು ಹೊರಗಡೆ ಸಾಕಷ್ಟು ಭದ್ರತೆಯನ್ನು ನಿಯೋಜಿಸಲಾಗಿದೆ. ಪ್ರಸಕ್ತ ಹೈಕೋರ್ಟಿನಲ್ಲಿರುವ ಪ್ರಕರಣದ ಕುರಿತು ತಮಗೆ ಕೆಲವು ನಿರ್ದೇಶನಗಳನ್ನು ನೀಡಲು ಕಕ್ಷಿಗಾರ ಬಯಸುತ್ತಿದ್ದು, ಅದಕ್ಕೆ ಪೊಲೀಸರು ಮತ್ತು ಜೈಲು ಸಿಬ್ಬಂದಿಗಳಿರದ ಮುಕ್ತ ವಾತಾವರಣವನ್ನು ಆತ ಬಯಸುತ್ತಿದ್ದಾನೆ ಎಂದು ಕಸಬ್ ವಕೀಲ ಅಮೀನ್ ಸೋಲ್ಕರ್ ವಾದಿಸಿದ್ದರು.
ಕಸಬ್ ಮನವಿಯನ್ನು ತೀವ್ರವಾಗಿ ವಿರೋಧಿಸಿದ್ದ ನಿಕ್ಕಂ, ಆತ ತರಬೇತಿ ಪಡೆದಿರುವ ಕಮಾಂಡೋ ಮತ್ತು ಯಾವುದೇ ಕ್ಷಣದಲ್ಲಿ ಸ್ವತಃ ತನ್ನ ಜೀವ ಮತ್ತು ಜೈಲಿನಲ್ಲಿರುವ ಇತರ ಸಿಬ್ಬಂದಿಗಳ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಸಾಧ್ಯತೆಗಳಿರುವುದರಿಂದ ಏಕಾಂಗಿಯಾಗಿ ವಕೀಲರುಗಳ ಜತೆ ಮಾತುಕತೆ ನಡೆಸಲು ಅವಕಾಶ ನೀಡುವುದು ಸರಿಯಲ್ಲ ಎಂದಿದ್ದರು.
ಅಲ್ಲದೆ ಈ ಸಂಬಂಧ ಕಸಬ್ ವರ್ತನೆಗಳ ವಿವರಣೆಗಳನ್ನೊಳಗೊಂಡ ಸಿಡಿ ಮತ್ತಿತರ ದಾಖಲೆಗಳನ್ನು ನಿಕ್ಕಂ ನ್ಯಾಯಾಲಯಕ್ಕೆ ಒದಗಿಸಿದ್ದರು. ಇದರಲ್ಲಿ ಕಸಬ್‌ನನ್ನು ಜೈಲಿನೊಳಗೆ ವಿಚಾರಣೆ ನಡೆಸಿರುವ ಸಂದರ್ಭದಲ್ಲಿನ ಆತನ ವರ್ತನೆಗಳ ಚಿತ್ರಣವೂ ಇತ್ತು.