ರಾಜ್‌ಕೋಟ್, ಶುಕ್ರವಾರ, 15 ಅಕ್ಟೋಬರ್ 2010( 10:53 IST )
ಮುಖ್ಯಮಂತ್ರಿ ನರೇಂದ್ರ ಮೋದಿ ಮುಸ್ಲಿಂ ವಿರೋಧಿ, ಬಿಜೆಪಿ ಕೋಮುವಾದಿ ಎಂದೆಲ್ಲ ಹೇಳುತ್ತಾ ಮುಸ್ಲಿಮರ ಮತಬ್ಯಾಂಕ್ ಕೊಳ್ಳೆ ಹೊಡೆಯಲು ಯತ್ನಿಸುತ್ತಿದ್ದ ಕಾಂಗ್ರೆಸ್‌ಗೆ ಗುಜರಾತ್ ಮುಸ್ಲಿಮರು ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಹಾಗೆಂದು ಹೇಳುತ್ತಿರುವುದು ಬಿಜೆಪಿಯಿಂದಲೇ ಸ್ಪರ್ಧಿಸಿ ಗೆದ್ದು ಬಂದಿರುವ ಮುಸ್ಲಿಂ ಮಹಿಳೆ ಬಿಬ್ಬನ್ ಸಾಮಾ.
ಸಾಮಾನ್ಯವಾಗಿ ಮುಸ್ಲಿಮರು ಗುರುತಿಸಿಕೊಳ್ಳುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಇದಕ್ಕಾಗಿ ಮುಸ್ಲಿಮರ ಓಲೈಕೆ ಮಾಡುತ್ತಾ, ಬಿಜೆಪಿಯನ್ನು ಕೋಮುವಾದಿಗಳ ಪಕ್ಷ ಎಂದು ಟೀಕಿಸುತ್ತಾ ಬಂದಿದ್ದ ಕಾಂಗ್ರೆಸ್ ಈ ಬಾರಿ ಗುಜರಾತಿನ ಪಾಲಿಕೆ ಚುನಾವಣೆಗಳಲ್ಲೂ ತೀವ್ರ ಮುಖಭಂಗ ಅನುಭವಿಸಿದೆ.
ಹಾಗೆ ನೋಡಿದರೆ ಗುಜರಾತಿನಲ್ಲಿ ಮುಸ್ಲಿಮರು ಬಿಜೆಪಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಗೆದ್ದಿಲ್ಲ. ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್, ಭಾವನಗರ್ ಮತ್ತು ಜಾಮಾನಗರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 11 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ ಹತ್ತನ್ನು ಕಳೆದುಕೊಂಡಿದೆ. ಗೆದ್ದಿರುವುದು ಒಬ್ಬಾಕೆ ಮಾತ್ರ. ಅದು ಬಿಬ್ಬನ್ ಸಾಮಾ.
PR
ಇವರು ಗೆದ್ದಿರುವುದು ರಾಜ್‌ಕೋಟ್ ಮಹಾನಗರಪಾಲಿಕೆಯ 18ನೇ ವಾರ್ಡಿನಿಂದ. ಈ ಹಿಂದೆಲ್ಲ ಮುಸ್ಲಿಂ ಸಮುದಾಯದ ಹಲವರು ಈಕೆಯನ್ನು ಕಾಂಗ್ರೆಸ್ ಪರ ಕೆಲಸ ಮಾಡದೇ ಇರುವುದಕ್ಕೆ ಛೇಡಿಸಿದ್ದರಂತೆ. ರಾಜಕೀಯದಲ್ಲಿ ಮುಸ್ಲಿಮರ ಸಾಂಪ್ರದಾಯಿಕವಾದ ಮೊದಲ ಆಯ್ಕೆಯನ್ನು ಬಿಟ್ಟು ಕೇಸರಿ ಪಕ್ಷವನ್ನು ಅಪ್ಪಿಕೊಂಡಿರುವುದಕ್ಕೆ ಅಸಮಾಧಾನವಿತ್ತಂತೆ.
ಆದರೆ ಕಳೆದೊಂದು ವರ್ಷದಿಂದ ಇದೆಲ್ಲ ಬದಲಾಗಿದೆ. ತನ್ನ ಗಂಡ ಹಬೀಬ್ ಸಾಮಾ ಜತೆಗೂಡಿ ಮುಸ್ಲಿಂ ಸಮುದಾಯದಲ್ಲಿ ರಾಜಕೀಯ ಅರಿವು ಮೂಡಿಸಲು ಯತ್ನಿಸಿದ್ದಾರೆ. ಅದು ಫಲ ಕೊಟ್ಟಿದೆ ಕೂಡ. ಪರಿಣಾಮ ಹಿಂದೂ ಮತ್ತು ಮುಸ್ಲಿಂ ಸಮುದಾಯವು ಸಂಪೂರ್ಣವಾಗಿ ಸಾಮಾ ಅವರನ್ನು ಬೆಂಬಲಿಸಿ ಮತ ಚಲಾಯಿಸಿದೆ.
