ನಮ್ಮ ಸಮಾಜವು ಗಂಡ-ಹೆಂಡತಿ ಸಂಬಂಧವನ್ನು ಪವಿತ್ರ ಎಂದು ಪರಿಗಣಿಸುತ್ತದೆ. ಈ ಸಂಬಂಧವನ್ನು ಕಟ್ಟಲು ಮದುವೆ ಎಂಬ ಧಾರ್ಮಿಕ ಲೇಪನವುಳ್ಳ ಸಮಾರಂಭವನ್ನು ಏರ್ಪಡಿಸಲಾಗುತ್ತದೆ. ಅದುವರೆಗೆ ಬಹುತೇಕ ಅಪರಿಚಿತರಾಗಿದ್ದ ಎರಡು ಜೀವಗಳನ್ನು ಗುರು-ಹಿರಿಯರ ಆಶೀರ್ವಾದದ ನಂತರ ನಾಲ್ಕು ಗೋಡೆಗಳ ನಡುವೆ ಅಧಿಕೃತವಾಗಿ ಬಿಡಲಾಗುತ್ತದೆ.
ಇದನ್ನು ಯಾರೊಬ್ಬರೂ ಪ್ರಶ್ನಿಸಲಾರರು. ಅದು ಸಕ್ರಮ ಸಂಬಂಧ. ಆದರೆ ಇಲ್ಲಿ ಎಷ್ಟು ಜೋಡಿ ಸಫಲವಾಗುತ್ತವೆ? ಅವರ ಜೀವನ ಹೇಗಿರುತ್ತದೆ ಮತ್ತು ಹೇಗಿರಬೇಕು ಎನ್ನುವುದನ್ನು ತಿಳಿದುಕೊಂಡು, ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕಾಗಿರುವುದು ಜವಾಬ್ದಾರಿಯುತ ಸಮಾಜದ ಪ್ರತಿಯೊಬ್ಬರ ಕರ್ತವ್ಯವಲ್ಲವೇ?
ಇಲ್ಲಿ ಪ್ರಶ್ನೆಗಳು ವಿಚಿತ್ರವಾಗಿರಬಹುದು, ಆದರೆ ಇದು ನಮ್ಮ-ನಿಮ್ಮೆಲ್ಲರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಅಪರಿಚಿತವಲ್ಲದ ವಿಚಾರದ ಪ್ರಸ್ತಾವನೆ. ಲೈಂಗಿಕತೆ ಎನ್ನುವುದು ಅಷ್ಟೊಂದು ಅಪರಿಚಿತವಾಗಿ ಉಳಿದಿರುತ್ತಿದ್ದರೆ, ಇಂದು ನಾವು-ನೀವೆಲ್ಲ ಜನ್ಮ ತಾಳುವುದು ಸಾಧ್ಯವಿರಲಿಲ್ಲ. ಈ ಸಮಾಜ ಇಷ್ಟೊಂದು ಆರೋಗ್ಯಪೂರ್ಣವಾಗಿ ಸಾಗಲು ಸಾಧ್ಯವಾಗುತ್ತಿರಲಿಲ್ಲ.
ಶುಕ್ರವಾರ ನಿಮ್ಮ ವೆಬ್‌ದುನಿಯಾವು ಈ ಸಂಬಂಧ 'ಇಂಡಿಯಾ ಟುಡೇ' ನಡೆಸಿದ 'ಸೆಕ್ಸ್ ಸಮೀಕ್ಷೆ 2010'ರ ಮೊದಲ ಭಾಗವನ್ನು ಪ್ರಕಟಿಸಿತ್ತು. ಇಂದು ಅದರ ಮುಂದುವರಿದ ಭಾಗವನ್ನು ಪ್ರಕಟಿಸಲಾಗಿದೆ. ಇದು ಸಮಾಜದ, ನಮ್ಮ ಕೈಪಿಡಿ ಎಂದು ಪ್ರಜ್ಞಾವಂತರು ಅರಿತರೆ ಅದಕ್ಕಿಂತ ಮಿಗಿಲಾದ ಸಂತಸ ಬೇರಿರಲಾರದು. ಏನಂತೀರಿ?
