ವಿಶ್ವದ ದೊಡ್ಡಣ್ಣ ಎಂದೇ ಬಿಂಬಿಸಲ್ಪಟ್ಟಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಬಂದಿಳಿಯಲು ಕ್ಷಣಗಣನೆ ಆರಂಭವಾಗಿದೆ. ಬರಾಕ್ ಶನಿವಾರ (ನ.6) ಮಧ್ಯಾಹ್ನ ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲೆಡೆ ಸರ್ಪಗಾವಲು, ಬರಾಕ್ ಭೇಟಿಗಾಗಿ ಭಾರತ ಕಾತರದಿಂದ ಕಾಯುತ್ತಿದ್ದರೆ, ಮತ್ತೊಂದೆಡೆ ಭಾರತದಾದ್ಯಂತ ಒಬಾಮ ಮೇನಿಯಾ!
ಭಾನುವಾರ ದೇಶದ ವಾಣಿಜ್ಯ ನಗರಿ ಮುಂಬೈಯಲ್ಲಿ ಒಬಾಮ ಪತ್ನಿ,ಮಕ್ಕಳೊಂದಿಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಸೋಮವಾರ ಸಂಜೆ ಸಂಸತ್ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅವರು ಮುಂಬೈ, ದೆಹಲಿಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಗಿ ಬಂದೋಬಸ್ತ್, ಎಲ್ಲೆಡೆ ಹದ್ದಿನಕಣ್ಣು: ಒಬಾಮ ಅವರ ಭಾರತದ ಪ್ರವಾಸದ ವೇಳೆಯಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಅವರು ತಂಗಲಿರುವ ತಾಜ್ ಹೋಟೆಲ್, ಮೌರ್ಯ ಶೆರಟಾನ್ ಹೋಟೆಲ್‌ಗಳನ್ನು ಅಮೆರಿಕದ ಭದ್ರತಾ ಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಮುಂಬೈಯಲ್ಲಿ ಐದು ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳಿಂದ ಪೂರ್ವ ತಯಾರಿಯ ತಾಲೀಮು ನಡೆಯುತ್ತಿದೆ. ಒಬಾಮ ತೆರಳಲಿರುವ ರಸ್ತೆ ಮತ್ತು ಸ್ಥಳಗಳ ಸುತ್ತಮುತ್ತ ಭಾರೀ ಭದ್ರತೆ ಏರ್ಪಡಿಸಲಾಗಿದೆ.
ಒಬಾಮ ಅವರದೊಂದಿಗೆ ಪತ್ರಕರ್ತರು, ಅಧಿಕಾರಿಗಳು ಸೇರಿದಂತೆ ಮೂರು ಸಾವಿರ ಮಂದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದ ಕರಾವಳಿಯಲ್ಲಿ ಗಸ್ತು ಕಾಯಲು ವಿಮಾನ ವಾಹನ ನೌಕೆ ಸೇರಿದಂತೆ 34 ಯುದ್ಧ ಹಡಗುಗಳನ್ನು ನಿಯೋಜಿಸಲಾಗಿದೆ. ಒಬಾಮ ಅವರು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲಾಬಾದಲ್ಲಿರುವ ಭಾರತೀಯ ನೌಕಾದಳದ ವಾಯುನೆಲೆ ಐಎನ್ಎಸ್ ಶಿಖರಾಗೆ ನೌಕಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲಿದ್ದಾರೆ. ಅಲ್ಲಿಂದ ಅವರು ಅತ್ಯಾಧುನಿಕ ಬಹುಕೋಟಿ ಬೆಲೆಯ ಲಿಮೋಸಿನ್ ಕಾರು 'ಲಿಂಕನ್ ಕಾಂಟಿನೆಂಟಲ್'ನಲ್ಲಿ ತಾಜ್ ಹೋಟೆಲ್‌ಗೆ ತೆರಳಲಿದ್ದಾರೆ.
