ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೆಸ್ಸೆಸ್ ವಿರುದ್ಧ ಬೀದಿಗಿಳಿಯಿರಿ: ಆಕ್ರೋಶಿತ ಕಾಂಗ್ರೆಸ್ ಕರೆ
(RSS | Sudarshan K S | Sonia Gandhi | CIA | Congress)
ಆರೆಸ್ಸೆಸ್ ವಿರುದ್ಧ ಬೀದಿಗಿಳಿಯಿರಿ: ಆಕ್ರೋಶಿತ ಕಾಂಗ್ರೆಸ್ ಕರೆ
ನವದೆಹಲಿ, ಶುಕ್ರವಾರ, 12 ನವೆಂಬರ್ 2010( 13:21 IST )
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೈವಾಡವಿದೆ, ಆಕೆ ಸಿಐಎ ಏಜೆಂಟ್ ಎಂದು ಜರೆದಿರುವ ಆರೆಸ್ಸೆಸ್ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಹೇಳಿಕೆಯಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್, ಯಾರು ಕೂಡ ಮುಂದೆಂದೂ ಈ ರೀತಿಯ ಭಾಷೆ ಉಪಯೋಗಿಸದಂತಾಗಲು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಕರೆ ನೀಡಿದೆ.
ಸುದರ್ಶನ್ ಅವರನ್ನು 'ಕೆಟ್ಟ ಮನಸ್ಥಿತಿಯ ಪಳೆಯುಳಿಕೆ' ಎಂದು ಜರೆದಿರುವ ಕಾಂಗ್ರೆಸ್, ಅವರ ಹೇಳಿಕೆಗಳು ನೈತಿಕತೆಯ ಮತ್ತು ನಾಗರಿಕತೆಯ ಎಲ್ಲ ಗಡಿಗಳನ್ನೂ ದಾಟಿದೆ ಎಂದು ಕಿಡಿ ಕಾರಿದೆ.
ಸುದರ್ಶನ್ ಹೇಳಿದ್ದೇನು... ಇಲ್ಲಿ ಕ್ಲಿಕ್ ಮಾಡಿ... ಈ ರೀತಿ ಹೇಳಿಕೆ ನೀಡಿದ್ದಕ್ಕೆ ಆರೆಸ್ಸೆಸ್ ಬೆಲೆ ತೆರಲು ಸಿದ್ಧರಾಗಿ ಎಂದು ಕರೆ ನೀಡಿರುವ ಕಾಂಗ್ರೆಸ್, ಪ್ರತಿಭಟನೆಗಳು ಕೈಮೀರಿ ಹೋದರೆ ತಾನು ಜವಾಬ್ದಾರನಲ್ಲ, ಆರೆಸ್ಸೆಸ್ಸೇ ಹೊಣೆ ಹೊರಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದೆ.
'ಕಾಂಗ್ರೆಸಿಗರು ಯಾವ ರೀತಿ ಇದನ್ನು ಪ್ರತಿಭಟಿಸಬೇಕೆಂದರೆ, ಆರೆಸ್ಸೆಸ್ ಮತ್ತೆಂದೂ ತನ್ನ ಬಾಯಿ ತೆರೆಯಬಾರದು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕರೆ ನೀಡಿದರು.
ಹೇಳಿಕೆಯಿಂದ ಆರೆಸ್ಸೆಸ್ ದೂರ... ಸುದರ್ಶನ್ ಹೇಳಿಕೆಯು ಗುರುವಾರ ಸಂಸತ್ತಿನಲ್ಲಿಯೂ ಕೋಲಾಹಲ ಎಬ್ಬಿಸಿರುವುದರಿಂದ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಆರೆಸ್ಸೆಸ್, ಸುದರ್ಶನ್ ಹೇಳಿಕೆಯಿಂದ ತನ್ನನ್ನು ಪ್ರತ್ಯೇಕಿಸಿಕೊಂಡಿದೆ. ಅದು ಆರೆಸ್ಸೆಸ್ ಅಭಿಪ್ರಾಯವಲ್ಲ, ಸುದರ್ಶನ್ ಅವರ ವೈಯಕ್ತಿಕ ಹೇಳಿಕೆ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಅವರು ಪ್ರತಿಕ್ರಿಯಿಸಿದ್ದಾರೆ.