WD
ಲೈಂಗಿಕ ತೃಪ್ತಿ ನಿಮ್ಮ ಹಕ್ಕೇ? ನಿಮ್ಮ ಸಂಗಾತಿಯಿಂದ ಸಂತೃಪ್ತಿ ಹೊಂದುವುದು ನಿಮ್ಮ ಹಕ್ಕೆಂದು ನೀವು ಭಾವಿಸಿದ್ದೀರಾ ಎಂದು ಮಹಿಳೆಯರಲ್ಲಿ ಪ್ರಶ್ನಿಸಲಾಗಿತ್ತು. ಇಲ್ಲಿ 'ಖಂಡಿತಾ' ಎಂದವರು ಶೇ.42, ಹೌದಾಗಿರಬಹುದು ಎಂದವರು ಶೇ.26, ಬಹುಶಃ ಆಗಿರಲಿಕ್ಕಿಲ್ಲ ಎಂದವರು ಶೇ.3 ಮತ್ತು ಖಂಡಿತಾ ಅಲ್ಲ ಎಂದು ಶೇ.3 ಸ್ತ್ರೀಯರು ಹೇಳಿದ್ದಾರೆ.
ಅವರಿಗೆ ಎಲ್ಲಾ ಗೊತ್ತಾಗುತ್ತಾ? ನಿಮ್ಮ ಗಂಡ ಅಥವಾ ಸಂಗಾತಿ ನಿಮ್ಮ ಲೈಂಗಿಕ ಅವಶ್ಯಕತೆಗಳನ್ನು ಸಮರ್ಥವಾಗಿ ಗ್ರಹಿಸಿ ಸ್ಪಂದಿಸುತ್ತಿದ್ದಾರೆಯೇ ಎನ್ನುವುದಕ್ಕೆ ಅಚ್ಚರಿಯೆಂಬಂತೆ ಶೇ.76ರಷ್ಟು ಮಹಿಳೆಯರು, 'ಹೌದು' ಎಂದಿದ್ದಾರೆ. ಶೇ.12 ಮಂದಿ ಮಾತ್ರ 'ಇಲ್ಲ' ಎಂದು ಹೇಳಿದ್ದಾರೆ. ಹೈದರಾಬಾದ್ ನಗರವೊಂದನ್ನೇ ಗಮನಕ್ಕೆ ತೆಗೆದುಕೊಂಡರೆ, ಇಲ್ಲಿನ ಶೇ.27 ಪುರುಷರು ಮತ್ತು ಮಹಿಳೆಯರು ತಮ್ಮ ಲೈಂಗಿಕ ಅವಶ್ಯಕತೆಗಳನ್ನು ಸಂಗಾತಿ ಸೂಕ್ಷ್ಮವಾಗಿ ಗ್ರಹಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀವು ಸೆಕ್ಸ್ ಮಾಡೋದು ಯಾಕೆ? ಸಂಗಾತಿಯ ಜತೆ ರತಿಕ್ರೀಡೆಯಲ್ಲಿ ತೊಡಗಲು ನೀವು ನೀಡುವ ಕಾರಣವೇನು ಎಂಬ ಪ್ರಶ್ನೆಗಂತೂ ನಿರಾಸೆಯ ಉತ್ತರಗಳು ಬಂದಿವೆ. ಸೆಕ್ಸ್ ಎನ್ನುವುದು ಕೊಡು-ಕೊಳ್ಳುವಿಕೆಯ ಜೀವನ ವ್ಯವಹಾರವಾದರೂ, ತಮ್ಮ ಸಂಗಾತಿಯ ಸಂತೋಷಕ್ಕಾಗಿ ನಾವು ಸೆಕ್ಸ್ ಮಾಡುತ್ತೇವೆ ಎಂದು ಶೇ.33ರಷ್ಟು ಮಹಿಳೆಯರು ಹೇಳಿಕೊಂಡಿದ್ದಾರೆ.
