ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಅಲೆಗೆ ಕೊಚ್ಚಿ ಹೋದ 'ಕೈ' ಮೈ ಪರಚಿಕೊಳ್ಳುತ್ತಿದೆ (Narendra Modi | BJP | Congress | municipalities)
Bookmark and Share Feedback Print
 
ಕೈಲಾಗದವ ಮೈ ಪರಚಿಕೊಂಡ ಎಂಬ ಗಾದೆ ನೆನಪಿಗೆ ಬಂದರೆ ಅಚ್ಚರಿಯಿಲ್ಲ. ಸ್ಥಳೀಯ ಚುನಾವಣೆಗಳಲ್ಲಿ ಪಾತಾಳಕ್ಕೆ ತಳ್ಳಲ್ಪಟ್ಟಿರುವ ಕಾಂಗ್ರೆಸ್ ಇದೀಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಮತದಾನಕ್ಕೆ ನಕಲಿ ಮತಯಂತ್ರಗಳನ್ನು ಬಳಸಲಾಗಿದೆ ಎಂದು ತಗಾದೆ ತೆಗೆದಿದೆ.

ಇತ್ತೀಚೆಗಷ್ಟೇ ನಡೆದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಕಾಂಗ್ರೆಸ್ ಈ ಆರೋಪಗಳನ್ನು ಮಾಡಿದೆ.

ಜಿಲ್ಲಾ ಪಂಚಾಯತ್‌ನ 24 ಕ್ಷೇತ್ರಗಳಲ್ಲಿ 22, ತಾಲೂಕು ಪಂಚಾಯತ್‌ನ 208ರಲ್ಲಿ 176 ಹಾಗೂ ನಗರಪಾಲಿಕೆಯ 52ರಲ್ಲಿ 42 ಕ್ಷೇತ್ರಗಳಲ್ಲಿ ಬಿಜೆಪಿ ಶನಿವಾರ ನಡೆದ ಮತ ಎಣಿಕೆಯಲ್ಲಿ ಜಯ ಗಳಿಸಿತ್ತು.

ನಕಲಿ ಮತಯಂತ್ರಗಳು: ಕಾಂಗ್ರೆಸ್
ಕಾಂಗ್ರೆಸ್‌ನ ಹಲವು ನಾಯಕರು ಮಾಡುತ್ತಿರುವ ಆರೋಪಗಳಿವು. ಮಹಾನಗರಪಾಲಿಕೆ ಬೆನ್ನಿಗೆ ನಡೆದಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ನ್ಯಾಯಯುತವಾದ ಹಾದಿಯಲ್ಲಲ್ಲ, ಇದು ನಕಲಿ ಮತಯಂತ್ರಗಳಿಂದಾಗಿ ಎಂದು ಆರೋಪಿಸಿದೆ.

ಗುಜರಾತಿನಲ್ಲಿ ಶೇ.80ರಷ್ಟು ಮತಗಳನ್ನು ಒಂದೇ ಪಕ್ಷ ಪಡೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಶೇ.25ರಷ್ಟಿದ್ದ ಮತದಾನವು ಕೆಲವೇ ಹೊತ್ತಿನಲ್ಲಿ ಶೇ.45ಕ್ಕೆ ಏರುತ್ತದೆ. ಹಾಗಾಗಿ ಇದು ಸಂಶಯ ಹುಟ್ಟಿಸುತ್ತಿದೆ. ಜನ ಹೇಳುತ್ತಿರುವಂತೆ ಇದು ಮೋದಿ ಮ್ಯಾಜಿಕ್ ಅಲ್ಲ, ಯಂತ್ರದ ಮ್ಯಾಜಿಕ್ ಎಂದು ಮಾಜಿ ಸಚಿವ ಶಂಕರಸಿಂಗ್ ವಘೇಲಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಹೇಳಿಕೆ ವೀರ ಮನೀಷ್ ತಿವಾರಿ ಕೂಡ ಇದೇ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್ ಸ್ಥಳೀಯ ಚುನಾವಣೆಗಳಲ್ಲಿ ಮೋಸದಾಟ ನಡೆದಿದೆ. ಕಾಂಗ್ರೆಸ್ ಪರ ಮತ ಚಲಾಯಿಸಿದವರ ಮತಗಳು ಬಿಜೆಪಿಗೆ ಬಿದ್ದಿವೆ. ಗುಜರಾತ್ ಚುನಾವಣೆಗಳಿಗೆ ಚುನಾವಣಾ ಆಯೋಗವು ಮತಯಂತ್ರಗಳನ್ನು ಪೂರೈಸಿಲ್ಲ ಎಂದು ಆಯೋಗವೇ ಹೇಳಿದೆ. ಇಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ತಿವಾರಿ ಆರೋಪಿಸಿದ್ದಾರೆ.

