ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೀರ್ಪಿನ ನಿರೀಕ್ಷೆ; ಭಣಗುಡುತ್ತಿದೆ ಅಯೋಧ್ಯೆ | ಎಲ್ಲೆಲ್ಲೂ ಮೌನ (Ayodhya verdict | Ram Mandir | India | Babri Masjid)
Bookmark and Share Feedback Print
 
ನಾಳೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯತ್ತ ಬರುತ್ತಿರುವ ಭಕ್ತರ ಸಂಖ್ಯೆಯಲ್ಲೂ ಭಾರೀ ಕುಸಿತ ಕಂಡು ಬಂದಿದೆ. ಬೀದಿಗಳು ಪೊಲೀಸರು ಮತ್ತು ಇತರ ರಕ್ಷಣಾ ಪಡೆಗಳಿಂದಲೇ ತುಂಬಿವೆ. ಇಡೀ ದೇಶಕ್ಕೆ ದೇಶವೇ 'ಅಂತಿಮ ತೀರ್ಪಿ'ಗಾಗಿ ಕಾತರದಿಂದ ಕಾದು ಕುಳಿತಿದೆ.

ಕಳೆದ ಕೆಲವು ದಿನಗಳಿಂದ ಇಲ್ಲಿಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ ಎಂದು ರಾಮ ಜನ್ಮಭೂಮಿ ದೇವಳದ ಪ್ರಮುಖ ಅರ್ಚಕ ಮಹಂತಾ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಇದನ್ನೂ ಓದಿ: ಸೆ.30, ಗುರುವಾರ ಅಯೋಧ್ಯೆ ತೀರ್ಪು; ಸುಪ್ರೀಂ ತಡೆ ತೆರವು

ಆಗಸ್ಟ್ ತಿಂಗಳ ಅವಧಿಯಲ್ಲಿ ರಾಮಲಾಲಾ ದೇವಳಕ್ಕೆ 12 ಲಕ್ಷಕ್ಕೂ ಹೆಚ್ಚು ಭಕ್ತರು ಬಂದಿದ್ದರು. ಆದರೆ ಸೆಪ್ಟೆಂಬರ್ ಅಂದರೆ ಈ ತಿಂಗಳಲ್ಲಿ ಕೇವಲ 1.5 ಲಕ್ಷ ಮಂದಿ ಮಾತ್ರ ಇದುವರೆಗೆ ಬಂದಿದ್ದಾರೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಏಳರಿಂದ ಎಂಟು ಸಾವಿರ ಭಕ್ತರು ಪ್ರತಿದಿನ ಬರುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು 15,000ಕ್ಕೂ ಏರಿಕೆಯಾಗುತ್ತದೆ. ಆದರೆ ಈಗ ದೇವಳದಲ್ಲಿ ಬೆರಳೆಣಿಕೆಯ ಭಕ್ತರಷ್ಟೇ ಕಾಣುತ್ತಿದ್ದಾರೆ ಎಂದು ಅವರು ವಿವರಿಸಿದರು.
PR

ಅಲಹಾಬಾದ್ ಹೈಕೋರ್ಟ್ ಕಳೆದ ವಾರ ತೀರ್ಪು ನೀಡುತ್ತದೆ ಎಂದು ಪ್ರಕಟಿಸಿದ ಬೆನ್ನಿಗೆ ನಾಟಕೀಯ ಕುಸಿತ ಕಂಡು ಬಂದಿತ್ತು. ಇದಕ್ಕೆ ಉದಾಹರಣೆಯೆಂದರೆ ಸೆಪ್ಟೆಂಬರ್ 25ರಂದು ಕೇವಲ 2,700 ಭಕ್ತರಷ್ಟೇ ದೇವಳಕ್ಕೆ ಬಂದಿರುವುದು. ನಗರದಲ್ಲಿ ನಿಯೋಜನೆಗೊಂಡಿರುವ ರಕ್ಷಣಾ ಪಡೆಗಳ ಜವಾನರೂ ಇದರಲ್ಲಿ ಸೇರಿದ್ದಾರೆ.