ಶೇ.28ರಷ್ಟು ಮಂದಿ ಮಾತ್ರ ಜೀವನವನ್ನು ಅನುಭವಿಸಲು, ಸಂಭ್ರಮದಿಂದಿರಲು ಸೆಕ್ಸ್ ಮಾಡುತ್ತೇವೆ ಎಂದರೆ, ತನ್ನ ಸ್ವಂತ ಸುಖಕ್ಕಾಗಿ ಸೇರುತ್ತೇವೆ ಎಂದು ಶೇ.11 ಮಂದಿ ಹೇಳಿದ್ದಾರೆ. ಸೆಕ್ಸ್ ಮಾಡೋದೇ ಮಕ್ಕಳನ್ನು ಪಡೆಯಲು ಎಂದವರು ಶೇ.10 ಮಹಿಳೆಯರು. ಸಂತೋಷ ಕಂಡುಕೊಳ್ಳಲು ಹಾದಿಗಳೇನಿವೆ ಎಂಬುದನ್ನು ಹುಡುಕುವ ಯತ್ನ ನಮ್ಮದು ಎಂದವರು ಶೇ.9.
ಎಲ್ಲಿ, ಯಾವಾಗ ಮಾಡ್ತೀರಿ? ಶೇ.60ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ತಾವು ರಾತ್ರಿ ಹೊತ್ತು ಮುಚ್ಚಿದ ಬಾಗಿಲಿನ ನಮ್ಮ ಬೆಡ್‌ರೂಮಿನಲ್ಲಿ ಕಾಮನ ಹಬ್ಬ ಮಾಡುತ್ತೇವೆ ಎಂದಿದ್ದಾರೆ. ಈ ವಿಭಾಗದಲ್ಲಿ ಮಹಿಳೆಯರ ಪಾಲು ಶೇ.65. ಎಲ್ಲಾದರೂ, ಯಾವ ಹೊತ್ತಿಗಾದರೂ ಓಕೆ ಎಂದು ಹೇಳಿದವರು ಶೇ.14. ಸೂರ್ಯ ಬರುವ ಮೊದಲು, ಮುಂಜಾನೆ ಹೊತ್ತಿಗೆ ಎಂದು ಶೇ.4 ಹಾಗೂ ಅಪರಾಹ್ನ ಸೂರ್ಯ ಕಳಚಿಕೊಳ್ಳುವ ಹೊತ್ತಿಗೆ ಎಂದು ಶೇ.3 ಮಹಿಳೆಯರು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
WD
ಭಾವನಾತ್ಮಕವಾಗಿ ಸುರಕ್ಷಿತರೇ? ನೀವು ನಿಮ್ಮ ಗಂಡನ ಜತೆ ಭಾವನಾತ್ಮಕವಾಗಿ ಸುರಕ್ಷಿತರಿದ್ದೀರಿ ಎಂದು ಭಾವಿಸಿದ್ದೀರಾ? 'ಯಸ್' ಎಂದವರು ಶೇ.76, 'ನೋ' ಎಂದವರು ಶೇ.13. ಪಾಟ್ನಾದಲ್ಲಂತೂ ಶೇ.93 ಮಂದಿ ಮಹಿಳೆಯರು ತಾವು ಅಭೇದ್ಯ ಭಾವನಾತ್ಮಕ ಕೋಟೆಯಲ್ಲಿದ್ದೇವೆ ಎಂದಿದ್ದಾರೆ. ಇಲ್ಲಿ ಶೇ.29 ಬೆಂಗಳೂರಿಗರು ತಮ್ಮ ಅಸಮಾಧಾನವಿರುವುದನ್ನು ಹೊರ ಹಾಕಿದ್ದಾರೆ.
ಇನ್ನೂ ಪ್ರಗತಿ ಸಾಧ್ಯವೇ? ನಿಮ್ಮ ಸಂಗಾತಿಯ ಭಾವನಾತ್ಮಕ ಅಗತ್ಯಗಳಿಗೆ ಸೂಕ್ತವಾಗಿ ಸ್ಪಂದಿಸಿದರೆ, ಅವಶ್ಯಕತೆಗಳನ್ನು ಪೂರೈಸಿದರೆ ನಿಮ್ಮ ಲೈಂಗಿಕ ಜೀವನ ಇನ್ನಷ್ಟು ಸುಧಾರಿಸಬಹುದು ಎಂದು ಕೊಂಡಿದ್ದೀರಾ ಎಂದರೆ, ಹೌದು ಎಂದು ಶೇ.38 ಮಹಿಳೆಯರು, ಇಲ್ಲ ಎಂದು ಶೇ.3 ಹಾಗೂ ಈ ಬಗ್ಗೆ ಯಾವುದೇ ಖಚಿತತೆಯಿಲ್ಲ ಎಂದು ಶೇ.30 ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.
