ಭಾರತದಲ್ಲೂ ಬುರ್ಖಾ ನಿಷೇಧಿಸಬೇಕು ಎಂಬ ಶಿವಸೇನೆಯ ಕರೆಗೆ ಮುಸ್ಲಿಂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಶಿವಸೇನೆಯಂತಹ ಪಕ್ಷಕ್ಕೆ ಮಾಡುವುದು ಏನೂ ಇಲ್ಲ, ಅದಕ್ಯಾಕೆ ಅಧಿಕ ಪ್ರಸಂಗ ಎಂದು ಮುಸ್ಲಿಮರು ಪ್ರಶ್ನಿಸಿದ್ದಾರೆ.
ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನ ಧರ್ಮವನ್ನು ಪಾಲಿಸುವ ಹಕ್ಕು ಇದೆ. ತನಗೆ ಸಂಬಂಧ ಪಡದ ವಿಚಾರದಲ್ಲಿ, ತನ್ನದಲ್ಲದ ಸಮುದಾಯದ ಬಗ್ಗೆ ಯಾರು ಮಾತನಾಡುವುದಿದ್ದರೂ ಅದು ಸರಿಯಲ್ಲ ಎಂದು ಜಾಮಿಯಾ ಕಾದ್ರಿಯಾ ಇಸ್ಲಾಮಿಯಾ ಕಾರ್ಯದರ್ಶಿ ಮೌಲಾನಾ ಮೋಯಿನ್ ಮಿಯಾ ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.
ಇದೊಂದು ಬೇಜವಾಬ್ದಾರಿಯುತ ಹೇಳಿಕೆ. ಶಿವಸೇನೆಯ ಭಾಷಾ ಆಧರಿತ ಮೂಲ ಮಂತ್ರವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಪಹರಿಸಿರುವುದರಿಂದ ದಿಕ್ಕೆಟ್ಟಿರುವ ಪಕ್ಷವು ಈಗ ಕೋಮು ವಿಚಾರಗಳತ್ತ ಗಮನ ಹರಿಸುತ್ತಿದೆ. ಅತ್ತ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಗೊಂದಲ ಸೃಷ್ಟಿಸುತ್ತಿದ್ದರೆ, ಇತ್ತ ಸೇನೆಯ ನಾಯಕತ್ವವು ಪಕ್ಷವನ್ನು ಉಳಿಸಿಕೊಳ್ಳಲು ನೂತನ ವಿವಾದಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಸಯ್ಯದ್ ಅಯೂಬ್ ಹೇಳುತ್ತಾರೆ.
ಥಾಣೆಯ ನಜೀಬ್ ಮುಲ್ಲಾ ಎಂಬ ನಾಗರಿಕ ನಾಯಕ ಕೂಡ ಬುರ್ಖಾ ನಿಷೇಧಿಸಬೇಕೆಂಬ ಶಿವಸೇನೆ ವಾದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 'ರಕ್ಷಣಾ ಪಡೆಗಳ ಭದ್ರತಾ ಕಳವಳಗಳ ಬಗ್ಗೆ ಮುಸ್ಲಿಮರು ಸಹಕಾರ ನೀಡಲು ಬದ್ಧರಾಗಿದ್ದಾರೆ. ಆದರೆ ಬುರ್ಖಾದಿಂದ ದೂರ ಉಳಿಯಬೇಕೆಂಬುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.
ಪ್ರವಾದಿ ಮೊಹಮ್ಮದ್ ಹೇಳಿರುವಂತೆ ಶರಿಯತ್ ನಿಯಮಾವಳಿಗಳ ಪ್ರಕಾರ ಬುರ್ಖಾ ಮುಸ್ಲಿಂ ಮಹಿಳೆಯರಿಗೆ ಅನಿವಾರ್ಯ. ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಮುಸ್ಲಿಮರು ಪ್ರತಿಕ್ರಿಯಿಸುವುದು ಹೇಗೆ ಸೂಕ್ತವಲ್ಲವೋ, ಅದೇ ರೀತಿ ಮುಸ್ಲಿಮರ ಧಾರ್ಮಿಕ ವಿಚಾರಗಳ ಕುರಿತು ಹಿಂದೂಗಳಿಗೂ ಅನ್ವಯವಾಗುತ್ತದೆ ಎಂದು ಧಾರ್ಮಿಕ ಮುಖಂಡ ಮೌಲಾನಾ ಫರೀದುಜಾಮಾ ಅಭಿಪ್ರಾಯಪಟ್ಟಿದ್ದಾರೆ.
ಖಾವ್ಮಿ ಮಜ್ಲೀಸ್ ಇ ಶೂರಾ ಉಪಾಧ್ಯಕ್ಷ ಮೌಲಾನಾ ಶೋಯಿಬ್ ಕೋಟಿಯವರಂತೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ಶಿವಸೇನಾ ವರಿಷ್ಠ ಬಾಳ್ ಠಾಕ್ರೆಯವರಿಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಕಳೆದ 25 ವರ್ಷಗಳ ಅವಧಿಯಲ್ಲಿ ಅವರಿಂದ ಇಂತಹ ಸಾಕಷ್ಟು ಪ್ರಚೋದನಾಕಾರಿ ಹೇಳಿಕೆಗಳು ಅವರಿಂದ ಬಂದಿವೆ. ಈಗ ಬುರ್ಖಾದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ' ಎಂದಿದ್ದಾರೆ.
ಇದಕ್ಕೊಂದು ತಾತ್ವಿಕ ಅರ್ಥ ವಿವರಣೆ ನೀಡಿರುವುದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯಕಾರಿ ಸದಸ್ಯ ಮೌಲಾನಾ ಅಥರ್ ಆಲಿ.
ಟಿವಿಯಲ್ಲಿ ಏನಾದರೂ ಹೊಲಸು ಚಿತ್ರಗಳು ಬಂದರೆ, ಚಾನೆಲ್ ಬದಲಾಯಿಸುವುದು ವಿವೇಕವೇ ಹೊರತು ಟಿವಿಯನ್ನು ಒಡೆಯುವುದಲ್ಲ. ಮುಖ ಮುಚ್ಚಿಕೊಳ್ಳುವುದು ಕೇವಲ ಮುಸ್ಲಿಂ ಧಾರ್ಮಿಕ ನಿಯಮಾವಳಿಯಲ್ಲ, ಇದು ಭಾರತೀಯ ಸಂಸ್ಕೃತಿಯ ಭಾಗ. ಶಿವಸೇನೆಯ ವಿಚಾರಗಳನ್ನು ಎಂಎನ್‌ಎಸ್ ಹೈಜಾಕ್ ಮಾಡಿರುವುದರಿಂದ ಅವರ ಕೈಗಳೀಗ ಖಾಲಿಯಾಗಿವೆ. ಹಾಗಾಗಿ ಹೀಗಾಡುತ್ತಿದ್ದಾರೆ ಎಂದು ಆಲಿ ಹೇಳಿದ್ದಾರೆ.