ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರದಲ್ಲೂ ಪ್ರಬಲವಾಗುತ್ತಿರುವ ಬಿಜೆಪಿ, ನಿತೀಶ್‌ಗೆ ಚಿಂತೆ (Bihar Assembly Polls | Nitish Kumar | BJP | Narendra Modi)
Bookmark and Share Feedback Print
 
ಬಿಹಾರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಜಯಭೇರಿ ಬಾರಿಸಿರುವುದೇನೋ ಹೌದು. ಆದರೆ ತನ್ನ ಮಿತ್ರಪಕ್ಷ ಬಿಜೆಪಿ ಬೇರುಗಳು ಬಿಹಾರದಲ್ಲಿ ಬಲವಾಗುತ್ತಿರುವುದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಮುಂದೊಂದು ದಿನ ತನ್ನ ಸಂಯುಕ್ತ ಜನತಾದಳಕ್ಕಿಂತ ಬಿಜೆಪಿಯೇ ಜನತೆಗೆ ಹೆಚ್ಚು ಆಪ್ತವಾಗಬಹುದು ಎನ್ನುವುದು ಅವರ ಭೀತಿ.

ಇದನ್ನೂ ಓದಿ: ಬಿಹಾರ; ಬಿಜೆಪಿ-ಜೆಡಿಯು ಜಯಭೇರಿ; ಕಾಂಗ್ರೆಸ್‌ಗೆ ಮುಖಭಂಗ

ನಿನ್ನೆಯಷ್ಟೇ ಬಂದಿರುವ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪ್ರಬಲವಾಗಿರುವುದು ಸ್ಪಷ್ಟವಾಗಿದೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಾ ನಿತೀಶ್ ಚರಿಷ್ಮಾದಲ್ಲೇ ಎನ್‌ಡಿಎ (ಜೆಡಿಯು + ಬಿಜೆಪಿ) ಗೆದ್ದಿರುವುದರಲ್ಲಿ ಸಂಶಯಗಳೇ ಇಲ್ಲವಾದರೂ, ಬಿಜೆಪಿಯು ಶೇಕಡಾವಾರು ಲೆಕ್ಕದಲ್ಲಿ ಹೆಚ್ಚು ಲಾಭ ಪಡೆದುಕೊಂಡಿದೆ.

ಒಟ್ಟಾರೆ ಎನ್‌ಡಿಎ 206 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 2005ರ ಚುನಾವಣೆಯಲ್ಲಿ ಕೇವಲ 143 ಸ್ಥಾನಗಳಲ್ಲಷ್ಟೇ ಈ ಮೈತ್ರಿಕೂಟವು ಗೆಲುವು ಸಾಧಿಸಿತ್ತು. ಆಗ ಜೆಡಿಯು ಗೆದ್ದದ್ದು 88 ಸ್ಥಾನಗಳನ್ನು. ಈ ಬಾರಿ ಅದು 115ಕ್ಕೇರಿದೆ. ಅಂದರೆ 27 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿದೆ. ಇದೇನೂ ಅಲ್ಪ ಸಾಧನೆಯಲ್ಲ. ಬೀಗುವಂತದ್ದೇ.

ಆದರೆ ಐದು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳು ಕೇವಲ 55. ಈ ಬಾರಿ ಅದು ಬರೋಬ್ಬರಿ 91ಕ್ಕೇರಿದೆ. 36 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿದೆ. ಬಿಜೆಪಿ ಸ್ಪರ್ಧಿಸಿದ್ದೇ 102 ಕ್ಷೇತ್ರಗಳಲ್ಲಿ. ಅಂದರೆ ಸ್ಪರ್ಧಿಸಿದ 11 ಕ್ಷೇತ್ರಗಳಲ್ಲಿ ಮಾತ್ರ ಸೋಲುಂಡಿದೆ. ಜೆಡಿಯು ಪಾಳಯದಲ್ಲಿ (141 ಸ್ಥಾನಗಳಲ್ಲಿ ಸ್ಪರ್ಧೆ) ಇದೇ ಲೆಕ್ಕಾಚಾರವನ್ನು ನೋಡಿದರೆ 26 ಕ್ಷೇತ್ರಗಳಲ್ಲಿ ಪರಾಜಯವಾಗಿದೆ.

ಬಿಜೆಪಿ ಕಿರಿಕ್ ಮಾಡಿದರೆ ಕೊಕ್?
ಇಂತಹ ಸಾಧ್ಯತೆಗಳೂ ಇಲ್ಲದ್ದಿಲ್ಲ. ಈಗ ಜೆಡಿಯು ಮತ್ತು ಬಿಜೆಪಿಗಳು ಜತೆಯಾಗಿಯೇ ಇವೆ. ಆದರೆ ಈ ಮೈತ್ರಿಕೂಟದಲ್ಲಿ ಕಿರಿಕ್ ಏನೂ ಹೊಸತಲ್ಲ. ಮೊದಲೇ ಚೇಳು ಕುಟುಕಿದಂತಾಗಿರುವ ನಿತೀಶ್, ಬಿಜೆಪಿಯನ್ನು ಬಗ್ಗುಬಡಿಯಲು ಮುಂದಾದರೆ ಅಚ್ಚರಿಯಿಲ್ಲ. ರಾಜಕೀಯದಲ್ಲಿ ಇಂತಹ ಯಾವುದೇ ವಿಚಾರಗಳೂ ಅನಿರೀಕ್ಷಿತವೆಂದು ಹೇಳಲಾಗದು.