ಭಾವನಾತ್ಮಕ ಸುರಕ್ಷತೆಯೆಂದರೆ? ನಿಮ್ಮ ಪ್ರಕಾರ ಭಾವನಾತ್ಮಕ ಸುರಕ್ಷತೆ ಎಂದರೆ ಏನು? ಪರಸ್ಪರ ಅರ್ಥ ಮಾಡಿಕೊಳ್ಳುವುದು ಮತ್ತು ಗೌರವಿಸುವುದು ಎಂದು ಶೇ.16, ಏನೂ ಇಲ್ಲ ಬದನೆಕಾಯಿ ಎಂದು ಶೇ.15, ಒಂದು ಸುಂದರ ಜೀವನ ಎಂದು ಶೇ.5, ಪರಸ್ಪರ ವಿಶ್ವಾಸ ಇಟ್ಟುಕೊಳ್ಳುವುದು ಎಂದು ಶೇ.2 ಹಾಗೂ ಸುರಕ್ಷಿತ ಲೈಂಗಿಕ ಸಂಪರ್ಕ ಎಂದು ಶೇ.1 ಮಹಿಳೆಯರು ಹೇಳಿದ್ದಾರೆ.
ವಿವಾಹೇತರ ಸಂಬಂಧಕ್ಕಿದು ಸಮವೇ? ಭಾವನಾತ್ಮಕವಾಗಿ ಸ್ಪಂದಿಸದೇ ಇರುವುದು ಅಥವಾ ಸಂಗಾತಿಯ ನವಿರು ಭಾವನೆಗಳನ್ನು ಗೌರವಿಸದೇ ಇರುವುದು, ನಿರ್ಲಕ್ಷ್ಯ ಮಾಡುವುದು -- ಇವೆಲ್ಲ ವಿವಾಹೇತರ ಸಂಬಂಧಕ್ಕೆ ಸರಿ ಸಮಾನಾದ ವಿಚಾರವೆಂದು ನೀವು ಭಾವಿಸುತ್ತೀರಾ ಎಂದರೆ, ಹೌದು ಎಂದು ಶೇ.38 ಹಾಗೂ ಅಲ್ಲ ಎಂದು ಶೇ.34 ಮಹಿಳೆಯರು ತಿಳಿಸಿದ್ದಾರೆ.
ಮೊದಲು ಸೆಕ್ಸ್ ಮಾಡಿದ್ದು ಯಾವಾಗ? ಯಾವ ವಯಸ್ಸಿನಲ್ಲಿ ಮೊದಲ ಬಾರಿ ಸೆಕ್ಸ್ ಅನುಭವ ನಿಮಗಾಯಿತು? 20ರ ನಂತರ ಎಂದು ಶೇ.47, ಹದಿಹರೆಯದಲ್ಲಿ ಎಂದು ಶೇ.20, 30ರ ನಂತರ ಎಂದು ಶೇ.5 ಹಾಗೂ ಬಾಲ್ಯದಲ್ಲೇ ಎಂದವರು ಶೇ.1. ಅಚ್ಚರಿಯ ವಿಚಾರವೆಂದರೆ ತಾವಿನ್ನೂ ಕನ್ಯೆಯರು ಎಂದು ಶೇ.25 ಮಹಿಳೆಯರು ಹೇಳಿಕೊಂಡಿರುವುದು. ಹೈದರಾಬಾದಿನಲ್ಲಂತೂ ಶೇ.38 ಮಹಿಳೆಯರು, ತಾವು ಹದಿಹರೆಯದಲ್ಲೇ ಮೊದಲ ಬಾರಿ ಸೆಕ್ಸ್ ಮಾಡಿದ್ದೆವು ಎಂದಿದ್ದಾರೆ.
