ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್ ಸೋಲಿನಿಂದ ಕಾಂಗ್ರೆಸ್ ಎದ್ದಿಲ್ಲ: ಅಡ್ವಾಣಿ ಲೇವಡಿ (Congress | BJP | Gujarat | LK Advani)
Bookmark and Share Feedback Print
 
ಗುಜರಾತ್ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕಾರ್ಯಕರ್ತರನ್ನು ಅಭಿನಂದಿಸಿರುವ ವರಿಷ್ಠ ಎಲ್.ಕೆ. ಅಡ್ವಾಣಿ, 100ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿಯಿಂದ ಗೆಲುವು ಸಾಧಿಸಿರುವುದನ್ನು ನೋಡಿ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
PTI

ಗುಜರಾತಿನಲ್ಲಿ ಕಳೆದ ವಾರ ನಡೆದಿರುವ ರಾಜಕೀಯ ವಿಪ್ಲವತೆಗೆ ಕಾರಣವಾಗಿರುವ ಸ್ಥಳೀಯ ಚುನಾವಣೆಗಳನ್ನು ನಾನು ಇದುವರೆಗೆ ಯಾವುದೇ ರಾಜ್ಯದಲ್ಲಿಯೂ ನಾನು ನೋಡಿಲ್ಲ. ನಗರಪಾಲಿಕೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಹೊರ ಬಿದ್ದಿರುವ ಫಲಿತಾಂಶಗಳನ್ನು ಕಂಡ ಕಾಂಗ್ರೆಸ್ ತೀವ್ರ ಆಘಾತಕ್ಕೊಳಗಾಗಿದೆ ಎಂದು ಅಡ್ವಾಣಿ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.

ಸೋಲಿನಿಂದಾಗಿ ಕಾಂಗ್ರೆಸ್‌ನಲ್ಲಿ ಅಸಮಾಧಾನಗಳು ಭುಗಿಲೆದ್ದಿವೆ, ಪಕ್ಷವು ತೀವ್ರ ಆಘಾತಕ್ಕೊಳಗಾಗಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ. ಕಾಂಗ್ರೆಸ್‌ನ ಸೋಲಿಗೆ ಹೊಣೆ ಹೊತ್ತು ಪಕ್ಷದ ಗುಜರಾತ್ ಘಟಕದ ಅಧ್ಯಕ್ಷ ಸಿದ್ಧಾರ್ಥ ಪಟೇಲ್ ರಾಜೀನಾಮೆ ನೀಡಿರುವುದು ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಶಕ್ತಿಸಿನ್ಹ ಗೋಹಿಲ್ ಕೂಡ ರಾಜೀನಾಮೆ ನೀಡಿರುವುದು ಇದರ ಪ್ರಮುಖ ಲಕ್ಷಣಗಳು ಎಂದು ಕೇಸರಿ ಪಕ್ಷದ ಹಿರಿಯ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಅಲೆಗೆ ಕೊಚ್ಚಿ ಹೋದ 'ಕೈ' ಮೈ ಪರಚಿಕೊಳ್ಳುತ್ತಿದೆ

ಬಿಜೆಪಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕೀಯದಿಂದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಪ್ರಭಾವಿತರಾಗಿದ್ದಾರೆ ಎನ್ನುವುದಕ್ಕೆ ಈ ಚುನಾವಣೆಗಳು ಸಾಕ್ಷಿ. ಜತೆಗೆ ಮತಬ್ಯಾಂಕ್ ರಾಜಕಾರಣವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದನ್ನು ಕೂಡ ನೋಡಬಹುದಾಗಿದೆ ಎಂದು ಅಡ್ವಾಣಿ ಬೆಟ್ಟು ಮಾಡಿ ತೋರಿಸಿದ್ದಾರೆ.

100ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಈ ಚುನಾವಣೆಯ ಮಹತ್ವದ ಅಂಶ. ಅಲ್ಲದೆ ಕ್ರೈಸ್ತರು ಪ್ರಾಬಲ್ಯ ಹೊಂದಿರುವ ಡಾಂಗ್ ಪ್ರಾಂತ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಕೂಡ ಪ್ರಮುಖವಾದದ್ದು. ಇದ್ನು ನೋಡಿ ಕಾಂಗ್ರೆಸ್ ಬದಲಾಗಬೇಕಿದೆ ಎಂದು ಸಲಹೆಯನ್ನೂ ನೀಡಿದರು.

2012ರ ವಿಧಾನಸಭಾ ಚುನಾವಣೆಗಳು ಬರುವ ಹಿನ್ನೆಲೆಯಲ್ಲಿ ಈ ಫಲಿತಾಂಶಗಳನ್ನು ಕಾಂಗ್ರೆಸ್ ಮುನ್ನೆಚ್ಚೆರಿಕೆ ಎಂದು ಪರಿಗಣಿಸಬೇಕು ಎಂದಿರುವ ಅಡ್ವಾಣಿ, ತುರ್ತು ಪರಿಸ್ಥಿತಿಯ ನಂತರ 304 ಕ್ಷೇತ್ರಗಳಲ್ಲಿ 12 ಸ್ಥಾನಗಳನ್ನು ಗೆದ್ದಿರುವುದನ್ನು ಇದು ನೆನಪಿಸುತ್ತಿದೆ ಎಂದಿದ್ದಾರೆ.

ಇದು ಕೇವಲ ಗುಜರಾತ್ ಕಾಂಗ್ರೆಸ್ ನಾಯಕತ್ವದ ವೈಫಲ್ಯ ಎಂದು ಮಾತ್ರ ದೆಹಲಿ ಹೈಕಮಾಂಡ್ ಭಾವಿಸಿದ್ದರೆ, ಅದು ಸಂಪೂರ್ಣ ತಪ್ಪು ಕಲ್ಪನೆ. ಕೇಂದ್ರ ಸರಕಾರವು ಮೋದಿ ಮತ್ತು ಅವರ ಸರಕಾರದ ವಿರುದ್ಧ ಕಾರ್ಯಾಚರಣೆ ನಡೆಸುವ ಸಲುವಾಗಿ ಮಾಡಿದ ಕುತಂತ್ರಕ್ಕೆ ಸಿಕ್ಕಿದ ಪ್ರತಿಫಲವಿದು ಎಂದು ಖಾರವಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