ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪನ್ನು ಗೌರವಿಸಿ: ಜನತೆಗೆ ಕಾಂಗ್ರೆಸ್, ಬಿಜೆಪಿ (Ayodhya verdict | P Chidambaram | BJP | Manmohan Singh)
Bookmark and Share Feedback Print
 
ಗುರುವಾರ ಅಪರಾಹ್ನ 3.30ಕ್ಕೆ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ನೀಡಲಿರುವ ಅಯೋಧ್ಯೆ ಒಡೆತನದ ತೀರ್ಪನ್ನು ಗೌರವಿಸುವಂತೆ ಕೇಂದ್ರ ಸರಕಾರ, ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ಜನತೆಯಲ್ಲಿ ಮನವಿ ಮಾಡಿಕೊಂಡಿದೆ.

ಇದನ್ನೂ ಓದಿ: ತೀರ್ಪಿನ ನಿರೀಕ್ಷೆ; ಭಣಗುಡುತ್ತಿದೆ ಅಯೋಧ್ಯೆ | ಎಲ್ಲೆಲ್ಲೂ ಮೌನ

ಶಾಂತಿ ಮತ್ತು ಸಾಮರಸ್ಯವನ್ನು ಕಾಯ್ದುಕೊಳ್ಳುವಂತೆ ನಾನು ಸೆಪ್ಟೆಂಬರ್ 22ರಂದೇ ಜನತೆಗೆ ಮನವಿ ಮಾಡಿದ್ದೇನೆ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದಿಂದಾಗಿ ತೀರ್ಪು ಆರು ದಿನ ವಿಳಂಬವಾಗಿರುವುದರಿಂದ, ಹೈಕೋರ್ಟ್ ತೀರ್ಪನ್ನು ಗೌರವಿಸುವ ಕುರಿತು ಬದ್ಧತೆ ಪ್ರದರ್ಶಿಸಲು ರಾಜಕೀಯ ಪಕ್ಷಗಳು ಮತ್ತು ಪ್ರಕರಣದ ವಾದಿಗಳಿಗೆ ಅವಕಾಶ ಸಿಕ್ಕಿದಂತಾಗಿದೆ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ತೀರ್ಪಿನ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದೇಶದಾದ್ಯಂತ ಸಾಕಷ್ಟು ರಕ್ಷಣಾ ಪಡೆಗಳನ್ನು ಕೇಂದ್ರ ಸರಕಾರವು ನಿಯೋಜಿಸಿದೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯುವುದು ಸಾಧ್ಯವಿಲ್ಲ ಮತ್ತು ಜನತೆ ತಾಳ್ಮೆ ಕಂಡುಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಭದ್ರತಾ ಕ್ರಮಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಗೌರವಿಸುವುದು ಬಿಜೆಪಿಯ ಅಧಿಕೃತ ನಿಲುವು; ಆ ಪಕ್ಷ ಅಧಿಕಾರದಲ್ಲಿರುವ ಹಲವು ಸರಕಾರಗಳು ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತವೆ ಎಂದು ನಾನು ನಂಬಿದ್ದೇನೆ ಎಂದರು.

ಸಮಚಿತ್ತತೆ, ತಾಳ್ಮೆ ಪ್ರದರ್ಶಿಸಬೇಕು: ಪ್ರಧಾನಿ, ಸೋನಿಯಾ
ತೀರ್ಪು ಪ್ರಕಟವಾದ ನಂತರ ಯಾವುದೇ ಕಾರಣಕ್ಕೂ ಯಾವುದೇ ಧರ್ಮದ, ಸಮುದಾಯದ ಜನತೆ ಮತ್ತೊಂದು ಸಮುದಾಯದ ಜನರತ್ತ ತಮ್ಮ ಭಾವನೆಗಳನ್ನು ಹರಿಯಬಿಡುವುದು ಅಥವಾ ಯಾವುದೇ ರೀತಿಯಲ್ಲಿ ಪ್ರಚೋದನೆ ನೀಡುವ ಯತ್ನವನ್ನು ಜನತೆ ಮಾಡಬಾರದು, ಹಿಂಸಾಚಾರಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

ನ್ಯಾಯಾಂಗದಿಂದ ಬರುತ್ತಿರುವ ತೀರ್ಪನ್ನು ಉನ್ನತ ಗೌರವದಿಂದ ಕಾಣಬೇಕು. ಈ ಹಂತದಲ್ಲಿ ಇದು ನ್ಯಾಯಾಂಗ ಪ್ರಕ್ರಿಯೆ ಮಾತ್ರ ಎಂಬ ವಾಸ್ತವ ಅಂಶವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನಾಗರಿಕರಿಗೆ ಸಿಂಗ್ ಸಲಹೆ ನೀಡಿದ್ದಾರೆ.

