ಕಾಂಗ್ರೆಸ್‌ನ 'ಕಾಯುತ್ತಿರುವ ಪ್ರಧಾನಿ' ರಾಹುಲ್ ಗಾಂಧಿಯವರು ನಿಷೇಧಿತ ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆಯನ್ನು (ಸಿಮಿ) ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರೆಸ್ಸೆಸ್) ಹೋಲಿಸಿರುವುದನ್ನು ಬಿಜೆಪಿ ಮತ್ತು ಆರೆಸ್ಸೆಸ್‌ಗಳು ತೀವ್ರವಾಗಿ ಖಂಡಿಸಿದ್ದು, ಇದು ಅವರ ಅಪ್ರಬುದ್ಧ ಹೇಳಿಕೆಗಳು ಮತ್ತು ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿವೆ.
ಕೇವಲ ವ್ಯಾಧಿಗ್ರಸ್ಥ ಮಾನಸಿಕ ಸ್ಥಿತಿಯುಳ್ಳವರು ಮಾತ್ರ ಆರೆಸ್ಸೆಸ್ ಮತ್ತು ಸಿಮಿಯ ನಡುವೆ ಹೋಲಿಕೆ ಮಾಡಬಹುದು. ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಂತಿದೆ. ಆರೆಸ್ಸೆಸ್ ಒಂದು ರಾಷ್ಟ್ರೀಯತಾವಾದವನ್ನು ಆಧಾರವಾಗಿಟ್ಟುಕೊಂಡಿರುವ ಸಂಘಟನೆ. ಸಿಮಿಯನ್ನು ಅವರ (ಕಾಂಗ್ರೆಸ್) ಸರಕಾರ ಮತ್ತು ನಾವು ಅಧಿಕಾರದಲ್ಲಿರುವಾಗ ನಿಷೇಧಿಸಲಾಗಿತ್ತು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ವಾಗ್ದಾಳಿ ನಡೆಸಿದರು.
ಸಿಮಿ ಮತ್ತು ಆರೆಸ್ಸೆಸ್‌ಗಳೆರಡೂ ಮತಾಂಧ ಮತ್ತು ಮೂಲಭೂತವಾದಿ ದೃಷ್ಟಿಕೋನಗಳನ್ನು ಹೊಂದಿರುವುದರಿಂದ ನನ್ನ ಪ್ರಕಾರ ಅವೆರಡೂ ಸಂಘಟನೆಗಳ ನಡುವೆ ಹೆಚ್ಚಿನ ವ್ಯತ್ಯಾಸಗಳು ಕಾಣುತ್ತಿಲ್ಲ ಎಂದು ಭೋಪಾಲದಲ್ಲಿ ರಾಹುಲ್ ಅವೆರಡು ಸಂಘಟನೆಗಳ ನಡುವೆ ಹೋಲಿಕೆ ಮಾಡಿದ್ದರು.
ಸಂಘ ಪರಿವಾರದ ಮೂಲ ಹಾಗೂ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್ ವಿರುದ್ಧ ಇಂತಹ ಅನಪೇಕ್ಷಿತ ಟೀಕೆಗಳು ಬಂದಿರುವುದರಿಂದ ಕೇಸರಿ ಪಾಳಯವು ಗಾಬರಿಗೊಂಡಿದೆ.
ಮಧ್ಯಪ್ರದೇಶದಲ್ಲಿ ತನಗೆ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್‌ಗೆ ಗೊತ್ತಿದೆ. ಅವರಲ್ಲಿನ ಹತಾಶೆಯೂ ನಮಗೆ ಅರ್ಥವಾಗುತ್ತಿದೆ. ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿದೆ. ಕಾಂಗ್ರೆಸ್‌ಗೆ ರಾಹುಲ್ ಗಾಂಧಿಯ ಮ್ಯಾಜಿಕ್ ಕೂಡ ಫಲ ಕೊಡುತ್ತಿಲ್ಲ ಎಂದು ಜಾವಡೇಕರ್ ಲೇವಡಿ ಮಾಡಿದರು.
ದೇಶವು ಸಂಕಷ್ಟಕ್ಕೆ ಸಿಲುಕಿದಾಗ ಮುಂದೆ ಬಂದು ಸಹಾಯ-ಸಹಕಾರ ಮಾಡಿದ ಸಂಘಟನೆ ಆರೆಸ್ಸೆಸ್. ರಾಹುಲ್ ಗಾಂಧಿಯವರು ತನ್ನ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸಿದ್ದಾರೆ. ಅವರು ಅನಿಯಂತ್ರಿತ ವರ್ತನೆಯನ್ನು ಪ್ರದರ್ಶಿಸಿದ್ದಾರೆ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ದುರದೃಷ್ಟಕರ ಎಂದು ಹೇಳ ಬಯಸುತ್ತೇನೆ. ರಾಹುಲ್ ಗಾಂಧಿಗೆ ಇನ್ನೂ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಅವರು ಮಾನಸಿಕವಾಗಿ ದಿವಾಳಿಯಾಗಿರುವುದು ಕೂಡ ಇದರಿಂದ ತಿಳಿದು ಬರುತ್ತದೆ. ಈ ಕಾಂಗ್ರೆಸ್‌ಗೆ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿ, ಪಾಪ್ಯುಲರ್ ಫ್ರಂಟ್, ಮುಸ್ಲಿಂ ಲೀಗ್ ಮುಂತಾದ ಸಂಘಟನೆ-ಪಕ್ಷಗಳೇ ಪಥ್ಯವಾಗುತ್ತದೆ ಎಂದು ಟೀಕಿಸಿದರು.
ರಾಹುಲ್ ಇನ್ನೂ ಬಾಲಕ: ಆರೆಸ್ಸೆಸ್ ತನ್ನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್, ರಾಹುಲ್ ಗಾಂಧಿ ಇಂತಹ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುವ ಮೊದಲು ದೇಶದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದೆ.
ರಾಹುಲ್ ಅನರ್ಥಪೂರ್ಣ ಹೇಳಿಕೆಗಳನ್ನು ನೀಡುವ ಮೊದಲು ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನಿಷೇಧಿತ ಸಂಘಟನೆಗಳು ಮತ್ತು ಆರೆಸ್ಸೆಸ್‌ಗಳ ನಡುವಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳಬೇಕು. ಜತೆಗೆ ಕಳೆದ ಆರು ದಶಕಗಳಲ್ಲಿ ಮೂಲಭೂತವಾದಿಯೆಂದು ಆರೋಪ ಮಾಡುತ್ತಾ ಬಂದ ಕಾಂಗ್ರೆಸ್ ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಹೇಳಿದ್ದಾರೆ.
ರಾಹುಲ್ ರಾಜಕೀಯದಲ್ಲಿ ಸಾಗಬೇಕಾದ ಹಾದಿ ಇನ್ನೂ ತುಂಬಾ ದೂರವಿದೆ. ಭಾರತದ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಪಾದಿಸುವ ಅಗತ್ಯವಿದೆ. ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಅದನ್ನು ತಿಳಿದುಕೊಳ್ಳಲಿ ಎಂದರು.