ಮಸೀದಿಗೆ ಅವಕಾಶ ನೀಡುವುದಿಲ್ಲ: ವಿಎಚ್‌ಪಿ
ಬಿಜೆಪಿ ಮತ್ತು ಆರೆಸ್ಸೆಸ್‌ಗಳು ತೀವ್ರ ತಾಳ್ಮೆ ಪ್ರದರ್ಶಿಸಿ, ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಹೊರತಾಗಿಯೂ ವಿಶ್ವ ಹಿಂದೂ ಪರಿಷತ್ ತಣ್ಣಗಾದಂತೆ ಕಾಣುತ್ತಿಲ್ಲ. ವಿವಾದಿತ ಸ್ಥಳದಲ್ಲಿ ಭವ್ಯ ರಾಮಮಂದಿರವನ್ನು ಕಟ್ಟಬೇಕೆಂಬ ತಮ್ಮ ಬೇಡಿಕೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಮತ್ತು ನಿರ್ದಿಷ್ಟ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಎಚ್‌ಪಿ ತನ್ನ ನಿಲುವನ್ನು ಪುನರುಚ್ಛರಿಸಿದೆ.

ವಿಎಚ್‌ಪಿ ನಿಲುವು ಉನ್ನತ ಮಟ್ಟದ ಸಂತರ ಒಕ್ಕೂಟ ನಿರ್ಧಾರವನ್ನು ಆಧರಿಸಿದುದಾಗಿದೆ ಎಂದು ಸಂಘಟನೆಯ ಹಿರಿಯ ನಾಯಕ ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.

ಅಯೋಧ್ಯೆಯ ಧಾರ್ಮಿಕ ಎಲ್ಲೆಯಲ್ಲಿ ನೂತನ ಮಸೀದಿಯನ್ನು ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅದೇ ಹೊತ್ತಿಗೆ ಪ್ರತಿಕ್ರಿಯಿಸಿರುವ ವಿಎಚ್‌ಪಿ ಮುಖ್ಯಸ್ಥ ಅಶೋಕ್ ಸಿಂಘಾಲ್, ತೀರ್ಪು ಯಾವುದೇ ಆಗಿರಲಿ ಶಾಂತಿ ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಮೂಲಗಳ ಪ್ರಕಾರ ಅಲಹಾಬಾದ್ ಹೈಕೋರ್ಟಿನ ತೀರ್ಪಿನ ನಂತರ ಸಂಘ ಪರಿವಾರವು ತನ್ನ ಯೋಜನೆಯ ರೂಪು ರೇಷೆಗಳನ್ನು ರೂಪಿಸಲಿದೆ.

ಬಿಜೆಪಿಯನ್ನು ನಂಬುವುದುಲ್ಲ: ದಿಗ್ವಿಜಯ್
ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ಎಚ್ಚರಿಕೆಯ ಪ್ರತಿಕ್ರಿಯೆ ಮತ್ತು ಶಾಂತಿ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿರುವ ಹೊರತಾಗಿಯೂ ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿಯನ್ನು ನಾನು ನಂಬುವುದಿಲ್ಲ ಎಂದಿದ್ದಾರೆ.

ಬಿಜೆಪಿ ಚಿಟಿಕೆ ಉಪ್ಪಿನೊಂದಿಗೆ ಶಾಂತಿಗಾಗಿ ಮನವಿ ಮಾಡಿದೆ ಎಂದಿರುವ ದಿಗ್ವಿಜಯ್, ತನ್ನ ಪಾಳಯವನ್ನು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ ಬಿಜೆಪಿ ತಡೆಯಲಿ; 2010ನೇ ಇಸವಿ 1992 ಅಲ್ಲ ಎಂಬ ವಾಸ್ತವತೆಯನ್ನು ಬಿಜೆಪಿ ಅರ್ಥ ಮಾಡಿಕೊಳ್ಳುತ್ತದೆ ಎಂದು ಭರವಸೆಯಿಟ್ಟಿದ್ದೇನೆ ಎಂದರು.