ವಿವಾಹಪೂರ್ವ ಸಂಬಂಧದ ಬಗ್ಗೆ? ವಿವಾಹಪೂರ್ವ ಸಂಬಂಧದ ಬಗ್ಗೆ ನೀವೇನು ಹೇಳುತ್ತೀರಿ, ಇದು ಸರಿಯೋ-ತಪ್ಪೋ? ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಶೇ.45 ಮಂದಿ ಖಡಾಖಂಡಿತವಾಗಿ ಹೇಳಿದ್ದಾರೆ. ಸರಿಯಲ್ಲ ಎಂದವರು ಶೇ.19, ಅಷ್ಟೇನೂ ಸಮಸ್ಯೆಯಿಲ್ಲ ಎಂದವರು ಶೇ.10, ಮಾಡಿದ್ರೇನು ಎಂದು ಶೇ.10 ಹಾಗೂ ಶೇ.9 ಮಹಿಳೆಯರು ಯಾವುದನ್ನೂ ಒಪ್ಪಲು ನಿರಾಕರಿಸಿದ್ದಾರೆ. ಶೇ.28ರಷ್ಟು ಪುರುಷರು ಮಾತ್ರ ವಿವಾಹ ಪೂರ್ವ ಸಂಬಂಧ ಸರಿಯಲ್ಲ ಎಂದು ಹೇಳಿರುವುದು ಇಲ್ಲಿ ಗಮನಾರ್ಹ.
ನಿಮ್ಮ ಇಷ್ಟದ ಭಂಗಿ? ಲೈಂಗಿಕ ಜೀವನದಲ್ಲಿನ ಏಕತಾನತೆಯನ್ನು ಹೋಗಲಾಡಿಸಲು, ಬೋರ್ ಹೊಡೆಸದೇ ಇರಲು ಮತ್ತು ಬೇಲಿ ಹಾರದೇ ಇರಲು ಭಿನ್ನ ಭಂಗಿಗಳಲ್ಲಿ ಯತ್ನಿಸುವ ಅಗತ್ಯ ಹೆಚ್ಚಿದೆ ಎಂದು ಲೈಂಗಿಕ ತಜ್ಞರೇ ಹೇಳುತ್ತಾರೆ. ಆದರೆ ಮಹಿಳೆಯರು ಈ ವಿಚಾರದಲ್ಲಿ ತಮಗೆ ಸ್ವಾತಂತ್ರ್ಯವಿಲ್ಲ ಎಂಬ ರೀತಿಯಲ್ಲೇ ಇನ್ನೂ ಮುಂದುವರಿದಿದ್ದಾರೆ.
ಇದಕ್ಕೆ ಸಿಗುವ ವಾಸ್ತವಿಕ ಅಂಶವೆಂದರೆ ಸಾಮಾನ್ಯ ಭಂಗಿಯನ್ನೇ (ಪುರುಷ ಮೇಲಿರುವುದು) ಮಹಿಳೆಯರು ಹೆಚ್ಚು (ಶೇ.61) ಇಷ್ಟಪಡುತ್ತಿರುವುದು. ಇದಕ್ಕೆ ವಿರುದ್ಧವಾದ ಭಂಗಿಯನ್ನು (ಮಹಿಳೆ ಮೇಲೆ) ಶೇ.11 ಮಂದಿ ಮಾತ್ರ ತಮಗಿಷ್ಟ ಎಂದಿದ್ದಾರೆ. ಪಾರ್ಶ್ವದಿಂದ ಎಂದು ಶೇ.6, ಹಿಂಬದಿಯಿಂದ ಎಂದು ಶೇ.4 ಹಾಗೂ ಕುಳಿತ ಭಂಗಿಯಲ್ಲಿ ಎಂದು ಶೇ.2 ಮಹಿಳೆಯರು ಹೇಳಿಕೊಂಡಿದ್ದಾರೆ.
ಲೈಂಗಿಕ ಭ್ರಮೆಗಳು, ಕಲ್ಪನೆಗಳಿವೆಯೇ? ಶೇ.35 ಮಹಿಳೆಯರು ಹೌದು ಎಂದಿದ್ದರೆ, ಶೇ.52 ಮಂದಿ ಇಲ್ಲ ಎಂದಿದ್ದಾರೆ. ಇಲ್ಲಿ ವಯಸ್ಸಿನ ಅಂತರಗಳನ್ನು ಪರಿಗಣಿಸಿದರೆ, 18-25ರ ನಡುವಿನ ಶೇ.34 ಮಹಿಳೆಯರಲ್ಲಿ ಹಾಗೂ 35-40ರ ನಡುವಿನ ಶೇ.41 ಮಹಿಳೆಯರಲ್ಲಿ ಲೈಂಗಿಕ ಕನಸುಗಳಿವೆ. ಇಲ್ಲಿ ಅಚ್ಚರಿಯ ವಿಚಾರ ಸಿಗುವುದು ಮೇಲೆ ಹೇಳಿದ ಎರಡೂ ವಯಸ್ಸಿನ ಶೇ.74 ಪುರುಷರು ಸೆಕ್ಸ್ ಫ್ಯಾಂಟಸಿಗಳನ್ನು ಹೊಂದಿದ್ದೇವೆ ಎಂದು ಹೇಳಿರುವುದು.
