ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜತೆ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಹೋಲಿಕೆ ಮಾಡಿರುವುದು ಹಾಸ್ಯಾಸ್ಪದ ಮತ್ತು ಹತಾಶೆಯ ಪ್ರತೀಕ ಎಂದು ಜರೆದಿರುವ ಬಿಜೆಪಿ, ಇದು ಜನಪ್ರಿಯ ಸಮಾಜವಾದಿ ಘನತೆಯನ್ನು ಹಾಳುಗೆಡಹುವ ಯತ್ನ ಎಂದು ಬಣ್ಣಿಸಿದೆ.
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ನಂತರವೂ ಮಹತ್ವದ ಹೋರಾಟಗಳಲ್ಲಿ ಪಾಲ್ಗೊಂಡಿರುವ ಜಯಪ್ರಕಾಶ್ ನಾರಾಯಣ್ ಅವರಂತಹ ನಾಯಕರ ಗೌರವಕ್ಕೆ ಕುಂದುಂಟು ಮಾಡುವ ಯತ್ನವಿದು ಎಂದು ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.
ಜೆಪಿ-ರಾಹುಲ್ ಗಾಂಧಿ ಹೋಲಿಕೆ ಹಾಸ್ಯಾಸ್ಪದ ಮತ್ತು ವ್ಯಂಗ್ಯದಿಂದ ಕೂಡಿದೆ ಎಂದು ಹೇಳಿರುವುದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್.
ಇಂತಹ ಹೋಲಿಕೆ ಜನತೆಗೆ ಸಂಕಟ ತರುವುದು ಮಾತ್ರವಲ್ಲ, ಇದು ಕೀಳಭಿರುಚಿಯಿಂದ ಕೂಡಿದ್ದಾಗಿದೆ. ಜೆಪಿಯವರು ಚಳವಳಿಗಳನ್ನು ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಫ್ಯಾಷಿಸ್ಟ್ ಎಂದು ಕಾಂಗ್ರೆಸ್ ಕರೆದಿತ್ತು. ಅವರ ಚಳವಳಿಗಳನ್ನು ಪ್ರಜಾಪ್ರಭುತ್ವ ವಿರೋಧಿ ಎಂದಿತ್ತು. ಇದೆನ್ನೆಲ್ಲ ಆ ಪಕ್ಷವು ನೆನಪಿಸಿಕೊಳ್ಳುವ ಅಗತ್ಯವಿದೆ ಪ್ರಸಾದ್ ಸಲಹೆ ನೀಡಿದ್ದಾರೆ.
ಕಾಂಗ್ರೆಸ್‌ನ ಕರಾಳ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೆಪಿ ಚಳವಳಿ ನಡೆಸಿದ್ದರು. ಹೋರಾಡಿದ್ದರು. ಅದಕ್ಕಾಗಿ ಅವರನ್ನು ಕಾಂಗ್ರೆಸ್ ಜೈಲಿಗೆ ಹಾಕಿತ್ತು. ಆದರೆ ಈಗ ಯುವ ಜನತೆಯನ್ನು ಉದಾಹರಿಸಿ ಜೆಪಿಯವರೊಂದಿಗೆ ರಾಹುಲ್ ಗಾಂಧಿಯನ್ನು ಯಾವ ಆಧಾರದ ಮೇಲೆ ಹೋಲಿಕೆ ನಡೆಸಲಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಇದು ತೀವ್ರ ಖಂಡನೀಯ. ಅಲ್ಲದೆ ಕಾಂಗ್ರೆಸ್‌ನಲ್ಲಿ ಏನೂ ಉಳಿದಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಕ್ತಾರನ ವಿರುದ್ಧ ಕಾಂಗ್ರೆಸ್ ಕ್ರಮ? ಪಂಡಿತ್ ನೆಹರೂ ಬಳಿಕ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ದೇಶದ ಮಕ್ಕಳ ಬಗ್ಗೆ ಮಾತನಾಡಿದರು. ಅದೇ ರೀತಿ ಜಯಪ್ರಕಾಶ್ ನಾರಾಯಣ್. ಈಗ ರಾಹುಲ್ ಗಾಂಧಿ ಯುವಜನರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿ ಜೆಪಿ-ರಾಹುಲ್ ಹೋಲಿಕೆ ಮಾಡಿದ್ದು ಕಾಂಗ್ರೆಸ್ ವಕ್ತಾರ ಮೋಹನ್ ಪ್ರಕಾಶ್.
ಈ ಹೋಲಿಕೆಯ ಬಗ್ಗೆ ಕಾಂಗ್ರೆಸ್‌ನೊಳಗೇ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ವಕ್ತಾರ ಪ್ರಕಾಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಬರುತ್ತಿವೆ.
ಕಾಂಗ್ರೆಸ್‌ನ ವಕ್ತಾರರೆಂದರೆ ಅವರು ವಾಚಾಳಿಗಳೆಂದೇ ಪ್ರಸಿದ್ಧಿ. ಇದೇ ಕಾರಣದಿಂದ ಸತ್ಯವೃತ್ ಚತುರ್ವೇದಿ ಮತ್ತು ಅಭಿಷೇಕ್ ಮನು ಸಿಂಘ್ವಿ ಈಗಾಗಲೇ ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಈಗ ಪ್ರಕಾಶ್ ಸರದಿ. ಇನ್ನುಳಿದವರಲ್ಲಿ ಮನೀಷ್ ತಿವಾರಿ, ದಿಗ್ವಿಜಯ್ ಸಿಂಗ್ ಪ್ರಮುಖರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿಗೇನೂ ಕೊರತೆಯಿಲ್ಲ. ಹಾಗಿದ್ದರೂ ರಾಹುಲ್ ಅವರನ್ನು ಪ್ರಶಂಸಿಸಲು ಜೆಪಿಯವರ ಹೆಸರನ್ನು ಬಳಸಿದ್ದು ಅನಗತ್ಯವಾಗಿತ್ತು. ಜೆಪಿಯವರು ಕಾಂಗ್ರೆಸ್ಸನ್ನು ಒಂದು ಹಂತದಲ್ಲಿ ಭಾರೀ ಮಟ್ಟದಲ್ಲಿ ವಿರೋಧಿಸಿದವರು. ಅವರ ಜತೆ ಹೋಲಿಸಿದ್ದು ಸರಿಯಲ್ಲ ಎನ್ನುವುದು ಕಾಂಗ್ರೆಸ್ಸಿಗರ ಅಭಿಪ್ರಾಯ.