ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಕುರಿತ ಮೋದಿ ಹೇಳಿಕೆ ಅನಾಗರಿಕತನದ್ದು: ಜೈಪಾಲ್
(Jaipal Reddy | Narendra Modi | Manmohan Singh | Commonwealth Games)
ಕಾಮನ್‌ವೆಲ್ತ್ ಗೇಮ್ಸ್ ಪೂರ್ವ ತಯಾರಿ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗುರಿ ಮಾಡಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಒಂದು ವೇಳೆ ಕ್ರೀಡಾಂಗಣಗಳನ್ನು ಅವರು ಒರೆಸಿ ಚೊಕ್ಕವಾಗಿಡಲು ಮುಂದಾದರೂ ನಿಗದಿತ ಸಮಯದಲ್ಲಿ ಅದು ಸಿದ್ಧವಾಗದು ಎಂದಿದ್ದಕ್ಕೆ, 'ಇದು ಅನಾಗರಿಕ ಹೇಳಿಕೆ' ಎಂದು ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಜರೆದಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭವು ಅಮೋಘ ಯಶಸ್ವಿಯಾಗಿದ್ದನ್ನು ಇಡೀ ಜಗತ್ತೇ ನೋಡಿದೆ. ಅದರಂತೆ ಗೇಮ್ಸ್ ಸಮಾರೋಪ ಸಮಾರಂಭಕ್ಕೆ ಗುಜರಾತ್ ಮುಖ್ಯಮಂತ್ರಿ ಮೋದಿ ಸೇರಿದಂತೆ ಎಲ್ಲಾ ಸಚಿವರುಗಳನ್ನು ಗೌರವ ಪೂರ್ವಕವಾಗಿ ಆಹ್ವಾನಿಸಲು ಬಯಸುತ್ತಿದ್ದೇನೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ತಿಳಿಸಿದ್ದಾರೆ.
ಆರಂಭದಲ್ಲಿ ಅಲ್ಲಿ ಕೆಲವು ಸಮಸ್ಯೆಗಳು ಇದ್ದದ್ದು ಹೌದು. ಆದರೆ ನಂತರ ಅದೆಲ್ಲವೂ ಪರಿಹಾರ ಕಂಡಿತ್ತು. ಈಗ ಗೇಮ್ಸ್ ಅತ್ಯುತ್ತಮವಾಗಿ ಸಾಗುತ್ತಿದೆ. ಆದರೆ ಅಲ್ಲಿ ಪ್ರಧಾನ ಮಂತ್ರಿಯವರು ಹೋಗಿ ನೆಲ ಒರೆಸಬೇಕೆಂದು ಹೇಳುವುದು ಅನಾಗರಿಕ ಹೇಳಿಕೆ. ಅವರ ಸರಳತನ ಮತ್ತು ಸಜ್ಜನಿಕೆಗೆ ಇಡೀ ವಿಶ್ವವೇ ಶ್ಲಾಘಿಸುತ್ತಿದೆ ಎಂದು ಹೆಸರು ಹೇಳದೆ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲಿ ನಾವೇನು ಮಾಡಿದ್ದೇವೆ ಎಂಬುದನ್ನು ನೋಡಲು ಅವರೆಲ್ಲ ಕನಿಷ್ಠ ಒಂದು ಬಾರಿ, ಸಮಾರೋಪ ಸಮಾರಂಭದಲ್ಲಾದರೂ ಬಂದು ನೋಡಲಿ. ಅದೆಷ್ಟು ವೈಭವಯುತವಾಗಿ ನಡೆಯುತ್ತದೆ ಎಂಬುದನ್ನು ನೋಡಿ ಎಂದು ರೆಡ್ಡಿ ಗುಜರಾತಿನ ಬಿಜೆಪಿ ನಾಯಕರಿಗೆ ಬಹಿರಂಗ ಆಹ್ವಾನ ನೀಡಿದರು.
ಗೇಮ್ಸ್ ಸಿದ್ಧತೆಗಳು ಅಸ್ತವ್ಯಸ್ತ ಸ್ಥಿತಿಯಲ್ಲೇ ಮುಂದುವರಿದಿದ್ದುದನ್ನು ಗಂಭೀರವಾಗಿ ಪರಿಗಣಿಸಿದ್ದ ಮೋದಿ ಗೇಮ್ಸ್ ಸಂಘಟಕರನ್ನು ಲೇವಡಿ ಮಾಡುತ್ತಾ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಏನೇನು ನಡೆಯುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ನಮ್ಮ ಪ್ರಧಾನಿಯವರೇ ಸ್ವತಃ ನೆಲ ಒರೆಸಲು ಶುರು ಮಾಡಿದರೂ, ಗೇಮ್ಸ್ ಹೊತ್ತಿಗೆ ಕ್ರೀಡಾಂಗಣಗಳು ಸಿದ್ಧವಾಗುವುದಿಲ್ಲ ಎಂದು ಹೇಳಿದ್ದರು.