ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಪ್ರೀಂ ಪ್ರಶ್ನೆಗಳಿಗೆ ಪ್ರಧಾನಿ ಸಿಂಗ್ ಉತ್ತರಿಸಲಿ: ಅಡ್ವಾಣಿ
(2G scam | Supreme Court | Manmohan Singh | L K Advani)
ಸುಪ್ರೀಂ ಪ್ರಶ್ನೆಗಳಿಗೆ ಪ್ರಧಾನಿ ಸಿಂಗ್ ಉತ್ತರಿಸಲಿ: ಅಡ್ವಾಣಿ
ನವದೆಹಲಿ, ಬುಧವಾರ, 17 ನವೆಂಬರ್ 2010( 15:03 IST )
ಕೆಲ ದಿನಗಳ ಹಿಂದಷ್ಟೇ ದೂರಸಂಪರ್ಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎ. ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಮನವಿಯ ಸಂಬಂಧ ಪ್ರಧಾನ ಮಂತ್ರಿ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯಕ್ಕೆ ಮನಮೋಹನ್ ಸಿಂಗ್ ಉತ್ತರಿಸಬೇಕು ಎಂದು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಒತ್ತಾಯಿಸಿದ್ದಾರೆ.
2ಜಿ ತರಂಗಾಂತರ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಡ್ವಾಣಿ, ರಾಜಾ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಕಳವಳಗಳಿಗೆ ಪ್ರಧಾನ ಮಂತ್ರಿಯವರು ತಕ್ಷಣವೇ ಪ್ರತಿಕ್ರಿಯಿಸಬೇಕು ಎಂದರು.
ಬಿಹಾರ ವಿಧಾನಸಭೆಯ ಕೊನೆಯ ಹಂತದ ಚುನಾವಣೆಯ ಪ್ರಚಾರಕ್ಕಾಗಿ ಪಾಟ್ನಾಕ್ಕೆ ತೆರಳುವ ಮೊದಲು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅಡ್ವಾಣಿ, ಹಗರಣದ ಕುರಿತು ಜಂಟಿ ಸದನ ಸಮಿತಿ ತನಿಖೆಯ ಪಟ್ಟನ್ನು ಸಡಿಸಿಸುವ ಪ್ರಶ್ನೆಯೇ ಇಲ್ಲ; ಸರಕಾರವು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು ಎಂದರು.
ಭ್ರಷ್ಟಾಚಾರವನ್ನು ದೇಶದಿಂದ ಹೊರ ದಬ್ಬಲೇಬೇಕು. ಕಳೆದ 60 ವರ್ಷಗಳ ನನ್ನ ಸಂಸದೀಯ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಇಂತಹ ಪ್ರಶ್ನೆಯನ್ನು ಎತ್ತಿರುವುದು ನನಗೆ ನೆನಪಿಗೆ ಬರುತ್ತಿಲ್ಲ ಎಂದು ಸರಕಾರದ ಕಾರ್ಯನಿರ್ವಹಣೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.
2ಜಿ ತರಂಗಾಂತರ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು 2008ರಲ್ಲೇ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿಯವರು ಪ್ರಧಾನಿಯವರಿಗೆ ದೂರು ಸಲ್ಲಿಸಿದ್ದರೂ, ಈ ಸಂಬಂಧ ಪ್ರಧಾನಿ ಯಾವ ಕಾರಣಕ್ಕೆ ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿನ್ನೆ ಪ್ರಶ್ನಿಸಿತ್ತು.
ಅತ್ತ ಹೇಳಿಕೆ ನೀಡಿರುವ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು, 2ಜಿ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸೇರಿದಂತೆ ಹಲವು ವಿಪಕ್ಷಗಳು ಹಗರಣದ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿವೆ. ಆದರೂ ಸರಕಾರ ನಕಾರಾತ್ಮಕ ಪ್ರತಿಕ್ರಿಯೆ ತೋರಿಸುತ್ತಿದೆ. ಈಗ ಸುಪ್ರೀಂ ಕೋರ್ಟ್ ಕೂಡ ಈ ಕುರಿತು ಪ್ರಶ್ನಿಸಿರುವುದರಿಂದ ಸರಕಾರ ಈಗಲಾದರೂ ಬೇಡಿಕೆಗೆ ಮಣಿಯಬೇಕು ಎಂದು ನಾಯ್ಡು ತಿಳಿಸಿದರು.