ಅಂತಹ ಸಂಶಯಕ್ಕಿರುವ ಪ್ರಮುಖ ಕಾರಣವೆಂದರೆ ಜೆಡಿಯು 115 ಸ್ಥಾನಗಳನ್ನು ಗೆದ್ದಿರುವುದು. ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಅಂದರೆ ಬಹುಮತಕ್ಕೆ ಬೇಕಾಗಿರುವುದು ಕೇವಲ 122 ಮಾತ್ರ. ಏಕಾಂಗಿಯಾಗಿ ಸರಕಾರ ರಚಿಸಲು ಜೆಡಿಯು ಏಳು ಸ್ಥಾನಗಳ ಕೊರತೆಯನ್ನಷ್ಟೇ ಎದುರಿಸುತ್ತಿದೆ.

ಈ ನಿಟ್ಟಿನಲ್ಲಿ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗೃಹಸಚಿವ ಪಿ. ಚಿದಂಬರಂ ಮುಂತಾದ ನಾಯಕರು ನೀಡಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ. ಒಡೆದು ಆಳುವ ನೀತಿಗೆ ಹೆಸರಾಗಿರುವ ಕಾಂಗ್ರೆಸ್, ಬಿಜೆಪಿಯನ್ನು ದೂರವಿಟ್ಟರೆ ಬೆಂಬಲ ನೀಡುತ್ತೇವೆ ಎಂದು ನಿತೀಶ್ ಕಿವಿಯೂದಲೂ ಬಹುದು. ಕೇಂದ್ರದ ಆಡಳಿತ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೆ ರಾಜ್ಯಕ್ಕೆ ಹೆಚ್ಚು ಲಾಭವಾಗಬಹುದು ಎಂಬ ನಿಟ್ಟಿನಲ್ಲಿ ನಿತೀಶ್ ಆ ಹಾದಿ ತುಳಿದರೂ ಅಚ್ಚರಿಯಿಲ್ಲ.

ಹಾಗೆಲ್ಲಾದರೂ ನಡೆದರೆ ಆಗ ಸರಕಾರಕ್ಕೆ ಬೇಕಾಗಿರುವುದು ಚಿಲ್ಲರೆ ಸ್ಥಾನಗಳು (7) ಮಾತ್ರ. ಕಾಂಗ್ರೆಸ್‌ನ ನಾಲ್ಕು ಮತ್ತು ಇತರೆ ಪಕ್ಷಗಳ ಒಂದಷ್ಟು ಸದಸ್ಯರ (8 ಇತರರಿದ್ದಾರೆ) ಬೆಂಬಲ ಪಡೆದರೆ ಸಾಕಾಗುತ್ತದೆ.

ಆದರೆ ಇಂತಹ ನಡೆಗೆ ನಿತೀಶ್ ಒಪ್ಪಿಗೆ ಸೂಚಿಸುತ್ತಾರಾ ಎನ್ನುವುದು ಮಾತ್ರ ಇಲ್ಲಿರುವ ಕುತೂಹಲ. ಇದುವರೆಗಂತೂ ಆ ರೀತಿಯ ಯಾವುದೇ ಲಕ್ಷಣಗಳನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿಲ್ಲ. ಮತ್ತೆ ಐದು ವರ್ಷಗಳ ಕಾಲ ಬಿಜೆಪಿ ಜತೆ ಆಡಳಿತ ನಡೆಸುವುದಾಗಿ ಹೇಳಿದ್ದಾರೆ.

ಮೋದಿ ಬಗ್ಗೆ ಮತ್ತೆ ಕಿತ್ತಾಟ?
ಎನ್‌ಡಿಎ ಸರಕಾರವು ತನ್ನ ಎರಡನೇ ಅವಧಿಯನ್ನು ನಾಳೆಯಿಂದ (ಶುಕ್ರವಾರ) ಅಧಿಕೃತವಾಗಿ ಆರಂಭಿಸಲಿದೆ. ನಾಳೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಪ್ರಮಾಣ ವಚನ ಸಮಾರಂಭಕ್ಕೆ ನರೇಂದ್ರ ಮೋದಿಯವರನ್ನು ಆಹ್ವಾನಿಸುತ್ತೇವೆ ಎಂದು ಬಿಜೆಪಿಯ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಆದರೆ ಅತ್ತ ಪ್ರತಿಕ್ರಿಯೆ ನೀಡಿರುವ ನಿತೀಶ್, ಪ್ರಮಾಣ ವಚನ ಸಮಾರಂಭ ಸರಳವಾಗಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಮೋದಿ, ವರುಣ್ ಗಾಂಧಿಯವರನ್ನು ಪ್ರಚಾರಕ್ಕೆ ಇಳಿಸುವ ಬಗ್ಗೆ ಚುನಾವಣೆಗೆ ಮೊದಲು ಕಿತ್ತಾಡಿಕೊಂಡಿದ್ದ ಮಿತ್ರಪಕ್ಷಗಳು, ಮೋದಿಯ ಹೊರತಾಗಿಯೂ ಬಿಹಾರದಲ್ಲಿ ಭರ್ಜರಿ ಗೆಲುವು ಸಾಧಿಸಿವೆ. ಹಾಗಾಗಿ ಮತ್ತೆ ಮೋದಿ ಪ್ರಸ್ತಾಪ ಯಾಕೆ ಎನ್ನುವುದು ಜೆಡಿಯು ಪ್ರಶ್ನೆ.
ಸಂಬಂಧಿತ ಮಾಹಿತಿ ಹುಡುಕಿ