ಒಬಾಮ ಬೆಂಗಾವಲು ಪಡೆಯಲ್ಲಿ ಅತ್ಯಾಧುನಿಕ ಸಂಪರ್ಕ ಮತ್ತು ಭದ್ರತಾ ವ್ಯವಸ್ಥೆಯೊಂದಿಗೆ ಶಸ್ತ್ರಸಜ್ಜಿತವಾದ ಎರಡು ಜೆಟ್ ವಿಮಾನಗಳು ಹಾಗೂ ಸುಮಾರು 40 ಕಾರುಗಳು ಸಾಗಲಿವೆ. ಒಬಾಮ ಮತ್ತು ಅವರ ತಂಡಕ್ಕೆ ತಾಜ್ ಮತ್ತು ಹೈಯತ್ ಪಂಚತಾರಾ ಹೋಟೆಲ್‌ನಲ್ಲಿ 800 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಒಬಾಮ ಟೀ ಶರ್ಟ್, ಹ್ಯಾಂಡ್‌ಬ್ಯಾಗ್‌ಗೆ ಭಾರೀ ಬೇಡಿಕೆ: ಒಬಾಮ ಅವರು ಮುಂಬೈಗೆ ಕಾಲಿಡುವ ಮುನ್ನವೇ ಒಬಾಮಗೆ ಸಂಬಂಧಿಸಿದ ಪುಸ್ತಕ, ಟೀ ಶರ್ಟ್‌ಗಳು ಹಾಟ್ ಕೇಕ್‌ನಂತೆ ಬಿಕರಿಯಾಗುತ್ತಿವೆಯಂತೆ! ಕೊಲಾಬಾದ ಬೀದಿಗಳಲ್ಲಿ ಈ ಮೊದಲು ಕ್ರಾಂತಿಕಾರಿ ಹೋರಾಟಗಾರ ಚೇ ಗುವೆರಾನ ಟೀ ಶರ್ಟ್‌ಗೆ ಭಾರೀ ಬೇಡಿಕೆ ಇದ್ದಿತ್ತಂತೆ, ಆದರೆ ಇದೀಗ ಒಬಾಮ ಟೀ ಶರ್ಟ್‌ಗೆ ಹೆಚ್ಚಿನ ಬೇಡಿಕೆ ಬಂದಿರುವುದಾಗಿ ವರದಿಯೊಂದು ತಿಳಿಸಿದೆ.
ಇಲ್ಲಿನ ವ್ಯಾಪಾರಿಗಳು ಮೊದಲ ಬಾರಿಗೆ ಹೊಸ ತಂತ್ರವನ್ನು ಕಂಡು ಹಿಡಿದಿದ್ದು, ಒಬಾಮ ಟೀ ಶರ್ಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಈ ಮೊದಲು ವಿದೇಶಿಯರಾಗಲಿ, ಭಾರತದವರು ಒಂದೇ ಒಂದು ಟೀ ಶರ್ಟ್ ಖರೀದಿಸುತ್ತಿಲ್ಲವಾಗಿತ್ತಂತೆ. ಒಟ್ಟಾರೆ ಒಬಾಮ ಭಾರತಕ್ಕೆ ಭೇಟಿ ನೀಡುತ್ತಿರುವುದು ಜನಸಾಮಾನ್ಯರಲ್ಲಿಯೂ ತೀವ್ರ ಕುತೂಹಲ ಕೆರಳಿಸಿದೆ.
ಹಾಗಂತ ಒಬಾಮ ಮೇನಿಯಾ ಕೇವಲ ದಕ್ಷಿಣ ಮುಂಬೈಗೆ ಮಾತ್ರ ಸೀಮಿತವಾಗಿಲ್ಲ. ನಗರದ ವಿವಿಧೆಡೆಯೂ ಒಬಾಮ ಕುರ್ಚಿ, ಹ್ಯಾಂಡ್ ಬ್ಯಾಗ್, ಕರ್ಚಿಫ್‌ಗೆ ಭಾರೀ ಬೇಡಿಕೆ ಬಂದಿದೆಯಂತೆ.