ಹಿಂದೆಲ್ಲಾ ಬುರ್ಖಾವಿಲ್ಲದೆ ಹೊರಗಡೆ ಕಾಣಿಸಿಕೊಳ್ಳದೆ ಕಟ್ಟರ್ ಸಂಪ್ರದಾಯವಾದಿಯಾಗಿದ್ದ ಸಾಮಾ, ಈ ಬಾರಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪ್ಪಟ ಭಾರತೀಯ ನಾರಿಯಂತೆ ಸೀರೆಯನ್ನುಟ್ಟು ಮಿಂಚಿದ್ದರು. ಇದು ಅವರಿಗೆ ಸಖತ್ ಖುಷಿಯನ್ನೂ ಕೊಟ್ಟಿದೆಯಂತೆ.
ನಾನು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದು ನಿನ್ನೆ ಮೊನ್ನೆಯಿಂದಲ್ಲ, ಕಳೆದ 15 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ನನಗೆ ಎಲ್ಲಾ ಸಮುದಾಯಗಳ ಜನರೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಒಂದು ಕಾಲದಲ್ಲಿ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಅದು ಎಲ್ಲಿಯವರೆಗೆ ಅಂದರೆ ಬಿಜೆಪಿ ತನ್ನ ಕಚೇರಿಯನ್ನು ತೆರೆಯಲು ಕೂಡ ಸಾಧ್ಯವಾಗದೇ ಇರುವಷ್ಟು. ಆದರೆ ಈಗ ಎಲ್ಲವೂ ಬದಲಾಗಿದೆ ಎಂದು ಸಾಮಾ ವಿವರಣೆ ನೀಡಿದ್ದಾರೆ.
ಸಾಮಾನ್ಯವಾಗಿ ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಭಾವನೆಯಿದೆ. ಆದರೆ ಅದು ನಿಜವಲ್ಲ. ಕೇವಲ ಮುಸ್ಲಿಮರಿಗೆ ಟಿಕೆಟ್ ನೀಡಿದರಷ್ಟೇ ಸಾಲದು. ಜನರಿಗಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಗುರುತಿಸುವ ಅಗತ್ಯವೂ ಇದೆ ಎಂದು ಅವರ ಗಂಡ ಹೇಳುತ್ತಾರೆ.
ಅದೇ ಹೊತ್ತಿಗೆ ತನಗೆ ಲಭಿಸಿರುವ ಅಚ್ಚರಿಯ ಗೆಲುವನ್ನು ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಸಾಮಾ ಅರ್ಪಿಸಿದ್ದಾರೆ.
ಈ ಗೆಲುವು ಸಾಧ್ಯವಾದದ್ದು ಮುಖ್ಯಮಂತ್ರಿಯವರ ಕಾರಣದಿಂದ. ಕಳೆದ 15 ವರ್ಷಗಳಿಂದ ಪಕ್ಷದಲ್ಲಿರುವ ನಮಗೆ ಯಾವುದೇ ರೀತಿಯ ತಾರತಮ್ಯವಾಗಲೀ, ಅನ್ಯಾಯಗಳಾಗಲೀ ಆಗಿಲ್ಲ. ನಮಗೆ ಪಕ್ಷವು ಸಂತೃಪ್ತಿಯನ್ನು ತಂದುಕೊಟ್ಟಿದೆ ಎಂದರು.
ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪ್ರಗತಿಯನ್ನು ಕಂಡು ಮತ ಹಾಕುತ್ತಿದ್ದಾರೆ. ಅವರು ರಾಜ್ಯದ ಆರ್ಥಿಕ ಮತ್ತು ಮೂಲಭೂತ ಸೌಲಭ್ಯಗಳ ಹರಿಕಾರ. ಅದೇ ಕಾರಣದಿಂದ ಮುಸ್ಲಿಮರು ಬೃಹತ್ ಸಂಖ್ಯೆಯಲ್ಲಿ ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅವರೊಂದು ರೀತಿಯ ಅಯಸ್ಕಾಂತವಿದ್ದಂತೆ ಎಂದೂ ಬಣ್ಣಿಸಿದ್ದಾರೆ.