ಬಿಜೆಪಿ ನೀಡಿರುವ ಭರವಸೆಯ ಮೇಲೆ ತಮಗೆ ವಿಶ್ವಾಸವಿದೆಯೇ ಎಂದು ಪ್ರಶ್ನಿಸಿದಾಗ, 'ಅದು ನಾನು ಸತ್ತ ಮೇಲೆ' ಎಂದು ಖಾರವಾಗಿ ಉತ್ತರಿಸಿದರು.

1992ರ ಘಟನೆಗೆ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರೇ ಹೊಣೆ ಎಂದು ದೂರಿದ ದಿಗ್ವಿಜಯ್, ಆ ಪಕ್ಷಕ್ಕೆ ರಾಮ ಎನ್ನುವುದು ಚುನಾವಣೆಯ ಪರಿಕರ. ಹಾಗಿಲ್ಲದೇ ಇದ್ದರೆ ಅದು ಅಧಿಕಾರದಲ್ಲಿದ್ದಾಗ ರಾಮ ಮಂದಿರಕ್ಕಾಗಿ ಏನಾದರೂ ಮಾಡುತ್ತಿತ್ತು. ಅವರಿಗೆ ಈ ವಿಚಾರದಲ್ಲಿ ರಾಜಕೀಯ ಲಾಭ ಮಾತ್ರ ಬೇಕಾಗಿದೆ ಎಂದರು.

ದೇಶದಾದ್ಯಂತ ಭಾರೀ ಭದ್ರತೆ...
ನಾಳೆ (ಸೆಪ್ಟೆಂಬರ್ 30, ಗುರುವಾರ) ಅಪರಾಹ್ನ 3.30ಕ್ಕೆ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ತ್ರಿಸದಸ್ಯ ಪೀಠವು ಅಯೋಧ್ಯೆ ಒಡೆತನದ ಕುರಿತು ಮಹತ್ವದ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಭಾರೀ ಭದ್ರತೆ ನಿಯೋಜಿಸಲಾಗಿದೆ.

ಈ ಸಂಬಂಧ ಹಲವು ರಾಜ್ಯಗಳಿಗೆ ಅರೆ ಸೇನಾಪಡೆಗಳನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಆಯಕಟ್ಟಿನ ಸ್ಥಳಗಳನ್ನು ಗುರುತಿಸಿ ಹೆಚ್ಚಿನ ರಕ್ಷಣೆ ಒದಗಿಸಲು ಸೂಚನೆ ನೀಡಲಾಗಿದೆ. ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ 32 ಸೂಕ್ಷ್ಮ ಪ್ರದೇಶಗಳನ್ನು ಕೇಂದ್ರ ಗುರುತಿಸಿದೆ.

ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಮಿಲಿಟರಿ, ವಾಯುಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎಸ್‌ಎಂಎಸ್, ಎಂಎಂಎಸ್, ಮಾಧ್ಯಮಗಳ ಮೇಲೆ ನಿರ್ದಿಷ್ಟ ನಿರ್ಬಂಧಗಳನ್ನು ಹೇರಲಾಗಿದೆ.

ತೀರ್ಪು ಯಾವ ಬಣದವರ ಪರವಾಗಿ ಬಂದರೂ ಸಂಭ್ರಮ, ಮೆರವಣಿಗೆ, ಪಟಾಕಿ ಸಿಡಿಸುವುದು, ಟೀಕೆ, ಅಪಹಾಸ್ಯ ಮಾಡುವುದು ಸೇರಿದಂತೆ ಯಾವುದೇ ರೀತಿಯ ಹಿಂಸಾಚಾರಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯಗಳು ಮುಂದಾಗಿವೆ. ಈಗಾಗಲೇ ಹಲವು ರಾಜ್ಯಗಳು ಶಾಲಾ-ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