ಮುನ್ನೊಲಿವಿನ ಪ್ರಮಾಣ? ಮಂಚದಾಟ ಆರಂಭಕ್ಕೂ ಮೊದಲು ಮುನ್ನೊಲಿವು ಅಥವಾ ಲೈಂಗಿಕ ಚೇಷ್ಟೆಗಳಲ್ಲಿ ತೊಡಗಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಶೇ.58 ಮಂದಿ ಹೌದು ಎಂದಿದ್ದಾರೆ. ಶೇ.21 ಮಹಿಳೆಯರು ಇಲ್ಲ ಎಂದು ಉತ್ತರಿಸಿದ್ದಾರೆ. ಬೆಂಗಳೂರಿನ ಶೇ.49 ಮಹಿಳೆಯರು ತಾವು ರೊಮ್ಯಾನ್ಸ್ ಬಿಟ್ಟು, ನೇರವಾಗಿ ಆಟ ಮುಗಿಸುತ್ತೇವೆ ಎಂದಿದ್ದಾರೆ. ಇಲ್ಲಿ ನಂತರದ ಎರಡು ಸ್ಥಾನ ಕೊಲ್ಕತ್ತಾ (ಶೇ.43) ಮತ್ತು ದೆಹಲಿ (ಶೇ.41) ಪಾಲಾಗಿವೆ.
ಯಾರ ಜತೆ ಸೆಕ್ಸ್ ಇಷ್ಟ? ಯಾವ ಚಿತ್ರ ನಟ ಅಥವಾ ನಟಿ ಜತೆ ಸೆಕ್ಸ್ ಮಾಡುವ ಕಲ್ಪನೆಯನ್ನು ಮಾಡಲು ನೀವು ಇಚ್ಛಿಸುತ್ತೀರಿ ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು. ಮಹಿಳೆಯರ ಸಾಲಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ಸಲ್ಮಾನ್ ಖಾನ್ (ಶೇ.3). ನಂತರದ ಸ್ಥಾನಗಳಲ್ಲಿ ಶಾರೂಖ್ ಖಾನ್ (ಶೇ.2), ಅಕ್ಷಯ್ ಕುಮಾರ್ (ಶೇ.1) ಮತ್ತು ರಣಬೀರ್ ಕಪೂರ್ (ಶೇ.1) ಕಾಣಿಸಿಕೊಂಡಿದ್ದಾರೆ.
ಪುರುಷರಲ್ಲಿ ಈ ಪ್ರಶ್ನೆಗೆ ಕತ್ರಿನಾ ಕೈಫ್ (ಶೇ.7) ಅವರಿಗೆ ಗರಿಷ್ಠ ಒಲವು ವ್ಯಕ್ತವಾಗಿದೆ. ಐಶ್ವರ್ಯಾ ರೈ (ಶೇ.6), ಕರೀನಾ ಕಪೂರ್ (ಶೇ.3) ಮತ್ತು ಸಾನಿಯಾ ಮಿರ್ಜಾ (ಶೇ.3) ಜತೆಗೂ ಸೆಕ್ಸ್ ಮಾಡುವ ಕಲ್ಪನೆಯಲ್ಲಿ ತಾವು ವಿಹರಿಸುತ್ತೇವೆ ಎಂಬ ಉತ್ತರಗಳು ಬಂದಿವೆ.
