ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಬಗ್ಗೆ ಅಪಸ್ವರ ಎತ್ತಿಲ್ಲ: ಸುಷ್ಮಾ | ಇದು ಯಡ್ಡಿ ತಂತ್ರ? (BJP | Sushma Swaraj | Narendra Modi | BS Yeddyurappa)
Bookmark and Share Feedback Print
 
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮ್ಯಾಜಿಕ್ ಎಲ್ಲಾ ಕಡೆ ಕೆಲಸ ಮಾಡದು ಎಂದು ನಾನು ಹೇಳಿಯೇ ಇಲ್ಲ, ಇದು ಮಾಧ್ಯಮಗಳು ಮಾಡಿರುವ ತಪ್ಪು ವರದಿ ಎಂದು ಸುಷ್ಮಾ ಸ್ವರಾಜ್ ಜಾರಿಕೊಂಡಿದ್ದಾರೆ. ಅತ್ತ ಬಿಜೆಪಿ ಕೂಡ ಸುಷ್ಮಾಗೆ ಸುಮ್ಮನಿರುವಂತೆ ಎಚ್ಚರಿಕೆ ನೀಡಿದೆ. ಇವೆಲ್ಲದರ ನಡುವೆ ಸುಷ್ಮಾ-ಮೋದಿ ಪ್ರಕರಣಕ್ಕೆ ಉಪ್ಪು-ಖಾರ ಹಚ್ಚಿದ್ದು ಬಿ.ಎಸ್. ಯಡಿಯೂರಪ್ಪ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಮೋದಿ ಮೂಲೆಗುಂಪು ಮಾಡುತ್ತಿದ್ದಾರೆಯೇ ಸುಷ್ಮಾ ಸ್ವರಾಜ್?

ಸುಷ್ಮಾ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಮೋದಿ ಅಧಿಕೃತವಾಗಿ ತನ್ನ ದೂರವನ್ನು ಬಿಜೆಪಿ ವರಿಷ್ಠರಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಮೋದಿ ಕುರಿತು ಯಾವುದೇ ಹೇಳಿಕೆ ನೀಡದಂತೆ ಸುಷ್ಮಾಗೆ ಫರ್ಮಾನು ಹೊರಡಿಸಿದ್ದಾರೆ. ಅಲ್ಲದೆ ಈ ಕುರಿತು ಎಲ್.ಕೆ. ಅಡ್ವಾಣಿಯವರ ಜತೆ ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಮೋದಿಯವರ ಬಗ್ಗೆ ನಾನು ಉನ್ನತ ಗೌರವ ಹೊಂದಿದ್ದೇನೆ. ಅವರ ಜತೆ ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಪಾಟ್ನಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ವಿವಾದವನ್ನು ತಣ್ಣಗಾಗಿಸಲು ಸುಷ್ಮಾ ಯತ್ನಿಸಿದ್ದಾರೆ.

ನಿನ್ನೆಯಷ್ಟೇ ಗಡ್ಕರಿಯವರ ಜತೆ ಮಾತನಾಡಿದ್ದೇನೆ. ಅವರು ಮೋದಿ ವಿವಾದದ ಕುರಿತು ಯಾವುದೇ ವಿಚಾರವನ್ನು ನನ್ನಲ್ಲಿ ಪ್ರಸ್ತಾಪಿಸಿಲ್ಲ. ಆ ಕುರಿತು ಒಂದೇ ಒಂದು ಶಬ್ದವನ್ನೂ ಅವರು ಎತ್ತಿಲ್ಲ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದರು.

ಅದೇ ಹೊತ್ತಿಗೆ ಇದು ತಮಗೆ ಆಗದವರ ಕುತಂತ್ರ ಎಂದೂ ಸುಷ್ಮಾ ಟೀಕಿಸಿದ್ದಾರೆ.

ಮೋದಿ ಮತ್ತು ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಾಗಲೀ, ಪ್ರಕ್ಷುಬ್ಧತೆಯಾಗಲೀ ಇಲ್ಲ. ನರೇಂದ್ರ ಮೋದಿಯವರದ್ದು ವಿಶಿಷ್ಟ ವ್ಯಕ್ತಿತ್ವವಾಗಿರುವುದರಿಂದ, ಮಾಧ್ಯಮ ವರದಿಗಳಿಂದ ಯಾವುದೇ ಧಕ್ಕೆಯಾಗದು. ಅವರು ಕೂಡ ಈ ಕುರಿತು ನನ್ನಲ್ಲೇನೂ ಮಾತನಾಡಿಲ್ಲ. ಹಾಗೇನಾದರೂ ನನ್ನ ಬಗ್ಗೆ ತಕರಾರು ಇರುತ್ತಿದ್ದರೆ, ಅವರೇ ನೇರವಾಗಿ ಮಾತನಾಡುತ್ತಿದ್ದರು ಎಂದರು.

