ಮುಂಬೈ ವಿಶೇಷ ನ್ಯಾಯಾಲಯವು ಪಾತಕಿ ಕಸಬ್ ದೋಷಿ ಎಂದು ತೀರ್ಪು ನೀಡಿ, ಆತನಿಗೆ ಮರಣ ದಂಡನೆ ವಿಧಿಸಿತ್ತು. ಅದನ್ನು ಖಚಿತಪಡಿಸುವ ಸಂಬಂಧ ಬಾಂಬೆ ಹೈಕೋರ್ಟಿನಲ್ಲಿ ವಿಚಾರಣೆ ಆರಂಭವಾಗಿದೆ. ಇಂದು ಎರಡನೇ ದಿನದ ವಿಚಾರಣೆಯು ಮುಂದುವರಿಯಿತು.
PTI
ಆರ್ಥರ್ ರೋಡ್ ಜೈಲಿನಲ್ಲಿರುವ ಕಸಬ್ ವಿಚಾರಣೆ ಆರಂಭವಾದಾಗ ಹಸನ್ಮುಖಿಯಾಗಿಯೇ ಇದ್ದ. ಆದರೆ ಇದ್ದಕ್ಕಿದ್ದಂತೆ ಕೋಪಗೊಂಡು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ. ಇದು ನ್ಯಾಯಾಲಯದಲ್ಲಿ ಅಳವಡಿಸಲಾಗಿದ್ದ ದೊಡ್ಡ ಪರದೆಯಲ್ಲಿ ಮೂಡಿ ಬಂತು.
ಈ ಹೊತ್ತಿಗೆ ವೀಡಿಯೋ ಕಾನ್ಫರೆನ್ಸ್‌ನ ಆಡಿಯೋ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಮತ್ತಷ್ಟು ಉದ್ರೇಕಗೊಂಡ ಕಸಬ್, ಮೊದಲ ಹಂತದ ವಿಚಾರಣೆಯ ಮುಕ್ತಾಯದ ಹಂತದಲ್ಲಿ ನೇರವಾಗಿ ಕ್ಯಾಮರಾಕ್ಕೆ ಉಗುಳಿದ. ಅಲ್ಲದೆ ತೀವ್ರ ಕೋಪಗೊಂಡು, ತಾನು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಬಯಸುತ್ತಿರುವುದಾಗಿ ಕೂಗಿಕೊಂಡ.
ನಂತರ ಭೋಜನಕ್ಕಾಗಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರು ತೆರಳಿದರು.
ಅದಕ್ಕೂ ಮೊದಲು, ವಿಚಾರಣೆ ಆರಂಭವಾಗುತ್ತಿದ್ದಂತೆ ಕಸಬ್ ತಾನು ವೀಡಿಯೋ ಕಾನ್ಫರೆನ್ಸ್ ಬದಲಿಗೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ, ಇದಕ್ಕೆ ಅವಕಾಶ ನೀಡಿ ಎಂದು ನ್ಯಾಯಮೂರ್ತಿಗಳನ್ನು ಒತ್ತಾಯಿಸಿದ್ದ.
ಮೇಡಂ, ನಾನು ನ್ಯಾಯಾಲಯಕ್ಕೆ ಬರಲು ಇಚ್ಛಿಸುತ್ತಿದ್ದೇನೆ ಎಂದಾಗ, ಇದಕ್ಕೆ ಪ್ರತಿಕ್ರಿಯಿಸಿದ ದೇಸಾಯಿ, ಈ ವಿಚಾರವನ್ನು ನಂತರ ಪೀಠವು ಗಣನೆಗೆ ತೆಗೆದುಕೊಳ್ಳಲಿದೆ ಎಂದರು.
ಇದಾದ ಸ್ವಲ್ಪ ಹೊತ್ತಿನ ನಂತರ ಚಡಪಡಿಕೆ ವರ್ತನೆ ತೋರಿಸಿದ ಆತ, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ. ಆದರೆ ಈ ಸಂದರ್ಭದಲ್ಲಿ ಆತ ಏನು ಮಾತನಾಡಿದ್ದಾನೆ ಎಂಬುದು ಆಡಿಯೋ ವ್ಯವಸ್ಥೆಯ ಸಮಸ್ಯೆ ಹಿನ್ನೆಲೆಯಲ್ಲಿ ತಿಳಿದು ಬಂದಿಲ್ಲ.
ಕಸಬ್ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಮೂರ್ತಿಗಳು, ಆತನ ವರ್ತನೆ ತೀವ್ರವಾದದ್ದು, ಪುಂಡಾಟಿಕೆಯಿಂದ ಕೂಡಿದ್ದು ಎಂದಿದ್ದಾರೆ.