ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು ಟೀಕಿಸಿದ್ದ ಮುಲಾಯಂ ಮೇಲೆ ಕೇಸು
(Ayodhya verdict | Samajwadi Party | Mulayam Singh Yadav | Muslim)
ಅಯೋಧ್ಯೆ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನಿಂದ ಮುಸ್ಲಿಮರಿಗೆ ಮೋಸವಾಗಿದೆ ಎಂದು ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತನ್ನ ಹೇಳಿಕೆಗಳ ಮೂಲಕ ಅವರು ಸಮಾಜದಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಮಹಾಸಭಾ ಕೇಸು ಹಾಕಿದೆ.
ಐಪಿಸಿ ಸೆಕ್ಷನ್ 153-ಎ ಅಡಿಯಲ್ಲಿ ಧರ್ಮದ ಆಧಾರದಲ್ಲಿ ಭಿನ್ನ ಕೋಮುಗಳ ನಡುವೆ ಸಾಮರಸ್ಯ ಕೆಡಿಸಲು ಯತ್ನಿಸಿದ ಆರೋಪವನ್ನು ಮುಲಾಯಂ ಮೇಲೆ ಹೊರಿಸಲಾಗಿದೆ. ಈ ಸಂಬಂಧ ಹಿಂದೂ ಮಹಾಸಭಾದ ಮೀರತ್ ಘಟಕದ ಅಧ್ಯಕ್ಷ ರವಿ ಚೌಹಾನ್ ಅವರು ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣವು ಮೀರತ್ ನ್ಯಾಯಾಲಯದಲ್ಲಿ ಅಕ್ಟೋಬರ್ 28ರಂದು ವಿಚಾರಣೆಗೆ ಬರಲಿದೆ.
ಅಯೋಧ್ಯೆ ತೀರ್ಪು ಬಂದಿದೆ. ಇದು ನನಗೆ ಸಂತಸ ತಂದಿಲ್ಲ. ಈ ತೀರ್ಮಾನವು ಒಂದು ಉತ್ತಮ ಸಂಕೇತವವಲ್ಲ ಮತ್ತು ಹಲವರು ಇದರಿಂದ ಬೇಸರಗೊಂಡಿದ್ದಾರೆ ಎಂದು ಹೇಳಿದ್ದ ಮುಲಾಯಂ, ಕಾನೂನು ಅಂಶಗಳನ್ನು ಆಧರಿಸದೆ ನಂಬಿಕೆಯನ್ನು ಮುಂದಿಟ್ಟುಕೊಂಡು ತೀರ್ಪು ನೀಡಲಾಗಿದೆ ಎಂದಿದ್ದರು.
ಕಾನೂನು ಮತ್ತು ಪುರಾವೆಗಳನ್ನು ಹೊರತುಪಡಿಸಿದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನ್ಯಾಯಾಂಗ ತೀರ್ಮಾನ ತೆಗೆದುಕೊಂಡಿರುವುದು ದೇಶದ ಮುಸ್ಲಿಮರಿಗೆ ಅಸಮಾಧಾನ ತಂದಿದೆ. ಅವರು ಮೋಸ ಹೋದೆವು ಎಂದುಕೊಳ್ಳುತ್ತಿದ್ದಾರೆ. ಇಡೀ ಸಮುದಾಯವು ಹತಾಶೆಯ ಸ್ಥಿತಿಯನ್ನು ತಲುಪಿದೆ ಎಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ವಿಶ್ಲೇಷಿಸಿದ್ದರು.
ಇದು ದೇಶ, ಸಂವಿಧಾನ ಮತ್ತು ನ್ಯಾಯಾಂಗಕ್ಕೂ ಶೋಭೆ ತರುವುದಿಲ್ಲ ಎಂದು ಹೇಳಿದ್ದ ಅವರು, ನಿರಾಸೆಗೊಳಗಾಗಿರುವ ವಾದಿಯ ಬೆಂಬಲಕ್ಕೆ ತಾನು ನಿಲ್ಲುವುದಾಗಿ ಹೇಳಿದ್ದರು. ಅಲ್ಲದೆ ಸುಪ್ರೀಂ ಕೋರ್ಟಿಗೆ ಹೋಗುವ ನಿರ್ಧಾರವನ್ನು ತಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದರು.