ಬಿಜೆಪಿಯಲ್ಲಿ ಮೋದಿ ವಿರುದ್ಧ ಗುಂಪುಗಾರಿಕೆ ನಡೆಯುತ್ತಿದೆಯೇ?
ನವದೆಹಲಿ, ಗುರುವಾರ, 28 ಅಕ್ಟೋಬರ್ 2010( 14:53 IST )
ಕೆಲವು ದಿನಗಳ ಹಿಂದೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿಕೆಯೊಂದನ್ನು ನೀಡಿದಾಗಲೇ ಇಂತಹ ಹತ್ತು ಹಲವು ಸಂಶಯಗಳು ಹುಟ್ಟಿಕೊಂಡಿದ್ದವು. ಅವುಗಳಿಗೀಗ ಪುಷ್ಠಿ ಬಂದಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬೆಳವಣಿಗೆಯನ್ನು ತಡೆಯಲು ಕೆಲವು ಮಂದಿ ಪರೋಕ್ಷವಾಗಿ ಯತ್ನಿಸುತ್ತಿರುವುದು ಬಹಿರಂಗವಾಗುತ್ತಿದೆ.
ಮೋದಿ ಮ್ಯಾಜಿಕ್ ಗುಜರಾತಿನಲ್ಲಿ ಚೆನ್ನಾಗಿ ನಡೆದಿದೆ. ಹಾಗೆಂದು ಎಲ್ಲಾ ಕಡೆ ನಡೆಯಬೇಕೆಂದೇನೂ ಇಲ್ಲ. ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕೆ ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿಯವರ ಮ್ಯಾಜಿಕ್ ಕೆಲಸ ಮಾಡುತ್ತಿದೆ ಎಂದು ಸುಷ್ಮಾ ಕೊಂಕು ಮಾತನಾಡಿದ್ದರು.
PR
ಸುಷ್ಮಾ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರಿಂದ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೂ ಬಿಜೆಪಿಯೊಳಗೆ ಮೋದಿ ವಿರುದ್ಧ ತಂತ್ರವೊಂದು ಸಿದ್ಧವಾಗುತ್ತಿರುವುದು ಈ ಮೂಲಕ ಬಯಲಾಗಿತ್ತು. ಅದೀಗ ಸ್ಪಷ್ಟ ರೂಪ ಪಡೆದುಕೊಂಡಿರುವುದು ಜಾಹೀರಾತೊಂದರ ಮೂಲಕ.
ಕರ್ನಾಟಕ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಲೇಹರ್ ಸಿಂಗ್ ಎಂಬವರೇ ಇದೀಗ ಕೇಂದ್ರ ಬಿಂದುವಾಗಿರುವವರು. ಇವರು ಮೋದಿಯನ್ನು ಪ್ರಶಂಸಿಸಿರುವ ಜಾಹೀರಾತೊಂದನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಕೇಸರಿ ಪಕ್ಷದ ಭಿನ್ನಮತವನ್ನು ಹೊರಗೆಡವಿದ್ದಾರೆ.
ಗುಜರಾತಿನಲ್ಲಿ ಹಲವು ಜಯಭೇರಿಗಳನ್ನು ಪಕ್ಷಕ್ಕೆ ಒದಗಿಸಿಕೊಟ್ಟಿರುವ ಮೋದಿ ಮುಂದೆ ಬಂದು ದೇಶವನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಲೇಹರ್ ತನ್ನ ಜಾಹೀರಾತಿನಲ್ಲಿ ಒತ್ತಾಯಿಸಿದ್ದಾರೆ.
'ಗುಜರಾತಿನ ಯಶಸ್ವಿ ಮುಖ್ಯಮಂತ್ರಿ ನರೇಂದ್ರ ಮೋದಿಗೆ ರಾಜ್ಯದಲ್ಲಿ ವಿಜಯದ ಮೇಲೆ ವಿಜಯಕ್ಕಾಗಿ ಕರ್ನಾಟಕದ ಜನತೆಯ ಪರವಾಗಿ ಕೋಟಿ ಕೋಟಿ ಅಭಿನಂದನೆಗಳು. ನಿರಂತರ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೂಡ ಗುಜರಾತಿನಲ್ಲಿ ರಾಷ್ಟ್ರವಾದದ ವಿಜಯ ಪತಾಕೆಯನ್ನು ಹಾರಿಸಿದ ಮತ್ತು ರಾಜ್ಯವನ್ನು ಅಭಿವೃದ್ಧಿಯ ಹೊಸ ಮಾರ್ಗದಲ್ಲಿ ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರಿಗೆ ಹಾರ್ದಿಕ ಅಭಿನಂದನೆಗಳು. ಬನ್ನಿ, ಭಾರೀ ಸಮಸ್ಯೆಗಳಲ್ಲಿ ಸಿಲುಕಿರುವ ದೇಶಕ್ಕೆ ನಿರ್ಣಾಯಕ ಮಾರ್ಗ ತೋರಿಸಿ' ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.
ಮೂಲಗಳ ಪ್ರಕಾರ ಈ ಜಾಹೀರಾತನ್ನು ನೀಡಿರುವುದು ಸುಷ್ಮಾ ಹೇಳಿಕೆಗೆ ಪ್ರತ್ಯುತ್ತರ ನೀಡುವ ಸಲುವಾಗಿ. ಮೋದಿ ಮ್ಯಾಜಿಕ್ ಎಲ್ಲಾ ಕಡೆ ನಡೆಯಬೇಕಿಲ್ಲ ಎನ್ನುವ ಹೇಳಿಕೆಗೆ ಪರೋಕ್ಷ ವಿರೋಧ ವ್ಯಕ್ತಪಡಿಸುವ ಸಲುವಾಗಿ ಹೀಗೆ ಮಾಡಲಾಗಿದೆ.
ಈಗಾಗಲೇ ಪ್ರಧಾನ ಮಂತ್ರಿ ರೇಸ್‌ನಲ್ಲಿ ಸೋತು ಬದಿಗೆ ಸರಿದಿರುವ ಎಲ್.ಕೆ. ಅಡ್ವಾಣಿ ನಂತರ ಆ ಪಟ್ಟಕ್ಕೆ ಕೇಳಿ ಬರುತ್ತಿರುವ ಎರಡು ಹೆಸರುಗಳಲ್ಲಿ ಮೊದಲನೆಯದ್ದು ನರೇಂದ್ರ ಮೋದಿ, ಅಲ್ಲೇ ಕಾಣಿಸುವ ಮತ್ತೊಂದು ಹೆಸರು ಸುಷ್ಮಾ ಸ್ವರಾಜ್. ಹಾಗಾಗಿ ಈ ಇಬ್ಬರು ನಾಯಕರು ಮತ್ತೊಬ್ಬರಿಗೆ ಹೆಚ್ಚು ಆದ್ಯತೆ ಸಿಗುವುದನ್ನು ಇಚ್ಛಿಸುವುದಿಲ್ಲ.
ಇದೇ ಕಾರಣದಿಂದ ಮೋದಿಯನ್ನು ಗುಜರಾತಿಗೆ ಸೀಮಿತಗೊಳಿಸಬೇಕು, ರಾಷ್ಟ್ರೀಯ ನಾಯಕನೆಂದು ಬಿಂಬಿಸಲು ಅವಕಾಶ ನೀಡಬಾರದು ಎಂಬ ನಿಟ್ಟಿನಲ್ಲಿ ಸುಷ್ಮಾ ಇಂತಹ ಹೇಳಿಕೆಯನ್ನು ನೀಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.