ಅತ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇಂತಹುದೇ ಮನವಿ ಮಾಡಿದ್ದಾರೆ. ನ್ಯಾಯಾಲಯದಿಂದ ಯಾವುದೇ ತೀರ್ಪು ಬಂದರೂ ಜನತೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಾಯ್ಮಿಚ್ಚಿ ಸುಮ್ಮನಿರಿ: ದಿಗ್ವಿಜಯ್‌ಗೆ ಬಿಜೆಪಿ
'ಇದು 2010ನೇ ಇಸವಿ, 1992 ಅಲ್ಲ' ಎಂದು ಬಿಜೆಪಿಯನ್ನು ಕುಟುಕಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಕೇಸರಿ ಪಾಳಯ ನೀಡಿರುವ ಎಚ್ಚರಿಕೆಯಿದು. ಹೇಳಿಕೆಗಳನ್ನು ನೀಡುವಾಗ ಹೊಣೆಗಾರಿಕೆಯನ್ನು ಅರಿತುಕೊಳ್ಳಿ ಮತ್ತು ತಮ್ಮ ಮಿತಿ ಏನೆಂಬುದನ್ನು ಮನದಟ್ಟು ಮಾಡಿಕೊಳ್ಳಿ ಎಂದು ಬಿಜೆಪಿ ಸಲಹೆ ನೀಡಿದೆ.

ಒಂದು ಕೈಯಲ್ಲಿ ಕೇಂದ್ರ ಸರಕಾರವು ಅಯೋಧ್ಯೆ ತೀರ್ಪು ಬಂದ ನಂತರ ಶಾಂತಿಯಿಂದ ಇರುವಂತೆ ಮನವಿ ಮಾಡುತ್ತದೆ. ಅತ್ತ ಮತ್ತೊಂದು ಕಡೆ ದಿಗ್ವಿಜಯ್ ಸಿಂಗ್ ಅವರಂತಹ ನಾಯಕರು ನಕ್ಸಲರು ಮತ್ತು ಭಯೋತ್ಪಾದಕರ ಪರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಕಾಂಗ್ರೆಸ್ಸಿಗೂ ದಿಗ್ವಿಜಯ್ ಅವರನ್ನು ಹತೋಟಿಯಲ್ಲಿಡಲು ಕಷ್ಟವಾಗುತ್ತಿದೆ ಎಂದು ಆರೋಪಿಸಿದ ಹುಸೇನ್, ತಮ್ಮ ಹೇಳಿಕೆಯಿಂದ ಶಾಂತಿಗೆ ಭಂಗವಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆಯನ್ನೂ ನೀಡಿದರು.

ಒಂದು ಕಾಲದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ದಿಗ್ವಿಜಯ್. ಆದರೆ ಅದನ್ನೀಗ ಅವರು ಮರೆತಂತಿದೆ. ತನ್ನ ಮಿತಿಯನ್ನು ಅವರು ಮೀರಬಾರದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದನ್ನು ಉಲ್ಲೇಖಿಸುತ್ತಾ ಬಿಜೆಪಿ ನಾಯಕ ತಿಳಿಸಿದರು.

ನನಗೆ ಬಿಜೆಪಿಯಲ್ಲಿ ನಂಬಿಕೆಯಿಲ್ಲ. ಕೇಸರಿ ಪಕ್ಷವು ಚಿಟಿಕೆ ಉಪ್ಪಿನೊಂದಿಗೆ ಶಾಂತಿಗಾಗಿ ಮನವಿ ಮಾಡಿದೆ ಎಂದಿರುವ ದಿಗ್ವಿಜಯ್, ತನ್ನ ಪಾಳಯವನ್ನು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ ಬಿಜೆಪಿ ತಡೆಯಲಿ; 2010ನೇ ಇಸವಿ 1992 ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ದಿಗ್ವಿಜಯ್ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