ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಯಸ್ಕರ 'ಬಿಗ್ ಬಾಸ್' ನಿಷೇಧಕ್ಕೆ ಹೈಕೋರ್ಟ್ ತಡೆಯಾಜ್ಞೆ
(Bigg Boss 4 | Rakhi Ka Insaaf | IB Ministry | Rakhi Sawanth)
ಸಾರ್ವಜನಿಕರ, ಸಭ್ಯ ನಾಗರಿಕರ ತೀವ್ರ ಟೀಕೆಗೆ ಗುರಿಯಾಗಿದ್ದ ರಿಯಾಲಿಟಿ ಶೋಗಳ ಮೇಲೆ ಕೇಂದ್ರ ಸರಕಾರ ಹೇರಿದ ನಿರ್ಬಂಧ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, 'ಬಿಗ್ ಬಾಸ್-4' ತಡೆಯಾಜ್ಞೆ ಪಡೆದುಕೊಂಡು ಬೀಗಿದೆ.
ನಿನ್ನೆಯಷ್ಟೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಲರ್ಸ್ ಚಾನೆಲ್‌ನ 'ಬಿಗ್ ಬಾಸ್-4' ಮತ್ತು ಎನ್‌ಡಿಟಿವಿ ಇಮ್ಯಾಜಿನ್ ಚಾನೆಲ್‌ನ 'ರಾಖಿ ಕಾ ಇನ್ಸಾಫ್' ರಿಯಾಲಿಟಿ ಕಾರ್ಯಕ್ರಮಗಳ ಮೇಲೆ ಪ್ರೈಮ್ ಟೈಮ್ ನಿರ್ಬಂಧ ಹೇರಿತ್ತು.
ಅಸಭ್ಯ ದೃಶ್ಯಗಳು ಮತ್ತು ಅಶ್ಲೀಲ ಭಾಷೆಗಳು ಕಾರ್ಯಕ್ರಮದಲ್ಲಿರುವುದರಿಂದ, ಇದು ಮಕ್ಕಳಿಗೆ ವೀಕ್ಷಣೆಗೆ ಯೋಗ್ಯವಾದುದಲ್ಲ. ಹಾಗಾಗಿ ರಾತ್ರಿ 11ರಿಂದ ಬೆಳಿಗ್ಗೆ 5ರ ನಡುವೆ ಮಾತ್ರ ಪ್ರಸಾರ ಮಾಡಬೇಕು, ಇದರ ಮರು ಪ್ರಸಾರ ಕೂಡ ಸಲ್ಲದು ಎಂದು ಸುದ್ದಿವಾಹಿನಿಗಳು ಸಹಿತ, ಎಲ್ಲಾ ಚಾನೆಲ್‌ಗಳಿಗೂ ಕಟ್ಟುನಿಟ್ಟಿನ ಆದೇಶ ಹೊರಟಿಸಿತ್ತು.
ಇದರ ವಿರುದ್ಧ ಕಲರ್ಸ್ ಚಾನೆಲ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ ಸೋಮವಾರದವರೆಗೆ ಸರಕಾರದ ಆದೇಶಕ್ಕೆ ತಡೆಯಾಜ್ಞೆ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ. ಹಾಗಾಗಿ ಮೂರು ದಿನಗಳ ಕಾಲ ಯಾವುದೇ ಅಡೆತಡೆಗಳಿಲ್ಲದೆ ಯಾವುದೇ ಹೊತ್ತಿನಲ್ಲಿ ಬೇಕಾದರೂ 'ಬಿಗ್ ಬಾಸ್-4' ಕಾರ್ಯಕ್ರಮವನ್ನು ಪ್ರಸಾರ ಮಾಡಬಹುದಾಗಿದೆ.
ಸೋಮವಾರ ಪ್ರಕರಣವನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾಯಾಲಯವು ಕೇಂದ್ರ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಇಂದಿನಿಂದ ಕಾರ್ಯಕ್ರಮ ಎಂದಿನಂತೆ ಪ್ರೈಮ್ ಟೈಮ್ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ.
ರಾತ್ರಿ 11ರ ನಂತರ ಬೆಳಿಗ್ಗೆ 5ರ ನಡುವೆ ಮಾತ್ರ ಪ್ರಸಾರ ಮಾಡಬೇಕೆಂದು ಸರಕಾರ ಆದೇಶ ನೀಡಿದ್ದರೂ, ಹಾಲಿವುಡ್ ನಟಿ ಪಮೇಲಾ ಆಂಡರ್ಸನ್ ಮೂರು ದಿನಗಳ ಕಾಲ ನಿನ್ನೆಯಿಂದ ಪಾಲ್ಗೊಂಡಿರುವ 'ಬಿಗ್ ಬಾಸ್-4' ಕಾರ್ಯಕ್ರಮವನ್ನು ನಿನ್ನೆ ನಿಗದಿಯಂತೆ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರ ಮಾಡಲಾಗಿತ್ತು. ಇಂದು ಬೆಳಿಗ್ಗೆ ಚಾನೆಲ್ ಕೋರ್ಟ್ ಮೊರೆ ಹೋಗಿತ್ತು.
ಐಟಂ ಹುಡುಗಿ ರಾಖಿ ಸಾವಂತ್ ನಡೆಸಿಕೊಡುತ್ತಿರುವ ಎನ್‌ಡಿಟಿವಿ ಇಮ್ಯಾಜಿನ್ ಚಾನೆಲ್‌ನ 'ರಾಖಿ ಕಾ ಇನ್ಸಾಫ್' ಕಾರ್ಯಕ್ರಮದ ಆಯೋಜಕರು ಇದುವರೆಗೆ ನ್ಯಾಯಾಲಯಕ್ಕೆ ಹೋಗಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ.