ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ ಕೋಲಾಹಲ; ಸಂಸತ್ ಅಧಿವೇಶನ ಮೊಟಕು? (Parliament | 2G scam | Congress | BJP)
Bookmark and Share Feedback Print
 
2ಜಿ ತರಂಗಾಂತರ ಹಗರಣದ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಿದ್ಧವಿಲ್ಲ. ಜೆಪಿಸಿಗೆ ನೀಡಲೇಬೇಕೆಂಬ ಪಟ್ಟಿನಿಂದ ಹಿಂದಕ್ಕೆ ಸರಿಯಲು ವಿಪಕ್ಷಗಳು ಒಪ್ಪುತ್ತಿಲ್ಲ. ಇಂತಹ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಶಮನಗೊಳಿಸುವ ಸಲುವಾಗಿ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲು ಸರಕಾರ ಚಿಂತಿಸುತ್ತಿದೆ.

ಇದನ್ನೂ ಓದಿ: ನಮ್ಮ ಪುಢಾರಿಗಳ ಪುಂಡಾಟಕ್ಕೆ 75 ಕೋಟಿ ರೂ. ಪೋಲು!

ನವೆಂಬರ್ 9ರಂದು ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ನಿಗದಿಯಂತೆ ಡಿಸೆಂಬರ್ 13ರಂದು ಕೊನೆಗೊಳ್ಳಬೇಕಿತ್ತು. ಒಟ್ಟು 24 ದಿನಗಳ ಕಾಲ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ನಡೆಯಬೇಕಿತ್ತು. ಆದರೆ ಇದುವರೆಗೆ ನೆಟ್ಟಗೆ ಒಂದು ದಿನವೂ ಕಲಾಪ ನಡೆದಿಲ್ಲ. ಪ್ರತಿದಿನ ಅಧಿವೇಶನಕ್ಕಾಗಿ ಮೀಸಲಿಡುವ 7.8 ಕೋಟಿ ರೂಪಾಯಿ ಪೋಲಾಗುತ್ತಿದ್ದರೂ, ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಕಿತ್ತಾಟವನ್ನು ಬಿಟ್ಟಿಲ್ಲ.

ಇದು ಇಂದು (ನವೆಂಬರ್ 25, ಗುರುವಾರ) ಕೂಡ ಮುಂದುವರಿದಿದೆ. 2ಜಿ ಹಗರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸದ ಹೊರತು ಕಲಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಮತ್ತಿತರ ಪಕ್ಷಗಳು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು. ಕೊನೆಗೆ ಉಭಯ ಸದನಗಳನ್ನು ಸತತ 12ನೇ ದಿನವೂ (ಕೆಲವು ವರದಿಗಳ ಪ್ರಕಾರ 10ನೇ ದಿನ) ಮುಂದೂಡಲಾಗಿದೆ.

ಬಿಜೆಪಿ, ಶಿವಸೇನೆ, ಸಂಯುಕ್ತ ಜನತಾದಳ (ಜೆಡಿಯು), ಬಿಜು ಜನತಾದಳ (ಬಿಜೆಡಿ), ಸಮಾಜವಾದಿ ಪಕ್ಷ ಮತ್ತು ಎಡಪಕ್ಷಗಳು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರೆ, ಆಡಳಿತ ಪಕ್ಷ ಕಾಂಗ್ರೆಸ್ ಕರ್ನಾಟಕದ ಬಿಜೆಪಿ ಅಧಃಪತನವನ್ನೇ ಮುಂದಿಟ್ಟುಕೊಂಡು ಪ್ರತಿಭಟಿಸಿವೆ.

ಸಂಸತ್ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಎರಡೆರಡು ಸುತ್ತಿನ ಮಾತುಕತೆಗಳನ್ನು ಸರ್ವಪಕ್ಷಗಳ ಜತೆ ನಡೆಸಿದರೂ ಸಫಲರಾಗಿಲ್ಲ. ಜೆಪಿಸಿ ತನಿಖೆಗೆ ಒಪ್ಪಲು ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಸಿದ್ಧವಿದ್ದಂತಿಲ್ಲ. ತಾವು ಸಾರ್ವಜನಿಕ ಲೆಕ್ಕ ಸಮಿತಿಯ ತನಿಖೆಗೆ ಸಿದ್ಧ ಎಂದಷ್ಟೇ ಹೇಳುತ್ತಾ ಬಂದಿದೆ.

ಹಾಗಾಗಿ ಅಧಿವೇಶವನ್ನು ಮೊಟಕುಗೊಳಿಸುವ ಸಾಧ್ಯತೆಗಳಿವೆ. ಈ ಸಂಬಂಧ ಆಡಳಿತ ಮೈತ್ರಿಕೂಟದಲ್ಲಿ ಒಲವು ಹೆಚ್ಚುತ್ತಿದೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