100ಕ್ಕೂ ಹೆಚ್ಚು ಮುಸ್ಲಿಮರಿಗೆ ಗೆಲುವು...
250ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ 100ಕ್ಕೂ ಹೆಚ್ಚು ಮುಸ್ಲಿಮರು ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯೆನಿಸಿದ್ದ ಹಲವು ಪ್ರದೇಶಗಳು ಬಿಜೆಪಿ ಪಾಲಾಗಿವೆ.

ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ಗೆ ಮಹತ್ವದ ಹಿನ್ನಡೆಯಾಗಿರುವುದು ಮುಸ್ಲಿಮರು ಮತ್ತು ಕ್ರೈಸ್ತರು ಬಿಜೆಪಿಯತ್ತ ಮುಖ ಮಾಡಿರುವುದರಿಂದ. ಕಾಂಗ್ರೆಸ್‌ನ ಮೂಲಾಧಾರ ಎಂದು ಹೇಳಲಾಗುವ ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನರು ಕೂಡ ಬಿಜೆಪಿಯತ್ತ ವಾಲುತ್ತಿದ್ದಾರೆ ಎನ್ನುವುದು ಇತ್ತೀಚಿನ ಬೆಳವಣಿಗೆ.

ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ...
ಗುಜರಾತಿನಲ್ಲಿ ದುರ್ಬೀನು ಹಾಕಿ ನೋಡಿದರೂ ಕಾಂಗ್ರೆಸ್ ಕಾಣುತ್ತಿಲ್ಲ. ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ಇದರ ಹೊಣೆ ಹೊತ್ತಿರುವ ಗುಜರಾತ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಪಟೇಲ್ ರಾಜೀನಾಮೆಗೆ ಮುಂದಾಗಿದ್ದಾರೆ.

ನನಗೆ ರಾಜೀನಾಮೆಯ ಹೊರತು ಬೇರೆ ಆಯ್ಕೆಗಳೇ ಇಲ್ಲ. ಸೋಲಿನ ನೈತಿಕ ಹೊಣೆಯನ್ನು ಹೊತ್ತು, ನಾನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಈಗಾಗಲೇ ಇದನ್ನು ಸೋನಿಯಾ ಗಾಂಧಿಯವರಿಗೆ ರವಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಜನರಿಗೆ ಕಾಂಗ್ರೆಸ್ ಬೇಡವಾಗಿದೆ: ಮೋದಿ
ಮತಯಂತ್ರಗಳನ್ನು ತಿದ್ದುಪಡಿ ಮಾಡಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನರೇಂದ್ರ ಮೋದಿ, ಯಂತ್ರಗಳು ಸರಿಯಾಗಿವೆ; ಜನತೆಗೆ ಕಾಂಗ್ರೆಸ್ ಬೇಡವಾಗಿದೆ ಎಂದಿದ್ದಾರೆ.

ಮತಯಂತ್ರಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನ ಮಂತ್ರಿಯವರೇ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ಗೆ ಅದು ಬಹುಶಃ ಮರೆತು ಹೋಗಿದೆ. ಇಲ್ಲಿರುವುದು ಮತಯಂತ್ರ ದೋಷವಲ್ಲ, ಜನತೆಯು ನಿಮ್ಮನ್ನು ತಿರಸ್ಕರಿಸಿದ್ದಾರೆ -- ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರಿಗೆ ನಾನು ಹೇಳಲು ಬಯಸುತ್ತಿದ್ದೇನೆ ಎಂದರು.

ಕಾಂಗ್ರೆಸ್ ಅನುಸರಿಸುತ್ತಿರುವ ಮತಬ್ಯಾಂಕ್ ರಾಜಕಾರಣದಿಂದ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಲಾಭವಿಲ್ಲ ಎಂಬುದು ಮನವರಿಕೆಯಾಗಿದೆ. ಆ ಕಾರಣದಿಂದ ಕಾಂಗ್ರೆಸ್ಸನ್ನು ಜನತೆ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿಯ ಪರ 100ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ರಾಷ್ಟ್ರ ರಾಜಕಾರಣದಲ್ಲೂ ಇಂತಹುದೇ ಸ್ಥಿತಿಯನ್ನು ಕಾಂಗ್ರೆಸ್ ಎದುರಿಸಲಿದೆ ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ:
** ಮತ್ತೆ ಮುಸ್ಲಿಮರಿಗೆ ಉಘೇ ಉಘೇ ಎಂದ ನರೇಂದ್ರ ಮೋದಿ
** ಗುಜರಾತ್ ಮುಸ್ಲಿಮರಿಗೀಗ ಮೋದಿ ಅಭಿವೃದ್ಧಿಯ ಹರಿಕಾರ
ಸಂಬಂಧಿತ ಮಾಹಿತಿ ಹುಡುಕಿ