ನಮ್ಮಿಬ್ಬರ ನಡುವೆ ಕಿಚ್ಚು ಹಚ್ಚಲು ಯಾರೋ ಯತ್ನಿಸುತ್ತಿದ್ದಾರೆ. ಇಡೀ ದೇಶದ ಗಮನ ಕಾಮನ್‌ವೆಲ್ತ್ ಗೇಮ್ಸ್ ಹಗರಣದ ಮೇಲಿರುವುದರಿಂದ, ಅದನ್ನು ಬೇರೆಡೆಗೆ ಹರಿಸಲು ನಡೆಸಿದ ಯತ್ನ ಇದಾಗಿರಬಹುದು ಎಂದಾಗ, ಅವರು ಪಕ್ಷೀಯರೇ ಅಥವಾ ಹೊರಗಿನವರೇ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲು ಲೋಕಸಭೆಯ ಪ್ರತಿಪಕ್ಷದ ನಾಯಕಿ ನಿರಾಕರಿಸಿದರು.

ಯಡಿಯೂರಪ್ಪ ತಂತ್ರ?
ಮೋದಿ ಬಗ್ಗೆ ಸುಷ್ಮಾ ಹೇಳಿಕೆ ನೀಡಿದ ಬಳಿಕ ಗುಜರಾತಿನ ಪತ್ರಿಕೆಗಳಲ್ಲಿ ಮೋದಿಯನ್ನು ಅಪಾದಮಸ್ತಕ ಹೊಗಳುವ ಮತ್ತು ರಾಷ್ಟ್ರ ರಾಜಕಾರಣಕ್ಕೆ ಬರಬೇಕು, ದೇಶವನ್ನು ಸಂಕಷ್ಟದಿಂದ ಪಾರು ಮಾಡಬೇಕು, ಪಕ್ಷವನ್ನು ಮುನ್ನಡೆಸಬೇಕು ಎಂದು ಒತ್ತಾಯಿಸಿ ಬೃಹತ್ ಜಾಹೀರಾತೊಂದನ್ನು ಪ್ರಕಟಿಸಲಾಗಿತ್ತು.

ಇದನ್ನು ಪ್ರಕಟಿಸಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್.

ಬಳ್ಳಾರಿ ರೆಡ್ಡಿ ಸಹೋದರರು ಸುಷ್ಮಾ ಸ್ವರಾಜ್ ಬಗ್ಗೆ ಹೊಂದಿರುವ ಒಲವಿನ ಬಗ್ಗೆ ಎಲ್ಲರಿಗೂ ಗೊತ್ತು. ರೆಡ್ಡಿಗಳು ಸುಷ್ಮಾರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದಾರೆ ಎನ್ನುವ ಮಾತುಗಳು ಈ ಹಿಂದೆಯೇ ಕೇಳಿ ಬಂದಿದ್ದವು. ಅಲ್ಲದೆ ಸುಷ್ಮಾ ಸಹಕಾರದಿಂದಲೇ ಕರ್ನಾಟಕ ಬಿಜೆಪಿ ಸರಕಾರವನ್ನು ರೆಡ್ಡಿಗಳು ಅಲುಗಾಡಿಸುತ್ತಿದ್ದಾರೆ ಎನ್ನುವುದು ಕೂಡ ವಾಸ್ತವ.

ಪ್ರಸಕ್ತ ಬಂಡಾಯ ಶಾಸಕರುಗಳ ಕಾಟದಿಂದ ಸರಕಾರವನ್ನು ಬಚಾವ್ ಮಾಡಲು ರೆಡ್ಡಿಗಳು ಸಹಕಾರ ನೀಡಿರುವುದು ಹೌದಾದರೂ, ಅವರು ಮತ್ತೆ ತಗಾದೆ ಎತ್ತದೇ ಇರುವುದು ಸಾಧ್ಯವೇ ಇಲ್ಲ. ಅದಕ್ಕಾಗಿ ಅವರು ನಂಬಿಕೊಂಡಿರುವ ಕೇಂದ್ರದ ನಾಯಕತ್ವವನ್ನು ದುರ್ಬಲಗೊಳಿಸಿ, ಮತ್ತೊಂದು ಬಣವನ್ನು ಪೋಷಿಸಿದರೆ ಲಾಭವಾಗಬಹುದು ಎಂದು ಯಡಿಯೂರಪ್ಪ ಚಿಂತಿಸಿದ್ದಾರೆ. ಅದೇ ಕಾರಣದಿಂದ ವಿವಾದ ತಾರಕದಲ್ಲಿರುವ ಹೊತ್ತಿನಲ್ಲಿ, ಸುಷ್ಮಾರಿಗೆ ಹಿನ್ನಡೆಯಾಗುವ ರೀತಿಯಲ್ಲಿ ಮೋದಿಯವರನ್ನು ಶ್ಲಾಘಿಸಿ ಜಾಹೀರಾತು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