ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ವಸಾಹತುಶಾಹಿ ವಿರುದ್ಧ ಹೋರಾಟಕ್ಕೆ ರಾಯ್ ಕರೆ
(Indian colonialism | British imperialism | Arundhati Roy | Kashmir)
ಭಾರತದ ಜನತೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು 1947ರ ನಂತರ ಭಾರತದ ವಸಾಹತುಶಾಹಿ ವ್ಯವಸ್ಥೆಯು ಮುಂದುವರಿಸಿದೆ ಎಂದು ಆರೋಪಿಸಿರುವ ಲೇಖಕಿ-ಹೋರಾಟಗಾರ್ತಿ ಆರುಂಧತಿ ರಾಯ್, ಸ್ವಯಂನಿರ್ಧಾರದ ಹಕ್ಕುಗಳನ್ನು ಕಾಶ್ಮೀರದ ಜನತೆಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
'ಕಾಶ್ಮೀರದ ಭವಿಷ್ಯವೇನು? ಸ್ವಾತಂತ್ರ್ಯ ಅಥವಾ ಗುಲಾಮಗಿರಿ' ಎಂದು ಹೆಸರಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಯ್, ತಮಗೆ ಯಾವ ರೀತಿಯ ಸಮಾಜ ಬೇಕೆಂಬುದನ್ನು ಕಾಶ್ಮೀರಿಗಳು ವಿಚಾರ ಮಾಡಬೇಕು ಎಂದರು.
ಸಾರ್ವಭೌಮ ವಸಾಹತುಶಾಹಿಯನ್ನು ಕಾರ್ಪೊರೇಟ್ ವಸಾಹತುಶಾಹಿಯು ತ್ವರಿತಗತಿಯಲ್ಲಿ ಆಕ್ರಮಿಸಿಕೊಳ್ಳುತ್ತಿದೆ. ಸ್ಥಳೀಯ ಜನತೆಯ ಮೇಲೆ ಭಾರತದ ದಬ್ಬಾಳಿಕೆಯ ಬದಲಿಗೆ ಕಾರ್ಪೊರೇಟ್ ದಬ್ಬಾಳಿಕೆ ಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಕಾಶ್ಮೀರಿಗಳಿಗೆ ನೀಡಬೇಕು ಎಂದು ತಿಳಿಸಿದರು.
ನೀವು ಎದುರಿಸುತ್ತಿರುವ ದಬ್ಬಾಳಿಕೆಯ ಕುರಿತು ನಿಮ್ಮ ಹೋರಾಟಗಳು ಭಾರತದಲ್ಲಿ ಅರಿವನ್ನು ಹೆಚ್ಚಿಸಿದೆ. ಆದರೆ ನಿಮ್ಮ ಮನಸ್ಸಿನಲ್ಲಿರುವ ಸಮಾಜ ಯಾವ ಬಗೆಯದ್ದು, ನಿಮ್ಮ ಭವಿಷ್ಯ ಹೇಗಿರಬೇಕು ಎನ್ನುವುದನ್ನು ನೀವೇ ನಿರ್ಧರಿಸಬೇಕು ಎಂದರು.
ಕಾಶ್ಮೀರಿ ಜನತೆಯ ಮೇಲೆ 'ದಬ್ಬಾಳಿಕೆ' ನಡೆಸುತ್ತಿರುವುದಕ್ಕೆ ಭಾರತ ಸರಕಾರದ ಮೇಲೆ ಹರಿಹಾಯ್ದ ಅವರು, ಈಶಾನ್ಯ ಮತ್ತು ಇತರ ವಿರೋಧಿಗಳ ಧ್ವನಿಯನ್ನು ಅಡಗಿಸುವುದಕ್ಕಾಗಿ ಭಾರತವು ಕಾಶ್ಮೀರಿಗಳನ್ನು ಸೇನೆ ಮತ್ತು ಅರೆ ಸೇನಾಪಡೆಗಳಿಗೆ ಸೇರ್ಪಡೆಗೊಳಿಸುತ್ತಿದೆ ಎಂದು ಟೀಕಿಸಿದರು.
ಈ ವಿಚಾರಗೋಷ್ಠಿಯನ್ನು ಸ್ಥಳೀಯ ಹಕ್ಕುಗಳ ಹೋರಾಟಗಾರ ಫರ್ವೇಜಾ ಇಮ್ರೋಜ್ ನೇತೃತ್ವದ ಜಮ್ಮು-ಕಾಶ್ಮೀರ ನಾಗರಿಕ ಸಮಾಜ ಒಕ್ಕೂಟವು ಶ್ರೀನಗರದ ಹೊಟೇಲೊಂದರಲ್ಲಿ ಆಯೋಜಿಸಿತ್ತು.
ರಾಯ್ ಅವರನ್ನು ಹೊರತುಪಡಿಸಿ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನೌಲಾಖಾ ಮತ್ತು ದೆಹಲಿ ಮೂಲದ ಉದ್ಯಮಿ ಆಶಿಮ್ ರಾಯ್ ಕೂಡ ಭಾಗವಹಿಸಿದ್ದರು. ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆನ್ನುವ ಬೇಡಿಕೆಗೆ ಇವರು ಕೂಡ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು.