ಭಯೋತ್ಪಾದಕರು ಅಥವಾ ಪ್ರತ್ಯೇಕತಾವಾದಿ ನಾಯಕರ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿರದ ಸಂಬಂಧಿಕರಿಗೆ ಸರಕಾರವು ಪಾಸ್‌ಪೋರ್ಟ್ ನೀಡಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.
ವ್ಯಕ್ತಿಯೊಬ್ಬ ಬುಡಮೇಲು ಕೃತ್ಯಗಳಲ್ಲಿ ಪಾಲ್ಗೊಂಡ ಕಾರಣಕ್ಕೆ ಆತನ ಸಂಬಂಧಿಕರು ಶಿಕ್ಷೆಗೊಳಗಾಗಬಾರದು. ಅಂತಹ ಅಮಾಯಕ ನಾಗರಿಕರಿಗೆ ಅನ್ಯಾಯವಾಗಬಾರದು. ಹಾಗಾಗಿ ಅವರಿಗೆ ಪಾಸ್‌ಪೋರ್ಟ್‌ಗಳನ್ನು ನೀಡಬೇಕು ಎಂದು ಜಮ್ಮು-ಕಾಶ್ಮೀರದ ಸಿಪಿಎಂ ರಾಜ್ಯ ಘಟಕವು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಆಗ್ರಹಿಸಿದೆ.
ಭಯೋತ್ಪಾದಕರ ಅಥವಾ ಪ್ರತ್ಯೇಕತಾವಾದಿಗಳ ಸಂಬಂಧಿಗಳು ಅಥವಾ ಯಾವುದೇ ನ್ಯಾಯಾಲಯದಲ್ಲಿ ತಪ್ಪಿತಸ್ಥರು ಎಂದು ಘೋಷಿಸಲ್ಪಡದ ವ್ಯಕ್ತಿಗಳು ಇತರ ಸಾಮಾನ್ಯ ನಾಗರಿಕರಂತೆ ಪಾಸ್‌ಪೋರ್ಟ್ ಪಡೆದುಕೊಳ್ಳುವಂತಾಗಬೇಕು ಎಂದು ಸಿಪಿಐಎಂ ಹೇಳಿದೆ.
ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಹಶೀಮ್ ಖುರೇಷಿಯವರ ಸಹೋದರ ಮೊಹಮ್ಮದ್ ಅಸ್ಲಾಂ ಅವರಿಗೆ ಪಾಸ್‌ಪೋರ್ಟ್ ನಿರಾಕರಿಸಿರುವುದನ್ನು ವಿಧಾನಸಭೆಯಲ್ಲಿ ಉದಾಹರಿಸಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ವೈ. ತರಿಗಾಮಿ, ಅಸ್ಲಾಂ ಅವರು ಖುರೇಷಿಯವರ ಸಂಬಂಧಿ ಎಂಬ ಕಾರಣಕ್ಕಾಗಿ ಅವರಿಗೆ ವಿದೇಶ ಪ್ರವಾಸ ಅವಕಾಶವನ್ನು ನೀಡಲಾಗಿಲ್ಲ ಎಂದು ಗಮನ ಸೆಳೆದರು.
ಮುನ್ನೆಚ್ಚೆರಿಕೆ ಕ್ರಮವಾಗಿ ಬಂಧನಕ್ಕೊಳಗಾಗಿ ಬಿಡುಗಡೆಯಾದವರು ಮತ್ತು ಯಾವುದೇ ನ್ಯಾಯಾಲಯದಲ್ಲಿ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ದೋಷಮುಕ್ತಿಯಾದವರನ್ನು ಸಾಮಾನ್ಯ ಜೀವನ ನಡೆಸಲು ಅವಕಾಶ ನೀಡಬೇಕು ಎಂದೂ ಅವರು ಹೇಳಿದ್ದಾರೆ.
ಇಂತಹ ವ್ಯಕ್ತಿಗಳು ತಾವು ಹಜ್ ಯಾತ್ರೆ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದರೆ, ಉದ್ಯಮ ಅಥವಾ ಶೈಕ್ಷಣಿಕ ಕಾರಣಗಳಿಗಾಗಿ ವಿದೇಶ ಪ್ರವಾಸ ಮಾಡಬೇಕೆಂದಿದ್ದರೆ ಅದಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡದೆ ಅವರಿಗೆ ಪಾಸ್‌ಪೋರ್ಟ್‌ಗಳನ್ನು ನೀಡಬೇಕು. ಇದು ಆಂತರಿಕವಾಗಿ ಹೆಚ್ಚಿನ ಆತ್ಮವಿಶ್ವಾಸವನ್ನು ಕಟ್ಟುವ ಕೆಲಸ ಮಾಡುತ್ತದೆ ಎಂದು ತರಿಗಾಮಿ ಅಭಿಪ್ರಾಯಪಟ್ಟರು.