(ಇಲ್ಲಿ ವ್ಯಕ್ತಿಗತವಾಗಿ ನೂರಾರು ಸೆಲೆಬ್ರಿಟಿಗಳನ್ನು ಹೆಸರಿಸಿರುವುದರಿಂದ ಅಗ್ರ ಸ್ಥಾನ ಪಡೆದವರನ್ನು ಮಾತ್ರ ಹೆಸರಿಸಲಾಗಿದೆ)
ನೀವು ಸಲಿಂಗರತಿಯನ್ನು ಒಪ್ಪುವಿರಾ? ಸಲಿಂಗಕಾಮ ಈಗ ಅಪರೂಪದ ಸುದ್ದಿಯಲ್ಲ. ನಮ್ಮ ಸುತ್ತಮುತ್ತ ಅಥವಾ ನಮ್ಮಲ್ಲೇ ಹಲವರು ಸಲಿಂಗಕಾಮಿಗಳಾಗಿರಬಹುದು. ಸಲಿಂಗಕಾಮವನ್ನು ಒಪ್ಪುವಿರಾ ಎಂಬ ಪ್ರಶ್ನೆಯೊಂದು ಬಂದಾಗ ಶೇ.13 ಮಹಿಳೆಯರು 'ಹೌದು' ಎಂದರೆ, ಶೇ.87 ಮಹಿಳೆಯರು 'ಇಲ್ಲ' ಎಂದಿದ್ದಾರೆ.
IFM
ಈ ಪಟ್ಟಿಯಲ್ಲಿ ಮುಂಬೈ ನಿರೀಕ್ಷೆಯಂತೆ ಅಗ್ರ ಸ್ಥಾನ ಪಡೆದಿದೆ. ಶೇ.28 ಮಹಿಳೆಯರು ಸಲಿಂಗರತಿ ಓಕೆ ಎಂದಿದ್ದಾರೆ. ನಂತರದ ಸ್ಥಾನ ಶೇ.22ರೊಂದಿಗೆ ಲಕ್ನೋ ಹಾಗೂ ಶೇ.19ರೊಂದಿಗೆ ಕೊಲ್ಕತ್ತಾಕ್ಕೆ ಲಭಿಸಿದೆ.
ನಿಮ್ಮ ಸಲಿಂಗರತಿ ಯಾರೊಂದಿಗೆ? ನೀವು ಯಾರ ಜತೆಗೆ ಸಲಿಂಗ ಸಂಬಂಧ ಹೊಂದಿದ್ದೀರಿ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಸಹಪಾಠಿ ಜತೆಗೆ ಎಂದು ಶೇ.30, ಗೆಳತಿಯ ಜತೆಗೆಂದು ಶೇ.27, ಸಂಬಂಧಿ ಜತೆಗೆಂದು ಶೇ.11, ಅಪರಿಚಿತಳ ಜತೆಗೆ ಎಂದು ಶೇ.5 ಮಂದಿ ಮಹಿಳೆಯರು ಹೇಳಿದ್ದಾರೆ. ಶೇ.28 ಮಂದಿ ನಕಾರ ಸೂಚಿಸಿದ್ದಾರೆ.
ನಿಮ್ಮ ಸಂಗಾತಿ ಬೈಸೆಕ್ಸುವಲ್ ಆಗಿದ್ರೆ? ನಿಮ್ಮ ಸಂಗಾತಿ ಬೈಸೆಕ್ಸುವಲ್ (ಸಲಿಂಗಕಾಮ ಮತ್ತು ವಿರುದ್ಧ ಲಿಂಗಿಯ ಜತೆಗೆ ಸೆಕ್ಸ್ ಮಾಡುವವರು) ಆಗಿದ್ದಲ್ಲಿ ನೀವೇನು ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಈ ಕುರಿತು ಗಂಡನ ಜತೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಶೇ.27, ಇಂತಹ ಅಸುರಕ್ಷಿತ ಲೈಂಗಿಕ ಸಂಬಂಧವು ಅಪಾಯ ಹೊಂದಿದೆ ಎಂದು ತಿಳಿ ಹೇಳುತ್ತೇವೆ ಎಂದು ಶೇ.26, ದಾಂಪತ್ಯವನ್ನೇ ಮುರಿದುಕೊಳ್ಳುತ್ತೇವೆ ಎಂದು ಶೇ.9 ಮಹಿಳೆಯರು ಉತ್ತರಿಸಿದ್ದಾರೆ.